
2023ರಿಂದ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ರಿಯಲ್ ಎಮಿಷನ್ ಪರಿಣಾಮ ಕಾರು ಉತ್ಪಾದನಾ ಕಂಪನಿಗಳು ಪರಿಸರ ಸ್ನೇಹಿ ಕಾರು ಮಾದರಿಗಳತ್ತ ಮುಖ ಮಾಡುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಕಾರಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ಸಿಎನ್ ಜಿ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.

ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಸಿಎನ್ ಜಿ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಡೀಸೆಲ್ ಕಾರುಗಳಿಗೆ ಇವು ಭರ್ಜರಿ ಪೈಪೋಟಿ ನೀಡುತ್ತಿವೆ. ಹೀಗಾಗಿ ಶೀಘ್ರದಲ್ಲಿಯೇ ಹಲವು ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರುಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡುತ್ತಿವೆ.

ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚಿನ ಇಂಧನ ದಕ್ಷತೆ ಕಾರಣಕ್ಕೆ ಸಿಎನ್ ಜಿ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಟಾಟಾ ಮೋಟಾರ್ಸ್ ಕಂಪನಿ ಮತ್ತಷ್ಟು ಹೊಸ ಸಿಎನ್ ಜಿ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಪಂಚ್ ಮತ್ತು ಆಲ್ಟ್ರೊಜ್ ಕಾರುಗಳಲ್ಲಿ ಸಿಎನ್ಜಿ ವರ್ಷನ್ ಬಿಡುಗಡೆ ಮಾಡುತ್ತಿದೆ.

ಹೊಸ ಸಿಎಸ್ ಜಿ ಕಾರುಗಳ ಬಿಡುಗಡೆಗೂ ಮುನ್ನ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿದ್ದು, ಹೊಸ ಕಾರುಗಳು ಟಾಟಾ ಕಂಪನಿಯ ಸುಧಾರಿತ ಐ ಸಿಎನ್ ಜಿ ತಂತ್ರಜ್ಞಾನ ಪ್ರೇರಣೆ ಹೊಂದಿವೆ. ಐ-ಸಿಎನ್ಜಿ ತಂತ್ರಜ್ಞಾನದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಹೊಸ ಪಂಚ್ ಮತ್ತು ಆಲ್ಟ್ರೊಜ್ ಸಿಎನ್ ಜಿ ಕಾರುಗಳಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್ಜಿ ಕಿಟ್ ಜೋಡಿಸಲಾಗಿದೆ. ಈ ಬಾರಿ ಸಿಎನ್ ಜಿ ಕಾರುಗಳಲ್ಲಿ ಟಾಟಾ ಕಂಪನಿಯು ಹೊಸದಾಗಿ ಟ್ವಿನ್ ಸಿಲಿಂಡರ್ ಟ್ಯಾಂಕ್ ಅಭಿವೃದ್ದಿಪಡಿಸಿದ್ದು, ಹೊಸ ವಿನ್ಯಾಸದಿಂದಾಗಿ ಬೂಟ್ ಸ್ಪೆಸ್ ಹೆಚ್ಚಳವಾಗಲಿದೆ.

ಸಾಮಾನ್ಯವಾಗಿ ಸಿಎನ್ ಜಿ ಕಾರುಗಳಲ್ಲಿ ಬೂಟ್ ಸ್ಪೆಸ್ ಕಡಿಮೆ ಎನ್ನುವ ಗ್ರಾಹಕರ ಅಸಮಾಧಾನವನ್ನ ಕಡಿಮೆ ಮಾಡಲು ಟಾಟಾ ಕಂಪನಿಯು ಟ್ವಿನ್ ಸಿಲಿಂಡರ್ ಟ್ಯಾಂಕ್ ಪರಿಚಯಿಸಿದೆ. ಟ್ವಿನ್ ಸಿಲಿಂಡರ್ ಟ್ಯಾಂಕ್ ನಿಂದಾಗಿ ಹೆಚ್ಚಿನ ಮಟ್ಟದ ಲಗೇಜ್ ಇಡಬಹುದಾಗಿದ್ದು, ಜೊತೆಗೆ ಭರ್ಜರಿ ಮೈಲೇಜ್ ನೀಡಲಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಐ-ಸಿಎನ್ಜಿ ಕಿಟ್ ಹೊಂದಿರುವ ಟಾಟಾ ಹೊಸ ಕಾರುಗಳು ಪ್ರತಿ ಕೆಜಿ ಸಿಎನ್ ಜಿ ಗೆ 26 ರಿಂದ 28 ಕಿ.ಮೀ ಮೈಲೇಜ್ ನೀಡಲಿವೆ. ಜೊತೆಗೆ ಹೊಸ ಕಾರುಗಳು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, 73.5 ಹಾರ್ಸ್ ಪವರ್ ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿವೆ.

ಹೊಸ ಸಿಎನ್ ಜಿ ಕಾರುಗಳು ಪೆಟ್ರೋಲ್ ಮಾದರಿಗಿಂತಲೂ ರೂ. 70 ಸಾವಿರದಿಂದ ರೂ. 90 ಸಾವಿರದಷ್ಟು ದುಬಾರಿಯಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಹೊಸ ಸಿಎನ್ಜಿ ಕಾರು ಮಾದರಿಗೆ ಇವು ಭರ್ಜರಿ ಪೈಪೋಟಿ ನೀಡಲಿವೆ.