
ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇದರ ಕಾರ್ಯನಿರ್ವಹಣೆಯ ಸ್ವರೂಪದಲ್ಲಿ ಸಂಪೂರ್ಣ ಬದಲಾವಣೆ ತರುವುದರಲ್ಲಿ ನಿರತರಗಿದ್ದಾರೆ. ಇತ್ತೀಚೆಗಷ್ಟೆ ಇನ್ಮುಂದೆ ಟ್ವಿಟರ್ನ ಬ್ಲೂ ಸಬ್ಸ್ಕ್ರಿಪ್ಷನ್ ಪಡೆಯಬೇಕಾದರೆ ಹಣ ಪಾವತಿಸಬೇಕಾಗುತ್ತದೆ ಎಂಬ ಸುದ್ದಿ ಹೊರಬಿದ್ದಿತ್ತು.

ಇದೀಗ ಟ್ವಿಟರ್ ಬ್ಲೂ ಶುಲ್ಕ ಚಂದಾದಾರಿಕೆ ಭಾರತಕ್ಕೆ ಬಂದಿದೆ. ಭಾರತದಲ್ಲಿ ಕೆಲವು ಜನರು ತಿಂಗಳಿಗೆ ರೂ. 719ಕ್ಕೆ, ಅಂದರೆ ಸುಮಾರು $8.9ಕ್ಕೆ ಸಮನಾಗಿ ಪಾವತಿಸಿ, ಟ್ವಿಟರ್ ಬ್ಲೂ ಟಿಕ್‌ಗೆ ಸಂಪರ್ಕ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗೌರವ್ ಅಗರ್ವಾಲ್ ಎಂಬವರು 719 ರೂ. ಹಣ ಪಾವತಿಸಿ ‘ಟ್ವಿಟರ್ ಬ್ಲೂ’ ಚಂದಾದಾರಿಕೆ ಜೊತೆಗೆ ‘ಬ್ಲೂ ಟಿಕ್’ ಪಡೆದಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವಿಟರ್ ಬ್ಲೂ ಚಂದಾದಾರಿಕೆ ಪಡೆದ ಗ್ರಾಹಕರು 42 ನಿಮಿಷಗಳವರೆಗೆ ದೊಡ್ಡ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಇವರು ಹಂಚಿಕೊಂಡ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ.

ಟ್ವಿಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರಲಿದ್ದು ಏನೇ ಹೊಸ ಅಪ್‌ಡೇಟ್‌ಗಳು ಬಂದರೆ ಟ್ವಿಟರ್ ಬ್ಲೂ ಗ್ರಾಹಕರಿಗೆ ಮೊದಲು ಸಿಗಲಿದೆ. ಹೀಗೆ ನೂತನವಾದ ಆಯ್ಕೆ ಟ್ವಿಟರ್ ಬ್ಲೂ ಚಂದಾದಾರಿಕೆ ಪಡೆದವರಿಗೆ ಸಿಗಲಿದೆ.

ವಿಶೇಷ ಎಂದರೆ ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಬೇಕು ಅಥವಾ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕಂತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವಕಾಶ ನೀಡಲಿದ್ದಾರೆ.

ಅಮೆರಿಕದಲ್ಲಿ ಬ್ಲೂಟಿಕ್ಗೆ 7.99 ಡಾಲರ್ ಶುಲ್ಕ ವಿಧಿಸಲಾಗುತ್ತಿದೆ. ಐಒಎಸ್ ಬಳಕೆದಾರರಿಗೆ ಆ್ಯಪ್ನ ಅಪ್ಡೇಟೆಡ್ ವರ್ಷನ್ ಬಳಕೆಗೆ ದೊರೆತಿದೆ. ಆದರೆ, ಹೊಸ ಆಯ್ಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ ಎನ್ನಲಾಗಿದೆ.