ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಆದರೆ, ಈ ರೋಚಕ ಕದನಕ್ಕೆ ವರುಣ ಅಡ್ಡಿಪಡಿಸಲಿದ್ದಾನೆ.
ಹೌದು, ಮೆಲ್ಬೋರ್ನ್ನಲ್ಲಿ ಇಂದಿನಿಂದಲೇ ಮೋಡ ಕವಿದ ವಾತಾವರಣ ಹೆಚ್ಚಿದ್ದು, ಭಾನುವಾರ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ 25 ಮಿಮೀ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಹೀಗಾಗಿ ಫೈನಲ್ ಪಂದ್ಯ ನಡೆಯುವುದು ಅನುಮಾನ.
ಭಾನುವಾರ ಮಳೆಯಾಗಿ ಪಂದ್ಯ ನಡೆಯದಿದ್ದರೆ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ ಆದರೆ ಆ ದಿನವೂ 5ರಿಂದ 10 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಜಂಟಿ ಚಾಂಪಿಯನ್ ಆಗುವ ನಿರೀಕ್ಷೆ ಇದೆ.
ಐಸಿಸಿ ನಿಯಮದ ಪ್ರಕಾರ ಸಾಮಾನ್ಯವಾಗಿ ಟಿ20 ಪಂದ್ಯಗಳಲ್ಲಿ ಮಳೆ ಅಡ್ಡಿಯಾದರೆ ಫಲಿತಾಂಶಕ್ಕಾಗಿ 5 ಓವರ್ ಪಂದ್ಯವಾದರೂ ನಡೆಯಲೇಬೇಕು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 2ನೇ ಇನ್ನಿಂಗ್ಸ್ನಲ್ಲಿ ಕನಿಷ್ಠ 5 ಓವರ್ ಆಟವಾದರೂ ನಡೆದಿರಬೇಕು. ಆದರೆ, ಇತ್ತೀಚೆಗೆ ಈ ನಿಯಮವನ್ನು ಐಸಿಸಿ ಬದಲಾವಣೆ ಮಾಡಿದೆ.
ನೂತಹ ನಿಯಮದ ಪ್ರಕಾರ ಟಿ20 ವಿಶ್ವಕಪ್ನ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನೀಡಲು ಎರಡೂ ಇನ್ನಿಂಗ್ಸ್ಗಳಲ್ಲಿ ಕನಿಷ್ಠ 10 ಓವರ್ ಆಟ ನಡೆಯಬೇಕು ಎಂದಿದೆ. ಒಂದೊಮ್ಮೆ ಭಾನುವಾರ ಪಂದ್ಯವು ಆರಂಭವಾಗಿ ಮಳೆಯಿಂದ ಅರ್ಧಕ್ಕೆ ನಿಂತರೆ ಮರುದಿವಸ ಉಳಿದ ಭಾಗವನ್ನು ಮುಂದುವರಿಸಲಾಗುವುದು.
ಭಾನುವಾರ ನಡೆಯಬೇಕಿರುವ ಪಂದ್ಯ ನಡೆಯದಿದ್ದರೆ ಸೋಮವಾರ ಯಥಾಪ್ರಕಾರ ಪುನರಾರಂಭಿಸಲಾಗುತ್ತದೆ. ಒಮ್ಮೆ ಟಾಸ್ ಆದ ಬಳಿಕ ಆಟವನ್ನು ಲೈವ್ ಎಂದು ಪರಿಗಣಿಸಲಾಗುತ್ತದೆ. ಪಂದ್ಯವು ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿದೆ.
2019ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಎರಡು ದಿನಗಳ ಕಾಲ ನಡೆದಿತ್ತು. ಆವಾಗಿನ ನಿಯಮದ ಪ್ರಕಾರ ಮೀಸಲು ದಿನದಂದು ಹೊಸ ಆಟವನ್ನು ನಡೆಸಲಾಗಿತ್ತು. ಆದರೆ, ಈಗ ಐಸಿಸಿ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದೆ.
Published On - 9:28 am, Sat, 12 November 22