ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಭಾನುವಾರ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಹಾಗೂ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಗಳ ನಡುವೆ ಫೈನಲ್ ಕದನ ನಡೆಯಲಿದ್ದು ಗೆದ್ದ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ. ಸೆಮಿ ಫೈನಲ್ನಲ್ಲಿ ಪಾಕ್ ನ್ಯೂಜಿಲೆಂಡ್ ಅನ್ನು ಸೋಲಿಸಿ ಹಾಗೂ ಇಂಗ್ಲೆಂಡ್ ಭಾರತವನ್ನು ಸೋಲಿಸಿ ಫೈನಲ್ಗೆ ಪ್ರವೇಶ ಪಡೆದಿತ್ತು.
ಇದೀಗ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಪಾಕಿಸ್ತಾನ- ಇಂಗ್ಲೆಂಡ್ ನಡುವಣ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ತಯಾರಾಗುತ್ತಿದೆ. ವಿಶೇಷ ಎಂದರೆ 1992 ವಿಶ್ವಕಪ್ ಅನ್ನು ಈ ವಿಶ್ವಕಪ್ಗೆ ಹೋಲಿಸಿ ಅನೇಕ ಕಾಕತಾಳೀಯ ಸಂಗತಿಗಳು ನಡೆಯುತ್ತಿದೆ. ಮೊದಲನೆಯದಾಗಿ 2022ರ ಟಿ20 ವಿಶ್ವಕಪ್‌ನಂತೆಯೇ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್ಗೂ ಆತಿಥ್ಯವಹಿಸಿತ್ತು.
1992 ರ ಏಕದಿನ ವಿಶ್ವಕಪ್‌ನಂತೆಯೆ ಆಸ್ಟ್ರೇಲಿಯಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ನಿರ್ಗಮಿಸಿದೆ. ಅಲ್ಲದೆ ಅಂದು ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತು. ಈ ಬಾರಿ ಕೂಡ ಅದೇರೀತಿ ನಡೆದಿದೆ. ಅಷ್ಟೇ ಅಲ್ಲದೆ ಅಂದು ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿ ಭಾರತದ ಎದುರು ಸೋಲುಂಡಿತ್ತು.
ಇದಕ್ಕೆ ಮತ್ತಷ್ಟು ಪುಷ್ಠಿ ಎಂಬಂತೆ 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್ ಟಿಕೆಟ್ ಖಚಿತ ಪಡಿಸಿಕೊಳ್ಳಲು ಗುಂಪು ಹಂತದ ಕೊನೆಯ ದಿನದವರೆಗೂ ಕಾಯಬೇಕಾಗಿತ್ತು. 2022ರ ಟಿ20 ವಿಶ್ವಕಪ್‌ನಲ್ಲೂ ಅದೇ ರೀತಿಯ ಘಟನೆ ನಡೆದಿದೆ. ಅಲ್ಲದೆ ಫೈನಲ್ನಲ್ಲಿ ಪಾಕಿಸ್ತಾನ – ಇಂಗ್ಲೆಂಡ್ ಮುಖಾಮುಖಿ ಆಗಿತ್ತು. ಈ ಬಾರಿ ಕೂಡ ಅದೇರೀತಿ ನಡೆಯಲಿದೆ.
ಅಂದು ನಡೆದ ಫೈನಲ್ ಪಂದ್ಯದಲ್ಲಿ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 22 ರನ್ಗಳ ಜಯ ಸಾಧಿಸಿ ಚೊಚ್ಚಲ ಏಕದಿನ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಬಾರಿ ಬಾಬರ್ ಅಜಮ್ ಕೂಡ ಈ ಸಾಧನೆ ಮಾಡಲಿದ್ದಾರೆ. ಹಿಂದಿನ ಘಟನೆ ಮರುಕಳಿಸಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.
ಇದರ ನಡುವೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ 2022 ರಲ್ಲಿ ಪಾಕಿಸ್ತಾನ ಗೆದ್ದರೆ 2048 ರಲ್ಲಿ ಬಾಬರ್ ಅಜಮ್ ಪಾಕಿಸ್ತಾನ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಗವಾಸ್ಕರ್ ಈರೀತಿ ಹೇಳಲು ಕಾರಣ ಕೂಡ ಇದೆ. 1992 ರಲ್ಲಿ ಪಾಕಿಸ್ತಾನ ಗೆದ್ದಾಗ ಆಗ ತಂಡದ ನಾಯಕ ಇಮ್ರಾನ್ ಖಾನ್ ಆಗಿದ್ದರು. ನಂತರ ಅವರು ಪಾಕ್ ಪ್ರಧಾನಿ ಆದರು. ಹಿಂದಿನ ಘಟನೆ ಮರುಕಳಿಸುತ್ತದೆ ಎಂದಾದರೆ 2048 ರಲ್ಲಿ ಬಾಬರ್ ಕೂಡ ಪ್ರಧಾನಿ ಆಗಲಿದ್ದಾರೆ ಎಂಬುದು ಗವಾಸ್ಕರ್ ಹೇಳಿಕೆಯ ಒಳಾರರ್ಥ.
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಣ ಐಸಿಸಿ ಟಿ20 ವಿಶ್ವಕಪ್ 2022 ಫೈನಲ್ ಪಂದ್ಯ ನವೆಂಬರ್ 13 ಭಾನುವಾರದಂದು ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.
Published On - 12:24 pm, Fri, 11 November 22