
ವಿಜಯಪುರದಲ್ಲಿ ಸದ್ಯ ಶ್ರೀ ಸಿದ್ದೇರಶ್ವರ ದೇವಸ್ಥಾನದ ಜಾತ್ರಾ ಸಂಭ್ರಮ ಮನೆ ಮಾಡಿದೆ. 8 ದಿನಗಳ ಕಾಲ ನಡೆಯುವ ಜಾತ್ರೆಗೆ ಶತಮಾನದ ಐತಿಹ್ಯವಿದೆ. ನಂದಿಕೋಲು ಮೆರವಣಿಗೆ, ಭೋಗಿ, ಸಿದ್ದರಾಮ ಮಂತ್ರದಂಡ ವಿವಾಹ ಕಾರ್ಯಕ್ರಮ ಹೀಗೆ ಸಾಲು ಸಾಲು ಧಾರ್ಮಿಕ ಕಾರ್ಯಗಳಿಗೆ ಹಾಗೂ ಮನರಂಜನೆಗೆ ಜಾತ್ರೆ ಸಾಕ್ಷಿಯಾಗಿದೆ.

ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ 115ನೇ ಜಾತ್ರಾ ಮಹೋತ್ಸವದ ಸಂಭ್ರಮ ಜೋರಾಗಿದೆ. ಪ್ರತಿ ವರ್ಷ ಮಕರ ಸಂಕ್ರಮಣದ ವೇಳೆ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಇಂದು ಬೆಳಿಗ್ಗೆಯಿಂದಲೇ ನಂದಿಕೋಲು ಮೆರವಣಿಗೆ ಸೇರಿದಂತೆ ಹೋಮ ಹವನ, ವಿಶೇಷ ಪೂಜಾ ಕಾರ್ಯಗಳು ನಡೆದವು.

ಶಾಸಕ ಹಾಗೂ ಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆಯಿಂದಲೇ ಭಕ್ತಸಾಗರ ದೇವಸ್ಥಾನಕ್ಕೆ ಹರಿದು ಬಂದಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಜಾತ್ರೆಯ ನಿಮಿತ್ಯ 8 ದಿನಗಳ ಕಾಲ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ಮಾತ್ರವಲ್ಲದೇ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡಲಾಗಿದೆ. ನಿತ್ಯ ಹಲವಾರು ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ರಾತ್ರಿ ವೇಳೆ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿವೆ.

ಜಾತ್ರೆಯ ಅಂಗವಾಗಿ ಭಾರ ಎತ್ತುವ ಸ್ಪರ್ಧೆಗಳು ಹಾಗೂ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯ ಆಯೋಜನೆ ಮಾಡುವ ಮೂಲಕ ದೇಶಿ ಕಲೆಗಳು, ಕ್ರೀಡೆ ಉಳಿಸಿ, ಬೆಳೆಸುವಲ್ಲಿ ಜಾತ್ರೆ ಪ್ರಮುಖ ವೇದಿಕೆಯಾಗಿದೆ. ಇನ್ನು ಜಾತ್ರೆಗೆ ಸುತ್ತಮುತ್ತ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದಿಂದ ಭಕ್ತರ ದಂಡೇ ಹರಿದುಬರುತ್ತಿದೆ.

ಇನ್ನು ಜಾತ್ರೆಯ ಅಂಗವಾಗಿ ಪ್ರತಿವರ್ಷ ಜಾನುವಾರು ಜಾತ್ರೆಯೂ ನಡೆಯುತ್ತದೆ. ಹೊರ ರಾಜ್ಯ ಸೇರಿ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಜಾನುವಾರುಳಿಗೆ ಬಹುಮಾನ ನೀಡಲಾಗುತ್ತದೆ. ಉತ್ತಮ ರಾಸುಗಳಿಗೆ 10 ಗ್ರಾಂ ಚಿನ್ನ ನೀಡಲಾಗುತ್ತದೆ. ಒಟ್ಟಾರೆ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ಸೊಬಗು ಜೋರಾಗಿದೆ.