
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಕಾರ ಹುಣ್ಣಿಮೆಯಾದ ಏಳು ದಿನಗಳ ಬಳಿಕ ಕರಿ ಹರಿಯಲಾಗುತ್ತದೆ. ಅದಕ್ಕೂ ಮುನ್ನ ಗ್ರಾಮದ ಯುವಕರ ತಂಡಗಳು ಮದವೇರಿದ ಹೋರಿಗಳ ಎತ್ತುಗಳನ್ನು ಬೆದರಿಸುವ ಪದ್ದತಿ ನಡೆಯುತ್ತದೆ. ವಿವಿಧ ಬಣ್ಣಗಳಿಂದ ಎತ್ತು ಹಾಗೂ ಹೋರಿಗಳನ್ನು ಅಲಂಕಾರ ಮಾಡಿ, ಹಗ್ಗಗಳನ್ನು ಕಟ್ಟಿ ಬೆದರಿಸಿ ಓಡಿಸುತ್ತಾರೆ. ನಂತರ ಅವುಗಳನ್ನು ನಿಯಂತ್ರಣ ಮಾಡುತ್ತಾ ಎಂಜಾಯ್ ಮಾಡುತ್ತಾರೆ.

ಯುವಕರ ತಂಡಗಳು ಬೆದರಿಸುತ್ತಿದ್ದಂತೆ ಎತ್ತುಗಳು ಪ್ರತಿದಾಳಿ ಮಾಡುತ್ತವೆ. ದಾಳಿಯಿಂದ ರಕ್ಷಣೆ ಮಾಡಿಕೊಳ್ಳುತ್ತಲೇ ಅವುಗಳನ್ನು ಮತ್ತೆ ಕೆರಳಿಸುತ್ತಾರೆ. ಅಪಪಾಯಕಾರಿ ಹಾಗೂ ರೋಮಾಂಚನಕಾರಿಯಾಗಿ ಈ ಪದ್ದತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಹಿಂದಿನ ಕಾಲದಲ್ಲಿ ಓರ್ವ ವ್ಯಕ್ತಿ ತನ್ನ ತಾಯಿಗೆ ಬೇಗ ಊಟ ನೀಡು ಎಂದು ಕೇಳಿದಾಗ ನೀನೇನು ಏಳೂರ ಕರಿ ತಂದಿದ್ದೀಯಾ? ಯಾಕೆ ಅವಸರ ಮಾಡುತ್ತೀಯಾ ಎಂದು ತಾಯಿ ಹೇಳಿದ ಕಾರಣ ಆತ ಸುತ್ತಮುತ್ತಲ ಏಳೂರ ಕರಿಗಳನ್ನು ತಂದು ಊಟ ಮಾಡಿದ್ದನಂತೆ. ಹೀಗಾಗಿ ಕಾರಹುಣ್ಣಿಮೆಯಾದ ಏಳು ದಿನಗಳ ಬಳಿಕ ಕಾಖಂಡಕಿಯಲ್ಲಿ ಕರಿ ಹರಿಯಲಾಗುತ್ತದೆ.

ಪ್ರತಿ ಬಾರಿ ಎತ್ತುಗಳನ್ನು ಬೆದರಿಸುವ ವೇಳೆ ಅವಘಡಗಳು ಸಂಭವಿಸುತ್ತವೆ. ಹಿಂದಿನ ವರ್ಷಗಳಲ್ಲಿ ಹಲವಾರು ಜನರ ಪ್ರಾಣಕ್ಕೆ ಕುತ್ತು ಬಂದ ಘಟನೆಗಳೂ ಸಹ ನಡೆದಿವೆ. ಈ ವರ್ಷವೂ ಸಹ ಅವಘಡಗಳಿಗೆ ಕಾಖಂಡಕಿಯ ಕರಿ ಹರಿಯುವ ಪದ್ದತಿಯ ಆಚರಣೆ ಹೊರತಾಗಿರಲಿಲ್ಲ. ನೆರದ ಜನ ಜಂಗುಳಿಯನ್ನು ಕಂಡು ಬೆದರಿದ ಎತ್ತೊಂದು ಜನರ ಗುಂಪಿನ ಮೇಲೆಯೇ ಎರಗಿ ಎಲ್ಲರನ್ನು ತುಳಿದು ಘಟನೆ ನಡೆಯಿತು. ಯಾವಾಗ ಎತ್ತೊಂದು ಜನರ ಮೇಲೆ ಜಿಗಿದು ಬಿಟ್ಟಿತೋ ಆಗ ಎತ್ತಿನ ಕಾಲಡಿ ಹಲವಾರು ಜನರು ಸಿಕ್ಕು ನರಳಾಡಿದರು.

ನಂತರ ಎತ್ತು ವಾಪಸ್ ಓಡುವಾಗ ಯುವತಿಯೋರ್ವಳ ಮೇಲೆ ಹತ್ತಿಳಿದ ಕಾರಣ ಯುವತಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇನ್ನು, ಜಾನುವಾರುಗಳನ್ನು ಬೆದರಿಸುವ ವೇಳೆ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಎತ್ತೊಂದು ಓಡಿ ಬರುವಾಗ ವ್ಯಕ್ತಿಯೋರ್ವ ಮೈಮರೆತು ನಿಂತಿದ್ದನು. ಈತನ ಬಳಿಗೆ ಬಂದ ಎತ್ತು ಕೊಂಬಿನಲ್ಲಿ ಆತನನ್ನು ಎತ್ತಿ ಬೀಸಾಡಿದೆ. ಆದರೆ, ಈ ಬಾರಿ ಯಾರೋಬ್ಬರ ಪ್ರಾಣಕ್ಕೆ ಕುತ್ತು ತರುವ ಘಟನೆಗಳು ನಡೆದಿಲ್ಲ ಎಂಬುದು ಸಮಾಧಾನದ ವಿಚಾರವಾಗಿದೆ.


ಕರಿ ಹರಿಯೋದು, ಜಾನುವಾರುಗಳ ಬೆದರಿಸುವುದನ್ನು ವೀಕ್ಷಿಸಲು ಸುತ್ತಮುತ್ತಲ ಜಿಲ್ಲೆಗಳ ಹಾಗೂ ನೆರೆಯ ಮಹರಾಷ್ಟ್ರ ರಾಜ್ಯದ ಜನರು ಆಗಮಿಸುತ್ತಾರೆ. ಈ ವೇಳೆ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿರುತ್ತದೆ.
Published On - 7:57 pm, Wed, 18 June 25