ಕಾಂಗ್ರೆಸ್ ಸರ್ಕಾರದ ದೌರ್ಜನ್ಯದಿಂದ ಬಿಜೆಪಿ ಕಾರ್ಯಕರ್ತರ ರಕ್ಷಣೆಗಾಗಿ ವಕೀಲರ ತಂಡ ಸಜ್ಜು: ತೇಜಸ್ವಿ ಸೂರ್ಯ

|

Updated on: Jun 03, 2023 | 6:34 PM

ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳಿಂದ ಬಿಜೆಪಿ ಕಾರ್ಯಕರ್ತರನ್ನು ರಕ್ಷಿಸಲು ಬಿಜೆಪಿ ಹೆಲ್​ಲೈನ್ ಆರಂಭಿಸಲಿದ್ದು, ವಕೀಲರ ತಂಡವನ್ನೂ ಸಜ್ಜುಗೊಳಿಸಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವ ಧಮಕಿ, ಸುಳ್ಳು ಅಪಾದನೆಗಳ ಮೂಲಕ ಕೇಸ್ ದಾಖಲಿಸುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಕಾರ್ಯಕರ್ತರನ್ನು ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳಿಂದ ರಕ್ಷಿಸಲು ಹಾಗೂ ಕಾನೂನು ಹೋರಾಟಕ್ಕಾಗಿ ವಕೀಲರ ತಂಡ ಸಜ್ಜುಗೊಳಿಸಲಾಗಿದೆ. ಇದರ ಜೊತೆಗೆ ಹೆಲ್ಪ್​ಲೈನ್ ನಂಬರ್ (Helpline Number) ಆರಂಭಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಇದೇ ರೀತಿ ದ್ವೇಷದ ರಾಜಕಾರಣ ಮಾಡಲಾಗಿತ್ತು. ನಮ್ಮ ಕಾರ್ಯಕರ್ತರ ಮೇಲೆ‌ ಅಂದು ರೌಡಿ ಶೀಟ್ ಓಪನ್ ಮಾಡುವ ಕೆಲಸ ಆಗಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಸರಿಯಾಗಿ ಕೇಸ್ ನಡೆಸದೇ ಇದ್ದಿದ್ದೂ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳನ್ನು ಎದುರಿಸಲು ಹೆಲ್ಪ್ ಲೈನ್ ನಂಬರ್ ಅನ್ನು ರಾಜ್ಯದಲ್ಲಿ ಘೋಷಣೆ ಮಾಡುತ್ತೇವೆ. 24 ಗಂಟೆ ಕಾಲ ಈ ಹೆಲ್ಪ್ ಲೈನ್ ಕಾರ್ಯಕರ್ತರ ಸಹಾಯಕ್ಕೆ ಇರಲಿದೆ ಎಂದರು.

ಇದನ್ನೂ ಓದಿ: ಇದು ಕಾಂಗ್ರೆಸ್​​ ಪಕ್ಷದ ಆ 5 ಗ್ಯಾರಂಟಿಗಳಲ್ಲ, ಸಚಿವ ಪ್ರಿಯಾಂಕ್ ಖರ್ಗೆ ಸ್ಪೆಷಲ್​​​ ಗ್ಯಾರಂಟಿ! ಇದಕ್ಕೆ ಯಾಕೆ ಅಧಿಕಾರಿಗಳು ಥರಗುಟ್ಟುತ್ತಿರುವುದು!?

ರಾಜ್ಯದಲ್ಲಿ ಇರುವ ನಮ್ಮ ವಕೀಲರ ತಂಡ ಕಾರ್ಯಕರ್ತರ ನೆರವಿಗೆ ಧಾವಿಸಲಿದೆ ಎಂದು ಹೇಳಿದ ತೇಜಸ್ವಿ ಸೂರ್ಯ, ಬಿಜೆಪಿಯ ಕಾನೂನು ಪ್ರಕೋಷ್ಠದಿಂದ ತಂಡವನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತೇವೆ. ಗಣಪತಿ ಪೆಂಡಾಲ್ ಹಾಕಲು ಕೂಡಾ ಕೋರ್ಟ್ ವರೆಗೂ ಹೋಗಿ ಅನುಮತಿ ಪಡೆಯುವ ದೈನೇಸಿ ಸ್ಥಿತಿ ಬಂದಿತ್ತು. ಆ ಸ್ಥಿತಿ ಮತ್ತೆ ಬರದಂತೆ ಕೋರ್ಟ್​​ನಲ್ಲಿ ಪಿಐಎಲ್, ರಿಟ್ ಹಾಕಲು ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ವಕೀಲರ ತಂಡ ಇರಲಿದೆ ಎಂದರು.

ಇದಕ್ಕೂ ಮುನ್ನ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತುಸು ಹೊತ್ತು ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನ, ಬೆಂಗಳೂರು ಮಹಾನಗರದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಜೊತೆ ಅವರು ಸಮಾಲೋಚನೆ ನಡೆಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sat, 3 June 23