ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಜಂಗಿಕುಸ್ತಿ ತಾರಕಕ್ಕೇರಿದೆ. ಬಿಕ್ಕಟ್ಟಿನ ಚಂಡು ದೆಹಲಿ ಹೈಕಮಾಂಡ್ ಅಂಗಳ ತಲುಪಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈಗ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಇಡೀ ವಿವಾದದ ಸಮಯದಲ್ಲಿ ಸಚಿನ್ ಪೈಲಟ್ ಬಣ ಮೌನವಾಗಿರುವುದು ಪೈಲಟ್‌ಗೆ ಹೆಚ್ಚಿನ ರಾಜಕೀಯ ಲಾಭವಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮತ್ತೊಂದೆಡೆ, ಈ ಸಂಪೂರ್ಣ ವಿವಾದದಿಂದಾಗಿ ಸೋನಿಯಾ ಗಾಂಧಿ ಅವರು ಅಶೋಕ್ ಗೆಹ್ಲೋಟ್ ಮೇಲೆ ತೀವ್ರ ಕೋಪಗೊಂಡಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಶುರುವಾಗಿದೆ.
ಹೀಗಿರುವಾಗ ರಾಜಸ್ಥಾನದ ರಾಜಕೀಯದಲ್ಲಿ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದೆ. ಮುಂದಿನ ಮುಖ್ಯಮಂತ್ರಿ ಯಾರು? ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಏನಾಗಬಹುದು? ನೋಡೊಣ…
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಬಯಸಿತ್ತು. ಆದರೆ ಗೆಹ್ಲೋಟ್ ಬದಲು ಬೇರೆಯವರನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಹೊಸ ನಾಯಕನ ಆಯ್ಕೆಗಾಗಿ ಸೋನಿಯಾ ಗಾಂಧಿ ಅವರು ಹಿರಿಯ ನಾಯಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ವೀಕ್ಷಕರಾಗಿ ಭಾನುವಾರ ರಾಜಸ್ಥಾನಕ್ಕೆ ಕಳುಹಿಸಿದ್ರು.
ಭಾನುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ದೆಹಲಿಯಿಂದ ಹೋಗಿದ್ದ ವೀಕ್ಷಕರು ಎಲ್ಲ ಶಾಸಕರನ್ನು ಒಬ್ಬೊಬ್ಬರಾಗಿ ಭೇಟಿ ಮಾಡುವ ಯೋಜನೆ ಹಾಕಿದ್ರು. ಸಭೆಗೂ ಮುನ್ನ ಅಶೋಕ್ ಗೆಹ್ಲೋಟ್ ಪಾಳೆಯದ ಶಾಸಕರು ಸಚಿನ್ ಪೈಲೆಟ್ ಸಿಎಂ ಆಗುವುದನ್ನು ವಿರೋಧಿಸಿದ್ದಾರೆ. (ರಾಜಕೀಯ ವಿಶ್ಲೇಷಣೆ – ಹರೀಶ್ ಜಿ.ಆರ್, ಹಿರಿಯ ವರದಿಗಾರ, ನವದೆಹಲಿ)
ಶಾಸಕಾಂಗ ಪಕ್ಷದ ಸಭೆಗೆ ಬರುವ ಬದಲು ಗೆಹ್ಲೋಟ್ ಬೆಂಬಲಿಗರು ಸಚಿವ ಶಾಂತಿ ಧರಿವಾಲ್ ಅವರ ಮನೆಗೆ ಹೋಗಿದ್ರು. ಇದಾದ ಬಳಿಕ ಎಲ್ಲ ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಆದರೆ, ಈ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲ. ಸಚಿನ್ ಪೈಲಟ್ ಅಥವಾ ಅವರ ಬಣದ ಯಾರನ್ನು ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ ಎಂದು ಒತ್ತಡ ಹೇರಿದ್ದು, 82 ಶಾಸಕರು ಬಲ ಪ್ರದರ್ಶನ ಮಾಡಿದ್ದಾರೆ.
ಗೆಹ್ಲೋಟ್ ಬಣದ ಶಾಸಕರ ನಿಲುವಿನಿಂದಾಗಿ ಮಾಕನ್ ಮತ್ತು ಖರ್ಗೆ ಅವರು ಸಭೆ ನಡೆಸದೆ ಸೋಮವಾರ ದೆಹಲಿಗೆ ವಾಪಸ್ಸಾಗಬೇಕಾಯಿತು. ದೆಹಲಿ ತಲುಪಿದ ನಂತರ, ಮಾಕನ್ ಮತ್ತು ಖರ್ಗೆ ಅವರು ಸೋನಿಯಾ ಗಾಂಧಿಯವರಿಗೆ ಸಂಪೂರ್ಣ ಪರಿಸ್ಥಿತಿಯನ್ನು ತಿಳಿಸಿದ್ದು, ಗೆಹ್ಲೋಟ್ ಬಣದ ಶಾಸಕರ ಅಶಿಸ್ತಿನ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ಘಟನೆಯನ್ನು ಸೋನಿಯಾ ಗಾಂಧಿಗೆ ಅವರಿಗೆ ತಿಳಿಸಿದ್ದಾರೆ. ಗೆಹ್ಲೋಟ್ ಬಣದ ಅಶಿಸ್ತಿನ ನಡವಳಿಕೆಯಿಂದ ಸೋನಿಯಾ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸೋನಿಯಾ ಗಾಂಧಿ ಅವರು ಅಶೋಕ್ ಗೆಹ್ಲೋಟ್ ಅವರಿಂದ ಇಂತಹದ್ದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ ಎಂದುಮೂಲಗಳು ತಿಳಿಸಿವೆ.
ಈ ಸಂಪೂರ್ಣ ಬೆಳವಣಿಗೆಯ ನಂತರ ಅಶೋಕ್ ಗೆಹ್ಲೋಟ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಮರುಪರಿಶೀಲನೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಗೆಹ್ಲೋಟ್ ಬದಲಿಗೆ ಬೇರೆ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ದಿಗ್ವಿಜಯ್ ಸಿಂಗ್, ಕೆ.ಸಿ.ವೇಣುಗೋಪಾಲ್ ಹೆಸರುಗಳು ಮುನ್ನೆಲೆಗೆ ಬಂದಿವೆ.
ಗೆಹ್ಲೋಟ್ ಬಣದ ವರ್ತನೆ ಪೈಲಟ್ ಗೆ ವರವಾಗಬಹುದೇ..?
ಗೆಹ್ಲೋಟ್ ಬಣದ ಶಾಸಕರ ರಾಜೀನಾಮೆ ಹೈಡ್ರಾಮ ಮತ್ತು ಹೇಳಿಕೆಗಳು ಅಶೋಕ್ ಗೆಹ್ಲೋಟ್ ವಿರುದ್ಧ ಪಕ್ಷದಲ್ಲಿ ವಾತಾವರಣವನ್ನು ಸೃಷ್ಟಿಸಿವೆ. ಗೆಹ್ಲೋಟ್ ಬಣದ ಶಾಸಕರು ವಾಗ್ದಾಳಿ ನಡೆಸುತ್ತಿದ್ದರೂ ಸಚಿನ್ ಪೈಲಟ್ ಮೌನವಾಗಿಯೇ ಇದ್ದಾರೆ. ಸಚಿನ್ ಅವರ ಮೌನವೇ ಅವರಿಗೆ ವರವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರು ರಾಜೀನಾಮೆ ನೀಡಿ ವೀಕ್ಷಕರನ್ನು ಭೇಟಿ ಮಾಡದೆ ತಮ್ಮ ಆಟ ಕೆಡಿಸಿದ್ದಾರೆ.
ಮತ್ತೊಂದೆಡೆ, ಸಚಿನ್ ಪೈಲಟ್ ನಿರಂತರವಾಗಿ ಮೌನವಾಗಿದ್ದಾರೆ. ಗೆಹ್ಲೋಟ್ ಪರ ಶಾಸಕರು ಪೈಲೆಟ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ ಆದರೂ ಸಚಿನ್ ಪೈಲಟ್ ತಾಳ್ಮೆ ಇಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್‌ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಲೇ ಇದ್ದಾರೆ. ಹೀಗಾಗಿ ಪೈಲಟ್ ಮೌನವೇ ಅವರ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಕುಳಿತೇ ಎಲ್ಲವನ್ನು ಗಮನಿಸುತ್ತಿರಿವ ಸೋನಿಯಾ ಗಾಂಧಿಯವರಿಗೆ ಯಾರ ಮೇಲೆ ವಿಶ್ವಾಸವಿದೆ ಎನ್ನುವುದು ಕುತೂಹಲ ಕೆರಳಿಸಿದೆ.