ಗೌಡರಿಗೆ ಅಪಮಾನ: ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ಜೆಡಿಎಸ್, ಕ್ಷಮೆ ಯಾಚಿಸಿದ ಸಂಬರಗಿ

|

Updated on: Mar 25, 2023 | 5:48 PM

ಬಿಗ್​ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿಯವರು ಸಾಮಾಜಿಕ ಜಾಲತಾಣದಲ್ಲಿ ಗೌಡ ಉಪಮಾನದ ಬಗ್ಗೆ ಹಾಕಿದ ಪೋಸ್ಟ್ ವಿವಾದ ಪಡೆದುಕೊಂಡಿದ್ದು, ಸಂಬರಗಿ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ.

ಗೌಡರಿಗೆ ಅಪಮಾನ: ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ಜೆಡಿಎಸ್, ಕ್ಷಮೆ ಯಾಚಿಸಿದ ಸಂಬರಗಿ
ಪ್ರಶಾಂತ್ ಸಂಬರಗಿ
Follow us on

ಬೆಂಗಳೂರು: ಮೋದಿ ಉಪಮಾನದವರನ್ನೆಲ್ಲಾ (Modi Surname) ಅವಮಾನಿಸಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ದಾಖಲಾದ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್, 2 ವರ್ಷ ಶಿಕ್ಷೆ ಪ್ರಕಟಿಸಿರುವುದು ಗೊತ್ತೇ ಇದೆ. ಇದೀಗ ಇದೇ ಮಾದರಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ (Prashanth Sambargi) ವಿರುದ್ಧವೂ ದೂರು ನೀಡಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಬಗ್ಗೆ ಪ್ರಶಾಂತ್ ಸಂಬರಗಿ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ. ಟ್ವಿಟ್ಟರ್ ಹಾಗೂ ಫೇಸ್ ಬುಕ್​ನಲ್ಲಿ ಅವಹೇಳನಕಾರಿಯಾಗಿ ಬರೆದಿರುವ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಕಾನೂನು ಘಟಕದ ಎ.ಪಿ.ರಂಗನಾಥ್, ವಕ್ತಾರ ಗಂಗಾಧರ್ ಮೂರ್ತಿ ಸೇರಿ ಹಲವರು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರಿಗೆ ದೂರು ಸಲ್ಲಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ದೂರು ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದ್ದಾರೆ.

ಇನ್ನು, ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಟ್ವಿಟರ್ ಮೂಲಕ ಕ್ಷಮೆ ಕೋರಿದ ಪ್ರಶಾಂತ್ ಸಂಬರಗಿ, “ನನ್ನ ತಂದೆ ಸಮಾನರಾದ ದೇವೆಗೌಡ್ರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೆ ಗೌಡ ಎಂದು ಹೆಸರನ್ನು ಬಳಸಿದೆ ಹೊರತು ಯಾವುದೇ ದುರುದ್ವೇಷ ವಿರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚುತ್ತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ನನ್ನ ಕಳ ಕಳಿಯ ಕ್ಷಮೆ ವಿರಲಿ, ಪೋಸ್ಟ್ ಅನ್ನು ಅಳಿಸಲಾಗಿದೆ ಮತ್ತು ವಿಷಾದಕರವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಪ್ರಶಾಂತ್ ಸಂಬರಗಿ ಹಾಕಿದ ಪೋಸ್ಟ್​ನಲ್ಲಿ ಏನಿದೆ?

ಮೋದಿ ಉಪಮಾನದ ಬಗ್ಗೆ ಅವಹೇಳನ ಮಾಡಿದ ಪ್ರಕರಣವನ್ನೇ ಮುಂದಿಟ್ಟುಕೊಂಡು ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ “ಈ ಕೇಸ್ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಎಂದರೆ, ದೇವೇಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರುತ್ತಾರೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸ್ ಹಾಕಬೇಕು, ಎರಡನೆಯದ್ದಕ್ಕೆ ಅವನ ಮಗನೋ ಮೊಮ್ಮಗನೋ ಅಥವಾ ಯಾರಾದರೂ ಗೌಡ ಕೇಸ್ ಹಾಕಬಹುದು” ಎಂದು ಬರೆದು “ಸುಮ್ಮನೆ ಒಂದು ಉದಾಹರಣೆ ಕೊಟ್ಟೆ ಅಷ್ಟೆ, ಸೀರಿಯಸ್ ಆಗಿ ತಗೊಳಬೇಡಿ” ಎಂದಿದ್ದರು.

ಜೆಡಿಎಸ್ ನೀಡಿದ ದೂರಿನಲ್ಲಿ ಸಂಬರಗಿ ವಿರುದ್ಧ ಮೂರ್ನಾಲ್ಕು ಆರೋಪಗಳು

ಪ್ರಶಾಂತ್ ಸಂಬರಗಿ ವಿರುದ್ಧ ಜೆಡಿಎಸ್ ನೀಡಿದ ದೂರಿನಲ್ಲಿ ಮೂರ್ನಾಲ್ಕು ಆರೋಪಗಳನ್ನು ಮಾಡಲಾಗಿದೆ. ಅವುಗಳೆಂದರೆ, ಮಾರ್ಚ್ 25ರಂದು ಫೇಸ್​ಬುಕ್ ಖಾತೆಯಲ್ಲಿ ದೇವೇಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರುತ್ತಾರೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸ್ ಹಾಕಬೇಕು, ಎರಡನೆಯದ್ದಕ್ಕೆ ಅವನ ಮಗನೋ ಮೊಮ್ಮಗನೋ ಅಥವಾ ಯಾರಾದರೂ ಗೌಡ ಕೇಸ್ ಹಾಕಬಹುದು ಎಂದು ಪೋಸ್ಟ್ ಹಾಕಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಅವಮಾನ ಮಾಡಿ ಮಾನಹಾನಿಕರ ಪೋಸ್ಟ್ ಹಾಕಿ ತೇಜೋವಧೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ನಟಿ ಶೃತಿ ಹರಿಹರನ್ ಕೇಸ್: ಪ್ರಶಾಂತ್ ಸಂಬರಗಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

ಮಾರ್ಚ್ 15ರಂದು ಹೆಚ್ ಡಿ ದೇವೇಗೌಡ ಅವರ ವಿರುದ್ಧ Elephant whisperers ಪೋಸ್ಟ್​ ಮೇಲೆ ‘ಎಲ್ಲೇ ಕೂಸು ಹುಟ್ಟಲಿ ನಾನೇ ಅಪ್ಪ’ ಎಂದು ಅವಹೇಳನಕಾರಿ ಪೋಸ್ಟ್ ಹಾಕಿ ಅವಮಾನ ಮಾಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದೇ ರೀತಿ ಮಾರ್ಚ್ 11ರಂದು ದೇವೇಗೌಡ ಅವರ ವಿರುದ್ಧ ‘ಇವರು ಹೊಟ್ಟೆಗೆ ಅನ್ನ ತಿಂತಾರ ಇಲ್ಲ ಏನು ತಿಂತಾರೆ?’ ಎಂದು ಅವಹೇಳನಕಾರಿ ಪೋಸ್ಟ್ ಹಾಕಿ ಅವಮಾನ ಮಾಡಿದ್ದಾಗಿ ಆರೋಪಿಸಲಾಗಿದೆ.

ಮಾರ್ಚ್ 13ರಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿದ ಸಾರ್ವಜನಿಕ ಭಾಷಣದ ಕ್ಲಿಪ್ ಬಳಿಸಿಕೊಂಡು ಪ್ರಶಾಂತ್ ಸಂಬರಗಿ ಪೋಸ್ಟ್ ಮಾಡಿದ್ದರು. ಈ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕುಮಾರಸ್ವಾಮಿ ಅವರ ಬಗ್ಗೆ ‘ಚೀ ಕಳ್ಳ ಕುಮಾರ್ ಸಾಬ್ ಖಾನ್’ ಎಂದು ಹೇಳಿ ಅವಮಾನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಪೋಸ್ಟ್​ಗಳನ್ನು ಮಾಡಿದ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಮನವಿ ಮಾಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Sat, 25 March 23