Assembly Bypolls 2022: 6 ರಾಜ್ಯಗಳ 7 ಸ್ಥಾನಗಳಿಗೆ ಇಂದು ವಿಧಾನಸಭಾ ಉಪ ಚುನಾವಣೆ; ಮತದಾನ ಆರಂಭ

| Updated By: ಸುಷ್ಮಾ ಚಕ್ರೆ

Updated on: Nov 03, 2022 | 8:36 AM

ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳಲ್ಲಿ ಇಂದು ವಿಧಾನಸಭಾ ಉಪಚುನಾವಣೆಗಳು ನಡೆಯುತ್ತಿವೆ.

Assembly Bypolls 2022: 6 ರಾಜ್ಯಗಳ 7 ಸ್ಥಾನಗಳಿಗೆ ಇಂದು ವಿಧಾನಸಭಾ ಉಪ ಚುನಾವಣೆ; ಮತದಾನ ಆರಂಭ
ಅಸೆಂಬ್ಲಿ ಚುನಾವಣೆ
Follow us on

ನವದೆಹಲಿ: 6 ರಾಜ್ಯಗಳ 7 ಸ್ಥಾನಗಳಿಗೆ ಇಂದು (ನವೆಂಬರ್ 3) ವಿಧಾನಸಭಾ ಉಪಚುನಾವಣೆ (Assembly By-Election) ನಡೆಯುತ್ತಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಕ್ಕೂ ಮುನ್ನ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಉಪಚುನಾವಣೆಗಳು ನಡೆಯುತ್ತಿವೆ. ಸರ್ಕಾರ ಬದಲಾದ ನಂತರ ಮಹಾರಾಷ್ಟ್ರ (Maharashtra Bypolls) ಮತ್ತು ಬಿಹಾರ (Bihar Bypolls) ರಾಜ್ಯಗಳಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಪತನಗೊಳಿಸಿ ಸರ್ಕಾರ ರಚಿಸಿದ್ದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್​ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೊಮ್ಮೆ ಸರ್ಕಾರ ರಚಿಸಿದ್ದಾರೆ. ನವೆಂಬರ್ 6ರಂದು (ಭಾನುವಾರ) ಮತಗಳ ಎಣಿಕೆ ನಡೆಯಲಿದೆ.

ಅಂಧೇರಿ ಪೂರ್ವ, ಮಹಾರಾಷ್ಟ್ರ:
ಹಾಲಿ ಅಭ್ಯರ್ಥಿ ಹಾಗೂ ಶಿವಸೇನೆ ಶಾಸಕ ರಮೇಶ್ ಲಟ್ಕೆ ನಿಧನದ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆಸಲಾಗುತ್ತಿದೆ. ಈ ಕ್ಷೇತ್ರದ ಪ್ರಮುಖ ಸ್ಪರ್ಧಿಗಳೆಂದರೆ, ಶಿವಸೇನೆಯು ಲಟ್ಕೆ ಅವರನ್ನು ಕಣಕ್ಕಿಳಿಸಿದೆ. ಇತರ ದೊಡ್ಡ ಪಕ್ಷಗಳು ಸ್ಪರ್ಧೆಯಿಂದ ಹೊರಗುಳಿದಿವೆ. ಆದರೆ ಅವರ ವಿರುದ್ಧ 6 ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಚುನಾವಣೆ ನಡೆಯುತ್ತಿದೆ.

ಮೊಕಾಮಾ, ಗೋಪಾಲ್‌ಗಂಜ್ (ಬಿಹಾರ):
ಬಿಹಾರದ ಮೊಕಾಮಾ ಮತ್ತು ಗೋಪಾಲ್‌ಗಂಜ್ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕ್ರಿಮಿನಲ್ ಮೊಕದ್ದಮೆಯಲ್ಲಿ ದೋಷಿಯಾಗಿರುವ ಕಾರಣ ಹಾಲಿ ಆರ್‌ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಅನರ್ಹಗೊಳಿಸಿದ ನಂತರ ಮೊಕಾಮಾ ಸ್ಥಾನ ತೆರವಾಗಿತ್ತು. ಹಾಲಿ ಬಿಜೆಪಿ ಶಾಸಕ ಸುಭಾಷ್ ಸಿಂಗ್ ಅವರ ನಿಧನದಿಂದಾಗಿ ಗೋಪಾಲಗಂಜ್ ಚುನಾವಣೆ ಅನಿವಾರ್ಯವಾಗಿತ್ತು.

ಇದನ್ನೂ ಓದಿ: ವಿಜಯಪುರ ಪಾಲಿಕೆ ಫಲಿತಾಂಶ ಇಡೀ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ: ಬಸನಗೌಡ ಪಾಟೀಲ್ ಯತ್ನಾಳ

ಮೊಕಾಮಾದಲ್ಲಿ ಅನಂತ್ ಸಿಂಗ್ ಅವರ ಪತ್ನಿ ನೀಲಂ ದೇವಿ ಅವರನ್ನು ಆರ್‌ಜೆಡಿ ಕಣಕ್ಕಿಳಿಸಿದೆ. ಲಲ್ಲನ್ ಸಿಂಗ್ ಅವರ ಪತ್ನಿ ಸೋನಂ ದೇವಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಗೋಪಾಲ್‌ಗಂಜ್​ನಲ್ಲಿ ಕುಸುಮ್ ದೇವಿ (ಸುಭಾಷ್ ಸಿಂಗ್ ಅವರ ಪತ್ನಿ), ಮೋಹನ್ ಗುಪ್ತಾ (ಆರ್‌ಜೆಡಿ), ಇಂದಿರಾ ಯಾದವ್ (ಬಿಎಸ್‌ಪಿ) ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇಂದಿರಾ ಯಾದವ್ ಅವರು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಅವರ ಸೋದರ ಮಾವ ಸಾಧು ಯಾದವ್ ಅವರ ಪತ್ನಿ. ಈ ಎರಡು ಸ್ಥಾನಗಳಲ್ಲಿ ಜೆಡಿಯು ಆರ್‌ಜೆಡಿ ಅಭ್ಯರ್ಥಿಗಳನ್ನು ಬೆಂಬಲಿಸಿದೆ.

ಆದಮ್ಪುರ್, ಹರಿಯಾಣ:
ಹಾಲಿ ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯ್ ರಾಜೀನಾಮೆ ನೀಡಿ, ನಂತರ ಬಿಜೆಪಿ ಸೇರಿದ ನಂತರ ಈ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿತ್ತು. ಬಿಷ್ಣೋಯಿ ಅವರ ಮಗ ಭವ್ಯ (ಬಿಜೆಪಿ), ಜೈ ಪ್ರಕಾಶ್ (ಐಎನ್‌ಸಿ), ಸತೇಂದರ್ ಸಿಂಗ್ (ಎಎಪಿ), ಕುರ್ದಾ ರಾಮ್ ನಂಬರ್ದಾರ್ (ಐಎನ್‌ಎಲ್‌ಡಿ) ನಡುವೆ ಸ್ಪರ್ಧೆ ನಡೆಯುತ್ತಿದೆ.

ಗೋಲ ಗೋಕರನಾಥ, ಉತ್ತರ ಪ್ರದೇಶ:
ಬಿಜೆಪಿ ಶಾಸಕ ಅರವಿಂದ್ ಗಿರಿ ಅವರು ಸೆಪ್ಟೆಂಬರ್ 6ರಂದು ನಿಧನರಾದ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆಸಲಾಗುತ್ತಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಅರವಿಂದ್ ಗಿರಿ ಮತ್ತು ಗೋಲ ಗೋಕರನಾಥ ಮಾಜಿ ಶಾಸಕ ವಿನಯ್ ತಿವಾರಿ ಅವರ ಪುತ್ರ ಅಮನ್ ಗಿರಿ (ಬಿಜೆಪಿ) ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಇದನ್ನೂ ಓದಿ: Breaking News: ಗುಜರಾತ್ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಇಂದು ಮಧ್ಯಾಹ್ನ 12ಕ್ಕೆ ಪ್ರಕಟ

ಧಮನಗರ, ಒಡಿಶಾ:
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಉಪ ನಾಯಕ ಬಿಷ್ಣು ಚರಣ್ ಸೇಥಿ ಅವರ ನಿಧನದ ನಂತರ ಈ ಸ್ಥಾನ ತೆರವಾಗಿತ್ತು. ಬಿಜು ಜನತಾ ದಳದ ಭದ್ರಕೋಟೆಯಾಗಿರುವ ಒಡಿಶಾದಲ್ಲಿ ಉಪಚುನಾವಣೆ ನಡೆಯುತ್ತಿದೆ. ಸಿಎಂ ನವೀನ್ ಪಟ್ನಾಯಕ್ ಅವರು ಈ ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು. ಬಿಷ್ಣು ಚರಣ್ ಸೇಥಿ ಅವರ ಪುತ್ರ ಸೂರ್ಯವಂಶಿ ಸೂರಜ್ ಸ್ಥಿತಪ್ರಜ್ಞ (ಬಿಜೆಪಿ), ಅಬಂತಿ ದಾಸ್ (ಬಿಜೆಡಿ) ಮತ್ತು ಹರೇಕೃಷ್ಣ ಸೇಥಿ (ಐಎನ್‌ಸಿ) ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಮುನುಗೋಡೆ, ತೆಲಂಗಾಣ:
ಕಾಂಗ್ರೆಸ್ ಶಾಸಕ ಕೆ ರಾಜಗೋಪಾಲ್ ರೆಡ್ಡಿ ರಾಜೀನಾಮೆಯಿಂದ ಇಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ತೆಲಂಗಾಣ ಮುಂದಿನ ವರ್ಷಾಂತ್ಯದಲ್ಲಿ ಅಸೆಂಬ್ಲಿ ಚುನಾವಣೆಗೆ ಮುಂದಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ. ಮುಖ್ಯಮಂತ್ರಿ ಮತ್ತು ಟಿಆರ್​ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರು ಬಿಜೆಪಿ ವಿರೋಧಿ ಒಕ್ಕೂಟವನ್ನು ಒಗ್ಗೂಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಸಿಆರ್ ಇತ್ತೀಚೆಗೆ ತಮ್ಮ ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರುನಾಮಕರಣ ಮಾಡಿದ್ದರು. ರಾಜಗೋಪಾಲ್ ರೆಡ್ಡಿ (ಬಿಜೆಪಿ), ಕೆ ಪ್ರಭಾಕರ್ ರೆಡ್ಡಿ (ಟಿಆರ್‌ಎಸ್) ಮತ್ತು ಪಲವೈ ಶ್ರವಂತಿ ರೆಡ್ಡಿ (ಐಎನ್‌ಸಿ) ನಡುವೆ ಸ್ಪರ್ಧೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ