ಡಿಕೆ ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಾಬುರಾವ್ ಚಿಂಚನಸೂರ್

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್​ ಅವರು ಇಂದು ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು: ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ (Baburao Chinchansur)​ ಅವರು ಇಂದು ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಿದ್ದಾರೆ. ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಬಾಬುರಾವ್ ಚಿಂಚನಸೂರ್​, ನಾನು ಅವಕಾಶವಾದಿ ರಾಜಕಾರಣಿ ಅಲ್ಲ.​ 2023ರಲ್ಲಿ ಚಿಂಚನಸೂರ್ ಸಾಮರ್ಥ್ಯ ಏನು ಅಂತಾ ಗೊತ್ತಾಗುತ್ತದೆ. ಇಂದಿಗೆ ಬಿಜೆಪಿ ಮುಗಿದ ಅಧ್ಯಾಯ. ನಾನು ಡಿ.ಕೆ.ಶಿವಕುಮಾರ್ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ನಾನು ಡಿ.ಕೆ.ಶಿವಕುಮಾರ್ ಋಣ ತೀರಿಸಬೇಕಿದೆ. ಟಿಕೆಟ್ ನೀಡುವುದು ಕಾಂಗ್ರೆಸ್ ಹೈಕಮಾಂಡ್​​ಗೆ ಬಿಟ್ಟ ವಿಚಾರ ಎಂದರು. ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಖರ್ಗೆ ಮೌನ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮಾತು ಬೆಳ್ಳಿ, ಮೌನ ಬಂಗಾರ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ಜೊತೆಗಿನ ಭಿನ್ನಾಭಿಪ್ರಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ಮತ್ತು ಖರ್ಗೆ ನಡುವೆ ತಂದೆ ಮಗನ ಜಗಳ. ತಂದೆ ಮಕ್ಕಳ ಭಿನ್ನಾಭಿಪ್ರಾಯ ಮುಗಿದ ಅಧ್ಯಾಯ ಎಂದರು.

ಇದನ್ನೂ ಓದಿ: ಚಿಂಚನಸೂರ್​ ಕಾಂಗ್ರೆಸ್​ ಸೇರ್ಪಡೆ ವಿಚಾರ: ನಾನು ಎಲ್ಲೂ ಹೋಗಲ್ಲ ಅಂತ ಗಂಡ-ಹೆಂಡತಿ ಕಾಲು ಹಿಡಿದಿದ್ದರು- ​ಯಡಿಯೂರಪ್ಪ

ಬಿಜೆಪಿ ಪಕ್ಷಕ್ಕೂ ರಾಜೀನಾಮೆ

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಾಬುರಾವ್ ಚಿಂಚನಸೂರ್​ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದರು. ಬಾಬುರಾವ್ ಚಿಂಚನಸೂರ್ ಅವರು ಗುರುಮಿಠಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ಕೇಳಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಟಿಕೆಟ್ ನೀಡಲಾಗದು ಎಂದು ಬಿಜೆಪಿ ನಾಯಕರು ತಿಳಿಸಿದ್ದರು. ಹೀಗಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.

ಜತೆಗೆ, ಬಿಜೆಪಿ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ‘ಟಿವಿ9’ ಗೆ ಮಾಹಿತಿ ನೀಡಿವೆ. ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರೂ ಆಗಿರುವ ಚಿಂಚನಸೂರ್, 2019 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದರು.

ದೇವರು ಅವಕಾಶ ನೀಡುತ್ತಾನೆ: ಡಿ.ಕೆ.ಶಿವಕುಮಾರ್​

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್​ ದೇವರು ವರ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ನೀಡುತ್ತಾನೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಡವರಿಗೆ ಅನುಕೂಲವಾಗಲಿದೆ. ಹೀಗಾಗಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್​​ಗೆ ಬರುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ವಿಚಾರ ಮಾತನಾಡಿ, ಇವತ್ತೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಬ್ಬ ಆಚರಣೆಗೆ ಬಂದಿದ್ದೇವೆ. ನಾಳೆನೋ ನಾಡಿದ್ದೋ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ನಾಳೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ: ಖರ್ಗೆ ತವರಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು

ನಾಳೆ ಕೂಡ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ. ನಾನೇ ಮತ್ತೆ ಸಿಎಂ ಆಗುತ್ತೇನೆ ಎಂದು ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬೊಮ್ಮಾಯಿ‌ ನಾಯಕತ್ವ ಅಂತಾ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದರು. ಉರಿಗೌಡ ನಂಜೇಗೌಡ ಬಗ್ಗೆ ಇನ್ನೊಂದು ದಿನ ಮಾತಾಡುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:29 pm, Wed, 22 March 23