Congress Candidates List: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಲ್ಲ
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈ ಹಿಂದೆ ತಿಳಿಸಿದ್ದ ಪ್ರಕಾರ ಇಂದು (ಮಾರ್ಚ್ 22) ಬಿಡುಗಡೆಯಾಗಬೇಕಿತ್ತು. ಆದರೆ, ಪಟ್ಟಿ ಬಿಡುಗಡೆ ಮುಂದೂಡಿಕೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ (Congress Candidates List) ಈ ಹಿಂದೆ ತಿಳಿಸಿದ್ದ ಪ್ರಕಾರ ಇಂದು (ಮಾರ್ಚ್ 22) ಬಿಡುಗಡೆಯಾಗಬೇಕಿತ್ತು. ಆದರೆ, ಪಟ್ಟಿ ಬಿಡುಗಡೆ ಮುಂದೂಡಿಕೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮಾಹಿತಿ ನೀಡಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಬಹುದು ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ಹಬ್ಬ ಹಾಗೂ ಇತರ ಕೆಲವು ಕಾರಣಗಳಿಂದ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿಲ್ಲ. ಹಬ್ಬಕ್ಕಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಯುಗಾದಿಯಂದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, 125 ಸ್ಥಾನಗಳ ಅಭ್ಯರ್ಥಿಗಳು ಯಾರೆಂಬುದು ಗೊತ್ತಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧಿಸದಂತೆ ಹೈಕಮಾಂಡ್ ಸೂಚಿಸಿರುವುದು, ಕೊನೇ ಕ್ಷಣದಲ್ಲಿ ಅವರು ಬೇರೆ ಕ್ಷೇತ್ರ ಆಯ್ಕೆ ಮಾಡಬೇಕಾಗಿ ಬಂದಿರುವ ಕಾರಣ ಮೊದಲ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಜನವರಿಯಲ್ಲಿ ಘೋಷಿಸಿದ್ದರು. ಆದರೆ ದೆಹಲಿಯಲ್ಲಿ ಕಳೆದ ವಾರ ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ನಂತರ ಮಾಜಿ ಸಿಎಂ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುತ್ತಿದ್ದಾರೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 125 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಕಳೆದ ವಾರ ಸಭೆಯ ಬಳಿಕ ಅವರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Siddaramaiah: ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ ಎಂದ ಸಿದ್ದರಾಮಯ್ಯ; ನಾಳೆಯೇ ಗೊಂದಲಕ್ಕೆ ತೆರೆ?
ಈ ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಉಸ್ತುವಾರಿ ಕೆಸಿ ವೇಣುಗೋಪಾಲ್ ಯಾವಾಗ ಪಟ್ಟಿ ಬಿಡುಗಡೆ ಮಾಡುವರೋ ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಸಿದ್ದರಾಮಯ್ಯ ಮಂಗಳವಾರ ಮಾತನಾಡಿ, ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿರುವುದು ಮತ್ತೆ ಕುತೂಹಲಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯ ಅವರು ತಮ್ಮ ಆಯ್ಕೆಯ ಕ್ಷೇತ್ರಗಳ ಪೈಕಿ ಮತ್ತೆ ಕೋಲಾರವನ್ನು ಹೆಸರಿಸಿರುವುದು, ಅಲ್ಲಿಂದ ಸ್ಪರ್ಧಿಸುವ ವಿಚಾರದಲ್ಲಿ ಅವರು ಇನ್ನೂ ಆಶಾವಾದಿಯಾಗಿದ್ದಾರೆಯೇ? ಆ ನಿಟ್ಟಿನಲ್ಲಿ ಹೈಕಮಾಂಡ್ ಮನವೊಲಿಸುವ ಯತ್ನ ನಡೆಸಿದ್ದಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿತ್ತು. ಮತ್ತೆ ವರುಣಾ ಕ್ಷೇತ್ರಕ್ಕೆ ಯತೀಂದ್ರ ಬರುವುದನ್ನು ತಳ್ಳಿ ಹಾಕುವಂತಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದೂ ಅವರು ಹೇಳಿದ್ದರು. ಇದೇ ಕಾರಣಕ್ಕೆ ಪಟ್ಟಿ ಬಿಡುಗಡೆ ಮುಂದೂಡಲಾಗಿದೆಯೇ ಎಂಬ ಕುತೂಹಲ ಈಗ ಸೃಷ್ಟಿಯಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ