ಬಳ್ಳಾರಿ: ಮತ್ತೊಮ್ಮೆ ರಾಜ್ಯದಲ್ಲಿ ಶ್ರೀಕೃಷ್ಣ ದೇವರಾಯ ಆಡಳಿತ ಬರಬೇಕು. ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್‌ನ ಆಡಳಿತ ಬೇಡ. ಶ್ರೀಕೃಷ್ಣ ದೇವರಾಯರನ್ನು ಆರಾಧಿಸುವ ಸರ್ಕಾರ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ. ಜಿಲ್ಲೆಯ ಕಂಪ್ಲಿಯಲ್ಲಿ ನಡೆದ ಬಿಜೆಪಿ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಪ್ಪು ಸಂತಾನ ಬೇಕಾ? ಶ್ರೀಕೃಷ್ಣ ದೇವರಾಯರ ಸಂತಾನ ಬೇಕಾ? ಈ ಬಗ್ಗೆ ಜನರೇ ತೀರ್ಮಾನ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ. ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಜಗಳ, ಬೀದಿ ಕಾಳಗ ನಡೆಯುತ್ತಿದೆ. ಇಬ್ಬರನ್ನು ಮನೆ ಕಳುಹಿಸಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಬಿಜೆಪಿ ಸಂಘಟನಾತ್ಮಕ ಆಧಾರದಲ್ಲಿ ಪೇಜ್ ಪ್ರಮುಖರ ಸಭೆ ನಡೆಯುತ್ತಿದೆ.
ಡಿ.ಕೆ.ಶಿವಕುಮಾರ್ ಅವರ ಪಕ್ಷದ ಪದಾಧಿಕಾರಿಗಳ ಸಭೆ ಸಹ ಮಾಡಲು ಆಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರೇ ಇಲ್ಲ. ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಕಾರ್ಯಕರ್ತರ ಧ್ವನಿ ಅಡಗಿಸಿದ್ದಾರೆ. ಇಂದಿರಾಗಾಂಧಿ ಕಾಲಘಟ್ಟದಲ್ಲಿ ಚುನಾವಣೆಗೆ ಕಾಂಗ್ರೆಸ್ನಿಂದ ಲೈಟ್ ಕಂಬ ನಿರ್ಮಿಸಿದರೂ ಗೆಲುವು ಸಾಧಿಸುತ್ತಿದ್ದ ಸಂದರ್ಭವೊಂದಿತ್ತು. ಆದರೆ ಇವತ್ತು ರಾಹುಲ್ ಗಾಂಧಿ ವೈನಾಡಿನಲ್ಲಿ ಬಂದೂ ಸ್ಪರ್ಧೆ ಮಾಡಬೇಕಾಯಿತು. ಇವತ್ತು ಸಿದ್ದರಾಮಯ್ಯಗೂ ಸಹ ಕ್ಷೇತ್ರ ಇಲ್ಲದಾಗಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ನರಹಂತಕ ಸಿಎಂ ಆಗಿದ್ದರು, ವರುಣಾ ಜನ ಬರಬೇಡಿ ಅಂತ ಕಲ್ಲು ಹಿಡಿದು ನಿಂತಿದ್ದಾರೆ: ಕಟೀಲ್
ಸಿದ್ದರಾಮಯ್ಯ ಬಾದಾಮಿಗೆ ಬಂದರೆ ಓಡಿಸುತ್ತಾರೆ. ವರುಣಾದಲ್ಲಿ ನಿಂತರೆ ಸೋಲುತ್ತಾರೆ. ಕೋಲಾರದಲ್ಲಿ ಮುನಿಯಪ್ಪ ಸಿದ್ದರಾಮಣ್ಣನನ್ನ ಸೋಲಿಸಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ಬದಾಮಿಯಲ್ಲಿ ಸ್ಪರ್ಧೆ ಮಾಡಲಿ. ನಮ್ಮ ತಾಕತ್ತು ತೋರಿಸುತ್ತೇವೆ ಎಂದರು.
ಇವತ್ತು ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಜಗತ್ತಿನ ಎಲ್ಲ ದೇಶಗಳು ಭಾರತವನ್ನ ನೋಡುತ್ತಿವೆ. ಮನಮೋಹನ್ ಆಡಳಿತ ಇದ್ದಾಗ ಕಾಶ್ಮೀರದಿಂದ ಸೈನಿಕರು ಸತ್ತಾಗ ಸೈನಿಕರ ಮೃತದೇಹ ತರಲು ಆಗಲಿಲ್ಲ. ಆದರೆ ಉಕ್ರೇನ್ನಲ್ಲಿ ಯುದ್ಧ ನಡೆದಾಗ ನವೀನನ ಮೃತದೇಹವನ್ನ ಮೋದಿ ಮರಳಿ ದೇಶಕ್ಕೆ ತಂದರು. ಭಾರತ ಬದಲಾವಣೆ ಆಗುತ್ತಿದೆ. ಭಾರತ ಜೋಡೋ ಮಾಡಿದ್ದು ರಾಹುಲ್ ಗಾಂಧಿ ಅಲ್ಲ. ಭಾರತ ಜೋಡೋ ಮಾಡಿದ್ದು ನರೇಂದ್ರ ಮೋದಿ. ವಿವೇಕಾನಂದರು ಕಂಡ ಹಾಗೆ ದೇಶ ಬದಲಾವಣೆ ಆಗುತ್ತಿದೆ ಎಂದರು.
ಕೋವಿಡ್ ಬಂದಾಗ ದೇಶದ ಜನರು ಸಾಯುವ ವೇಳೆ ಜನರನ್ನು ಉಳಿಸಿದ್ದು ಮೋದಿ. ನೀವೂ ಕೊಟ್ಟ ಒಂದೊಂದು ವೋಟ್ನಿಂದಾಗಿ ಮೋದಿ ಅಧಿಕಾರಕ್ಕೆ ಬಂದರು. ಅವರು ಲಸಿಕೆ ಕಂಡು ಹಿಡಿದು ಜನರ ಜೀವ ಉಳಿಸಿದರು. ಲಸಿಕೆ ಕಂಡು ಹಿಡಿದಾಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ಲಸಿಕೆ ತಗೆದುಕೊಳ್ಳಬೇಡಿ ಅಂದರು. ಲಸಿಕೆ ತಗೆದುಕೊಂಡರೆ ಮಕ್ಕಳು ಆಗಲ್ಲ ಅಂತಾ ಜನರನ್ನು ಹೆದರಿಸಿದರು. ಆದರೆ ಅವರೇ ಕದ್ದು ಮುಚ್ಚಿ ರಾತ್ರಿ ಲಸಿಕೆ ಪಡೆದರು ಎಂದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ 24 ಹಿಂದುಗಳ ಹತ್ಯೆಯಾಯಿತು, ರೈತರ ಆತ್ಮಹತ್ಯೆ ಆದಾಗ ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬರಲಿಲ್ಲ. ಪಿಎಫ್ಐಗೆ ನಿಷೇಧ ಮಾಡಿದಕ್ಕೆ ಸಿದ್ದರಾಮಯ್ಯಗೆ ಕಣ್ಣಿರು ಬರುತ್ತದೆ. ಕರ್ನಾಟಕದಿಂದ 350 ಜನ ಭಯೋತ್ಪಾದಕರನ್ನ ಎನ್ಐಎ ಬಂಧಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಗೋಹತ್ಯೆ ನಿಷೇದ ಕಾಯ್ದೆ ವಾಪಸ್ ಪಡೆದರು. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಜಾತಿವಾದ ಮಾಡಿದರು, ಶಾದಿ ಭಾಗ್ಯ ತಂದು. ಕೆಲವು ಮುಸ್ಲಿಂರಿಗೆ ಮಾತ್ರ ಶಾದಿ ಭಾಗ್ಯ ನೀಡಿದರು ಎಂದರು. ಕಂಪ್ಲಿ ಶಾಸಕರು ಎಲ್ಲಿ ಅಡಗಿದ್ದಾರೆ? ಕ್ಷೇತ್ರವನ್ನ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಕಂಪ್ಲಿಯನ್ನ ಮಾದರಿ ಕ್ಷೇತ್ರ ಮಾಡಲಾಗುವುದು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Mon, 13 February 23