ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯದಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ನಾಯಕರು ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಳ್ಳುತ್ತಿದ್ದು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಾಜಕೀಯ ವಾಕ್ಸಮರಗಳೂ ತಾರಕಕ್ಕೇರುತ್ತಿವೆ. ರಾಜ್ಯ ರಾಜಕೀಯ ವಿದ್ಯಮಾನಗಳ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿ ಲಭ್ಯವಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಎರಡು ದಿನ ಹಿಂದಷ್ಟೇ ಜಿಲ್ಲೆಗೆ ಭೇಟಿ ನೀಡಿದ್ದರು. ಈ ಮಧ್ಯೆ ಜೆಡಿಎಸ್ನಲ್ಲಿ ಟಿಕೆಟ್ ಫೈಟ್ ಮುಂದುವರಿದಿದೆ. ಎಲ್ಲ ಬೆಳವಣಿಗೆಗಳ ಲೈವ್ ಅಪ್ಡೇಟ್ ಇಲ್ಲಿದೆ.
ಹುಬ್ಬಳ್ಳಿ: ಎಲ್ಲ ನೌಕರಿಗಳೂ ಬಿಕರಿಯಾಗುತ್ತಿವೆ. ಉದ್ಯೋಗಕ್ಕಾಗಿ ಜಮೀನು, ಅಂಗಡಿ ಎಲ್ಲವನ್ನೂ ಮಾರುವಂತಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಸಿಎಂ ಪೋಸ್ಟ್ ಖರೀದಿಸಲಾಗಿದೆ ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. ಅಶ್ವತ್ಥನಾರಾಯಣ ಸಿದ್ಧರಾಮಯ್ಯಗೆ ಹೊಡೆದು ಹಾಕಿ ಅಂತಾರೆ. ಇವರು ಹೀಗೆ ಮಾತನಾಡೋದು ಇದೇ ಮೊದಲಲ್ಲ. ಹೊಡಿ, ಬಡಿ, ಕಡಿ ಅನ್ನೋದು ಗೋಡ್ಸೆ ಸಂಸ್ಕೃತಿ. ಇಂತಹ ಹಿಂಸೆಯ ಸಂಸ್ಕೃತಿಗೆ ನಮ್ಮ ಹಲವಾರು ಮುಖಂಡರು ಬಲಿಯಾಗಿದ್ದಾರೆ. ಇಂತಹ ಹಿಂಸಾ ರಾಜಕಾರಣಕ್ಕೆ ನಾವು ಎದೆಗುಂದಿಲ್ಲ. ಕೇವಲ ಸಿದ್ಧರಾಮಯ್ಯ, ಡಿಕೆಶಿವಕುಮಾರ್ ಕೊಂದು ಹಾಕಿದರೆ ಎಲ್ಲವೂ ಮುಗಿಯುತ್ತೆ ಅಂದುಕೊಂಡಿದ್ದಾರೆ. ಎಲ್ಲರನ್ನೂ ಕೊಂದು ಹಾಕಿ. ಆದರೆ ನಮ್ಮ ಧ್ವನಿಯನ್ನು ಹತ್ತಿಕ್ಕಲು ಆಗಲ್ಲ. ದೈಹಿಕವಾಗಿ ನಮ್ಮನ್ನು ಕೊಲ್ಲಬಹುದು. ಆದರೆ ನಮ್ಮ ಸಿದ್ಧಾಂತ ಅಂತ್ಯಗೊಳಿಸಲು ಆಗಲ್ಲ. ಎದುರಿಗೇ ನಿಂತಿದ್ದೇವೆ ಗುಂಡಿಟ್ಟು ಹೊಡೀರಿ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿಗೆ ಸವಾಲು ಹಾಕಿದರು.
ಕೊಪ್ಪಳ: ನನ್ನನ್ನು ಮುಗಿಸಿ ಬಿಡಿ ಅಂತ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ನಿಮಗೆ ಒಪ್ಪಿಗೆ ಇದ್ದರೆ ನನಗೂ ಒಪ್ಪಿಗೆ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮಾವೇಶದಲ್ಲಿ ಹೇಳಿದ್ದಾರೆ. ಕಾನೂನು ಪಾಲನೆ ಮಾಡಬೇಕಾದ ಸಚಿವರೇ ಹೀಗೆ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನು ಕುರುಬ ಸಮುದಾಯದಲ್ಲಿ ಜನಿಸಿದ್ದು ಆಕಸ್ಮಿಕ. ಸ್ವಾರ್ಥಕ್ಕಾಗಿ ದೇವರ ಪೂಜೆ ಮಾಡಿದರೆ ದೇವರು ಒಲಿಯುವುದಿಲ್ಲ. ದೇವರ ಬಳಿ ನನಗೆ ಒಳ್ಳೆಯದಾಗಲಿ ಎಂದು ಯಾರೂ ಕೇಳಬಾರದು. ರಾಜಕಾರಣಿಗಳು ನಮ್ಮ ಸಮುದಾಯದ ನಡುವೆ ಒಡಕು ತಂದಿಡುತ್ತಾರೆ. ಅವನ್ಯಾರೋ ಟಿಪ್ಪು ರೀತಿ ಮುಗಿಸಿ ಅಂತಾನೆ ಇದು ಸಂಸ್ಕೃತಿ ಏನ್ರೀ. ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ಸಿದ್ದರಾಮಯ್ಯ ಮತ್ತೆ ಕಿಡಿಕಾರಿದರು. ಒಬ್ಬ ಮನುಷ್ಯ ಮನುಷ್ಯನನ್ನೇ ದ್ವೇಷ ಮಾಡುವವರು ರಾಕ್ಷಸರು ಎಂದರು.
ಪ್ರಲ್ಹಾದ್ ಜೋಶಿಯನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಬಾಲಿಶ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಶತಮಾನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರು ಸಿಗುತ್ತಾರೆ. ಅವರ ಕೈಕೆಳಗೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ಜೋಶಿ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, ಕಾಂಗ್ರೆಸ್ ಮೇಲೆ ಅವರಿಗೇ ಗ್ಯಾರಂಟಿ ಇಲ್ಲ. ಅದಕ್ಕೆ ಅವರು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರು ದೌರ್ಭಾಗ್ಯದಿಂದ ವೈಯಕ್ತಿಕ ಟೀಕೆ ಮಾಡ್ತಿದ್ದಾರೆ. ಚುನಾವಣೆ ವೇಳೆ ಕಾಲೆಳೆಯೋದು ಹಕ್ಕು ಎಂದು ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಾರ್ಟಿ ಮೇಲೆ ಜನ ಹೂ ಇಟ್ಟಿದ್ದಾರೆ. ಜನ ಹೂ ಇಟ್ಟಿದ್ದು ನೋಡಿದರೆ ಕಾಂಗ್ರೆಸ್ಗೆ ಎದ್ದು ಬರಲು ಆಗದ ಪರಿಸ್ಥಿತಿ ಆಗಲಿದೆ. ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾವೇ ಅಂತಾ ಜನರ ಕಿವಿ ಮೇಲೆ ಹೂ ಇಟ್ಟಿದ್ದರು ಕಾಂಗ್ರೆಸ್ನವರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಫೆ. 23ಕ್ಕೆ ಸಂಡೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಸಂಡೂರಿನಲ್ಲಿ ಸಾರ್ವಜನಿಕ ಸಮಾವೇಶ ಹಾಗೂ ತೋರಣಗಲ್ನಲ್ಲಿ ನಾಲ್ಕು ಜಿಲ್ಲೆ ಬಿಜೆಪಿ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಬಜೆಟ್ ವೇಳೆ ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದು ಶಿಷ್ಟಾಚಾರ ಪಾಲಿಸದೆ ಅಗೌರವ ತೋರಿದ್ದಾರೆ. ಪ್ರಚಾರಕ್ಕಾಗಿ ಕಾಂಗ್ರೆಸ್ನವರು ಡ್ರಾಮಾ ಕಂಪನಿ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷ ಡ್ರಾಮಾ ಕಂಪನಿ ಇದ್ದಂತೆ ಎಂದು ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.
ಬಿಜೆಪಿ ಪೋಸ್ಟರ್ ಮೇಲೆ ಹೂ ಇರುವ ಪೋಸ್ಟರ್ ಇಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು. ‘ಸಾಕಪ್ಪ ಸಾಕು ಕಿವಿಮೇಲೆ ಹೂವ’ ಎಂದು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಫೋಸ್ಟರ್ಗಳನ್ನು ಅಂಟಿಸಿದ್ದಾರೆ. ಬಿಜೆಪಿಯ ಪೋಸ್ಟರ್ಗಳ ಮೇಲೆ ಕಾಂಗ್ರೆಸ್ ಪೋಸ್ಟರ್ ಅಂಟಿಸಲಾಗುತ್ತಿದೆ.
ಮಾಜಿಸಚಿವ ಎಚ್.ಡಿ.ರೇವಣ್ಣ ಅವರನ್ನು ರಾವಣನಿಗೆ ಹೋಲಿಕೆ ಮಾಡಿ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾವಣನಿಗೆ ಸಕಲ ಐಶ್ವರ್ಯ ಇತ್ತು, ಈಶ್ವರನಿಂದ ಪಡೆದಂತಹ ಶಕ್ತಿಶಾಲಿ ಅಸ್ತ್ರಗಳಿದ್ದರೂ ಅವನು ನಾಶವಾದ. ಲಂಕೆನೂ ಕೂಡ ಬೂದಿ ಆಗಲಿಲ್ವಾ, ಯಾರೂ ಶಾಶ್ವತ ಅಲ್ಲ. ದೇವೇಗೌಡರನ್ನು ಇವರೆಲ್ಲ ಉತ್ಸವಮೂರ್ತಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ದಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿದ್ದಾರೆ, ಅವರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಶಾಸಕ ಎ.ಟಿ.ರಾಮಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರ ನಿವಾಸದಲ್ಲಿ ಇಂದು ಪಕ್ಷದ ಸಭೆ ನಡೆಯಲಿದೆ. ಗೌಡರ ಕುಟುಂಬದ ಸದಸ್ಯರೆಲ್ಲ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಎಚ್ಡಿ ರೇವಣ್ಣ ಮೂರು ಬೇಡಿಕೆಗಳನ್ನಿಟ್ಟಿದ್ದಾರೆ ಎನ್ನಲಾಗಿದೆ. ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ವಿಚಾರವಾಗಿ ಗೊಂದಲಕ್ಕೆ ತೆರೆ ಎಳೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ, ನಂತರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
Published On - 8:11 am, Sat, 18 February 23