ಹುಬ್ಬಳ್ಳಿ, ಸೆಪ್ಟೆಂಬರ್ 11: ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆ ಆಗಬೇಕಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ನೆಪ ಹೇಳುತ್ತಾ ಮುಂದೂಡಿಕೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಮಾತನಾಡಿದ ಅವರು, ಬರ ಪೀಡಿತ ತಾಲೂಕುಗಳ ಬಗ್ಗೆ ಜೂನ್‌ನಲ್ಲಿ ಕೇಳಿದ್ರೆ ಜುಲೈನಲ್ಲಿ ಘೋಷಣೆ ಮಾಡುತ್ತೇವೆ ಅಂತಾರೆ. ಜುಲೈನಲ್ಲಿ ಕೇಳಿದ್ರೆ ಆಗಸ್ಟ್ ಅಂತಾರೆ. ಆಗಸ್ಟ್ ಮುಗಿದು ಸೆಪ್ಟೆಂಬರ್ ಬಂದರೂ ಬರ ಘೋಷಣೆ ಮಾಡುತ್ತಿಲ್ಲ. ಎಲ್ಲಾ ವಿಚಾರಗಳಲ್ಲೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಆಗ್ತಿದೆ ಎಂದರು.
ಸರ್ಕಾರ ತನ್ನ ಕೆಲಸ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಸರ್ಕಾರದ ಗೃಹಲಕ್ಷ್ಮೀ ಯೋಜನೆ ಕೆಲವು ಮಹಿಳೆಯರಿಗೆ ಮಾತ್ರ ಸಿಕ್ಕಿದೆ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಲು ಆರಂಭವಾಗಿದೆ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಅವರು ತಿಳಿಸಿದರು.
ಎಂಎಲ್ಸಿ ಪ್ರದೀಪ್ ಶೆಟ್ಟರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅಲರ್ಟ್ ಆಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿತ್ತು.
ಇದನ್ನೂ ಓದಿ: ಪ್ರದೀಪ್ ಶೆಟ್ಟರ್ ಅಸಮಾಧಾನ ಬೆನ್ನಲ್ಲೇ ಬಿಜೆಪಿ ಅಲರ್ಟ್; ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ
ಕೋರ್ ಕಮಿಟಿ ಸಭೆಗೆ ಗೈರಾಗಿರುವ ಬಗ್ಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಅನುಮತಿ ಪಡೆದುಕೊಂಡೇ ನಾನು ಸಭೆಗೆ ಗೈರಾಗಿದ್ದೇನೆ. ಅನ್ಯ ಕೆಲಸ ನಿಮಿತ್ತ ಅನುಮತಿ ಪಡೆದು ನಾನು ಬೆಂಗಳೂರಿಗೆ ಬಂದಿದ್ದೇನೆ ಎಂದು ತಿಳಿಸಿದರು.
ನಾನು ಗುಜರಾತ್, ರಾಜಸ್ಥಾನ ಪ್ರವಾಸದಲ್ಲಿದ್ದೇನೆ. ಸರ್ವಪಕ್ಷಗಳ ಅಧ್ಯಯನಕ್ಕೆ ಗುಜರಾತ್, ರಾಜಸ್ಥಾನ ಪ್ರವಾಸ ಕೈಗೊಂಡಿದ್ದೇನೆ. ಹೀಗಾಗಿ ಕೋರ್ ಕಮೀಟಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಎಂಎಲ್ಸಿ ಪ್ರದೀಪ್ ಶೆಟ್ಟರ್ ‘ಟಿವಿ9’ಗೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ