ಮೈಸೂರು: ಉಪ ಚುನಾವಣೆಗೆ ಹಣ ಪಡೆದಿದ್ದರು ಎನ್ನುವ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ಹೇಳಿಕೆಗೆ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H vishwanath) ಪ್ರತಿಕ್ರಿಯಿಸಿದ್ದು, ಉಪ ಚುನಾವಣೆ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಸೈನಿಕನ ಕೈಯಲ್ಲಿ ದುಡ್ಡು ಕೊಟ್ಟು ಕಳುಹಿಸಿದ್ದರು. ಆದರೆ ಆ ಸೈನಿಕ ಹುಣಸೂರಿಗೆ ಬರಲಿಲ್ಲ ಎಂದು ತಿರುಗೇಟು ನೀಡಿದರು.
ಮೈಸೂರಿನಲ್ಲಿ (Mysuru) ಇಂದು(ಡಿಸೆಂಬರ್ 17) ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಚುನಾವಣೆ ಎಂದ ಮೇಲೆ ಪಕ್ಷ ದುಡ್ಡು ಕೊಡುವುದು ಸಹಜ. ಲೆಕ್ಕ ಕೇಳಲು ಶ್ರೀನಿವಾಸ್ ಪ್ರಸಾದ್ ಯಾರು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷದವರು ದುಡ್ಡು ಕೊಡುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ಟಾಂಗ್ ಕೊಟ್ಟರು.
ಶ್ರೀನಿವಾಸ್ ಪ್ರಸಾದ್ ಅವರಿಗೆ ಅವರಿದ್ದ ಪಕ್ಷಗಳು ಹಣ ನೀಡುವುದಿಲ್ಲವೇ ? ನನಗೆ ಎಷ್ಟು ಕೋಟಿ ಬಂದಿದೆ ಅಂತ ಶ್ರೀನಿವಾಸ್ ಪ್ರಸಾದ್ ಗೆ ಏನು ಗೊತ್ತು ? ಅವರಿಗೆ ಗೊತ್ತಿಲ್ಲದ ವಿಚಾರವನ್ನು ಯಾಕೆ ಮಾತಾನಾಡಬೇಕು ? ಎಂದು ವಿಶ್ವನಾಥ್ ಪ್ರಶ್ನಿಸಿದರು
ಹುಣಸೂರು ಉಪಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಸೈನಿಕನ ಕೈಯಲ್ಲಿ ದುಡ್ಡು ಕೊಟ್ಟು ಕಳುಹಿಸಿದ್ದರು. ಆದ್ರೆ. ಸೈನಿಕ ಹುಣಸೂರಿಗೆ ಬರಲಿಲ್ಲ. ಈ ವಿಚಾರವನ್ನು ಈಗಾಗಲೇ ಹೇಳಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದವರು ದುಡ್ಡು ಕೊಡುತ್ತಾರೆ ಎಂದು ಹೇಳಿದರು.
ಶ್ರೀನಿವಾಸ ಪ್ರಸಾದ್ ದಲಿತರ ಕಷ್ಟಕ್ಕಾಗದ ರಾಜಕಾರಣಿ
ಮುರುಘಾಶ್ರೀ ದಲಿತ ಹೆಣ್ಣು ಮಗಳ ಮೇಲೆ ದೌರ್ಜನ್ಯ ಎಸಗಿದ್ರು. ಅಂಬೇಡ್ಕರ್ ಮೊಮ್ಮಗ ಆನಂದ್ರನ್ನು ಬಂಧಿಸಿ ಜೈಲಿಗೆ ಕಳಿಸಿದ್ರು. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಯಾವ ಸಂದರ್ಭದಲ್ಲಾದರೂ ನೀವು ಧ್ವನಿ ಎತ್ತಿದ್ದೀರಾ?. ಯಾವುದೋ ಬೀದಿ ರೌಡಿ ರೀತಿ ಮಾತನಾಡುತ್ತಿದ್ದೀರಿ. ನನ್ನ ಬಗ್ಗೆ ನೀವು ಬಳಸಿರುವ ಪದಗಳನ್ನ ಜನ ಕ್ಷಮಿಸಲ್ಲ ಎಂದು ಸಂಸದ ಶ್ರೀನಿವಾಸ ಪ್ರಸಾದ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಶ್ರೀನಿವಾಸ್ ಪ್ರಸಾದ್ ಹೇಳಿದ್ದೇನು?
ಚುನಾವಣೆಗೆ ಕೇವಲ 4 ರಿಂದ 5 ಲಕ್ಷ ಖರ್ಚು ಮಾಡಿದ್ದಾರೆ. 10 ಕೋಟಿ ಮನೆಗೆ ತಗೆದುಕೊಂಡು ಹೋಗಿದ್ದಾರೆ. ಪೆಟ್ರೋಲ್ ಬಂಕ್, ಬಾರ್ ಮಾಡಿಕೊಂಡಿದ್ದು ಯಾವ ಹಣದಲ್ಲಿ ಹೇಳಿ? ನಾನು ಜೆಡಿಎಸ್ ರಾಜ್ಯಾದ್ಯಕ್ಷ ಆದರೂ ಕೆ.ಆರ್.ನಗರ ಪುರಸಭೆಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ನನಗೆ ಅವಮಾನ ಮಾಡಿದರು ಅಂತ ನನ್ನ ಮನೆಗೆ ಬಂದೆ. ನಾನು ಯಡಿಯೂರಪ್ಪ ಅವರ ಬಳಿ ಮುಖಾಮುಖಿಯಾಗಿ ಮಾತನಾಡಿ ಅಂದಿದ್ದೆ. ವಿಶ್ವನಾಥ್‌ಗೆ ಕಾಂಗ್ರೆಸ್‌ನಿಂದ ಏನು ಅನ್ಯಾಯ ಆಗಿದೆ. ಸೋತ ಮೇಲೆ ಸಿದ್ದರಾಮಯ್ಯ ಅವರ ಬಳಿ ದುಡ್ಡು ಕೇಳಿ, ಅಧಿಕಾರವನ್ನೂ ಕೇಳಿದ್ದರು. ಹೀಗಾಗಿಯೇ ವಿಶ್ವನಾಥ್ ಕಾಂಗ್ರೆಸ್ ಬಿಟ್ಟರು ಎಂದು ಹೇಳಿದ್ದರು.