BJP Janaspandana: ಬಿಜೆಪಿ ಜನಸ್ಪಂದನ ಸಮಾವೇಶಕ್ಕೆ ಬೃಹತ್ ವೇದಿಕೆ, ಭರ್ಜರಿ ಸಿದ್ಧತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 09, 2022 | 12:40 PM

ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆಯ ಮೇಲೆ 30 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

BJP Janaspandana: ಬಿಜೆಪಿ ಜನಸ್ಪಂದನ ಸಮಾವೇಶಕ್ಕೆ ಬೃಹತ್ ವೇದಿಕೆ, ಭರ್ಜರಿ ಸಿದ್ಧತೆ
ಜನೋತ್ಸವಕ್ಕಾಗಿ ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಗೆ ಹೊಂದಿಕೊಂಡಂತೆ ಹಲವೆಡೆ ಫ್ಲೆಕ್ಸ್​ಗಳನ್ನು ಅಳವಡಿಸಲಾಗಿದೆ.
Follow us on

ಬೆಂಗಳೂರು: ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ ಆಡಳಿತಾರೂಢ ಬಿಜೆಪಿ ಆಯೋಜಿಸಿರುವ ಬೃಹತ್ ‘ಜನಸ್ಪಂದನ ಸಮಾವೇಶ’ಕ್ಕೆ (BJP Janaspandan) ಬಿಜೆಪಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆಯ ಮೇಲೆ 30 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಇತರೆಡೆ 15 ಎಲ್​​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ.

ಈ ಹಿಂದೆ ‘ಬಿಜೆಪಿ ಜನೋತ್ಸವ’ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸಲು ಸರ್ಕಾರ ಮುಂದಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ನಂತರ ಸಚಿವ ಉಮೇಶ್ ಕತ್ತಿ ಸಾವಿನ ಹಿನ್ನೆಲೆಯಲ್ಲಿ ಸಮಾವೇಶವನ್ನು ಸರ್ಕಾರವು ಮುಂದೂಡಿತ್ತು. ನಿನ್ನೆಗೆ (ಸೆಪ್ಟೆಂಬರ್ 8) ಜನೋತ್ಸವದ ದಿನಾಂಕ ಮರುನಿಗದಿಯಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಹೆಸರನ್ನು ಜನೋತ್ಸವದ ಬದಲು, ಜನಸ್ಪಂದನ ಎಂದು ಬದಲಿಸಿದ ಸರ್ಕಾರವು ಸಮಾವೇಶವನ್ನೂ ಎರಡು ದಿನ ಮುಂದೂಡಿತ್ತು.

ಸಮಾವೇಶಕ್ಕಾಗಿ ಬೃಹತ್ ವೇದಿಕೆ‌ ನಿರ್ಮಾಣ ಮಾಡಲಾಗಿದೆ. 100*140 ಅಡಿ‌ ಉದ್ದ ಮತ್ತು ಅಗಲದ ಈ ವೇದಿಕೆಯ‌ ಮೇಲೆ 300 ಗಣ್ಯರಿಗೆ ಆಸನದ ವ್ಯವಸ್ಥೆಯಿದೆ. ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ವೇದಿಕೆಯ ಹಿಂಭಾಗದಲ್ಲಿ 15 ಅಡಿ ಎತ್ತರ, 90 ಅಡಿ‌ ಅಗಲದ ಬೃಹತ್ ಎಲ್ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ. ವೇದಿಕೆ ಕಾಣದವರು ಎಲ್ಇಡಿ ಸ್ಕ್ರೀನ್ ಮೂಲಕ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಇಡಿ ಸ್ಕ್ರೀನ್ ಅಳವಡಿಸುವ ಕಾರ್ಯವನ್ನು ಸಿಬ್ಬಂದಿ ಈಗಾಗಲೇ ಆರಂಭಿಸಿದ್ದಾರೆ.

ಹಲವು ಬಾರಿ ಜನೋತ್ಸವ ಮುಂದೂಡಿಕೆ: ಕೋಟ್ಯಂತರ ನಷ್ಟ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮತ್ತು ಸಚಿವ ಉಮೇಶ ಕತ್ತಿ ನಿಧನದಿಂದಾಗಿ ಎರಡು ಬಾರಿ ಜನೋತ್ಸವವನ್ನು ಮುಂದೂಡಲಾಯಿತು. ಎರಡೂ ಬಾರಿ ಉತ್ಸವಕ್ಕಾಗಿ ಊಟೋಪಚಾರ ಸಿದ್ಧಪಡಿಸಿಕೊಂಡಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಕಳೆದ ಗುರುವಾರ (ಸೆ 8) ಜನೋತ್ಸವ ಮುಂದೂಡಿಕೆಯಾಗಿದ್ದರಿಂದ ₹ 1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ಬುಧವಾರ (ಸೆ 7) ಮಧ್ಯಾಹ್ನ 1 ಗಂಟೆಯವರೆಗೂ ಜನೋತ್ಸವಕ್ಕಾಗಿ ಅಗತ್ಯ ಸಿದ್ಧತೆ ನಡೆದಿತ್ತು. ಬಂದೋಬಸ್ತ್​ಗಾಗಿ ಸುಮಾರು 2,000 ಪೊಲೀಸ್ ಸಿಬ್ಬಂದಿಯೂ ದೊಡ್ಡಬಳ್ಳಾಪುರಕ್ಕೆ ತಲುಪಿದ್ದರು.

ಊಟಕ್ಕಾಗಿ ಬುಧವಾರ ಸಂಜೆಯಿಂದಲೇ ತರಕಾರಿ ಕತ್ತರಿಸಿ ಸಿದ್ಧ ಮಾಡಲಾಗಿತ್ತು. ಇವೆಲ್ಲವೂ ವ್ಯರ್ಥವಾದವು. ಕಳೆದ ಬಾರಿ ಜನೋತ್ಸವ ಮುಂದೂಡಿದಾಗಲೂ ಸಿದ್ಧಪಡಿಸಿಟ್ಟಿದ್ದ ಅಪಾರ ಪ್ರಮಾಣದ ಅಡುಗೆ ಹಾಳಾಗಿತ್ತು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಮಳೆ ಸುರಿದಿದ್ದರಿಂದ ರಘುನಾಥಪುರ ಗ್ರಾಮದ ಸಮೀಪ ವಾಹನಗಳ ನಿಲುಗಡೆಗಾಗಿ ಸಿದ್ಧಪಡಿಸಲಾಗಿದ್ದ ಪಾರ್ಕಿಂಗ್‌ ಸ್ಥಳಗಳು ಕೆಸರುಗದ್ದೆಯಂತಾಗಿದ್ದವು.

ಕಾರ್ಯಕ್ರಮ ನಡೆಯುವ ಸ್ಥಳದಿಂದ ಬೆಂಗಳೂರಿನ ಯಲಹಂಕದವರೆಗೆ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಜನೋತ್ಸವ ನಡೆಯುವ ಸ್ಥಳದವರೆಗೂ ರಸ್ತೆಯ ಎರಡೂ ಬದಿಯಲ್ಲಿ ಬೃಹತ್‌ ಬ್ಯಾನರ್‌ ಕಟ್ಟಲಾಗಿದೆ. ಬ್ಯಾನರ್‌ ಹಾಗೂ ಬಿಜೆಪಿ ಬಾವುಟ ಕಟ್ಟುವುದಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಊರಿನ ಹೆಸರು ಸೂಚಿಸುವ ಹಾಗೂ ಟ್ರಾಫಿಕ್ ನಿರ್ವಹಣೆಗೆ ಅಳವಡಿಸಿರುವ ಬಹುತೇಕ ಫಲಕಗಳ ಮೇಲೆ ಬಿಜೆಪಿ ನಾಯಕರ ಕಟೌಟ್, ಫ್ಲೆಕ್ಸ್​ಗಳು ರಾರಾಜಿಸುತ್ತಿವೆ. ಹೆಚ್ಚು ಟ್ರಾಫಿಕ್ ಇರುವ ಚಾಚಿಕೊಂಡಂತೆ ಅಡ್ಡಾದಿಡ್ಡಿಯಾಗಿ ಅಳವಡಿಸಿರುವ ಅವೈಜ್ಞಾನಿಕ ಫ್ಲೆಕ್ಸ್​ಗಳು ಅಪಘಾತಗಳಿಗೆ ಕಾರಣವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

Published On - 12:40 pm, Fri, 9 September 22