ಜೆಡಿಎಸ್​ ಜತೆ ಮೈತ್ರಿ ಖಚಿತಪಡಿಸಿದ ಬೊಮ್ಮಾಯಿ, ಶಾ ರವಾನಿಸಿದ ಮಾಹಿತಿ ಬಿಚ್ಚಿಟ್ಟ ಯಡಿಯೂರಪ್ಪ

| Updated By: ರಮೇಶ್ ಬಿ. ಜವಳಗೇರಾ

Updated on: Sep 08, 2023 | 12:32 PM

BJP-JDS Alliance In Karnataka: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಅಂತೆ ಕಂತೆಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದಾರೆ. ಅಲ್ಲದೇ ಜೆಡಿಎಸ್​ಗೆ ಎಷ್ಟು ಸೀಟುಗಳನ್ನು ಎನ್ನುವುದು ಬಿಎಸ್​ವೈ ಬಹಿರಂಗಪಡಿಸಿದ್ದಾರೆ.

ಜೆಡಿಎಸ್​ ಜತೆ ಮೈತ್ರಿ ಖಚಿತಪಡಿಸಿದ ಬೊಮ್ಮಾಯಿ, ಶಾ ರವಾನಿಸಿದ ಮಾಹಿತಿ ಬಿಚ್ಚಿಟ್ಟ ಯಡಿಯೂರಪ್ಪ
ಬೊಮ್ಮಾಯಿ-ದೇವೇಗೌಡ
Follow us on

ಬೆಂಗಳೂರು, (ಸೆಪ್ಟೆಂಬರ್ 08): ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಬಳಿಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆದ್ರೆ, ಕೆಲ ಕಾರಣಾಂತರಗಳಿಂದ ದಳಪತಿಗಳು ಮೈತ್ರಿಯಿಂದ ಒಂದೆಜ್ಜೆ ಹಿಂದಿಟ್ಟಿದ್ದರು. ಇದೀಗ ಮತ್ತೆ ಬಿಜೆಪಿ- ಜೆಡಿಎಸ್ (BJP-JDS) ಮೈತ್ರಿ ಮತ್ತೆ ಮುನ್ನಲೆಗೆ ಬಂದಿದ್ದು, ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಪಕ್ಕಾಗಿದೆ. ಹೌದು… ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ (Loksabha Elections 2024) ಎದುರಿಸುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಬಸವರಾಜ ಬೊಮ್ಮಾಯಿ (basavaraj Bommai) ಖಚಿತಪಡಿಸಿದ್ದಾರೆ. ಇನ್ನು ಈ ಮೈತ್ರಿ ಸುದ್ದಿ ಬೊಮ್ಮಾಯಿ-ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಅಮಿತ್​ ರವಾನಿಸಿದ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಇಂದು (ಸೆಪ್ಟೆಂಬರ್ 08) ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಜೆಡಿಎಸ್​ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದು, JDS ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಜೆಡಿಎಸ್​-ಬಿಜೆಪಿ ಮೈತ್ರಿ ಪಕ್ಕಾ, ದೇವೇಗೌಡ್ರು ಬೇಡಿಕೆ ಇಟ್ಟ ಕ್ಷೇತ್ರಗಳು ಎಷ್ಟು? ಅವು ಯಾವುವು? ಇಲ್ಲಿದೆ ವಿವರ

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಈ ಮೈತ್ರಿ ಮಾತುಕತೆ ಬಹಳ ಅವಶ್ಯಕ, ಮಹತ್ವದ್ದಾಗಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವುದು ಮುಖ್ಯವಾಗಿತ್ತು. ಹೀಗಾಗಿ ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮೈತ್ರಿ ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ ಆಗಲಿದೆ. ನಮ್ಮ ಹೈಕಮಾಂಡ್ ಇದರ ತೀರ್ಮಾನ ಮಾಡಲಿದೆ ಎಂದು ಹೇಳಿದರು.

ಸದ್ಯಕ್ಕೆ 4 ಸೀಟಿಗೆ ಓಕೆ ಎಂದ ಅಮಿತ್ ಶಾ

ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ತಮಗೆ ಕೊಡಿ ಎಂದು ದೇವೇಗೌಡ್ರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ, ಇದಕ್ಕೆ ಅಮಿತ್‌ ಶಾ ಸದ್ಯಕ್ಕೆ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಂಡ್ಯವನ್ನು ಬಿಟ್ಟು ಇನ್ನುಳಿದ ನಾಲ್ಕು ಕ್ಷೇತ್ರಗಳನ್ನು ನೀಡಲು ಶಾ ಗ್ರೀನ್​ ಸಿಗ್ನಲ್​ ನೀಡಿದ್ದು, ಇನ್ನೊಂದು ಸೀಟಿನ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸೋಣ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಪಕ್ಕಾ ಆದಂತಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಂಟಿಯಾಗಿ ಕಣಕ್ಕಳಿಯಲಿವೆ. ಆದ್ರೆ, ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿದೆ ಆದರೂ ಇನ್ನೂ ಫೈನಲ್ ಆಗಿಲ್ಲ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:31 pm, Fri, 8 September 23