ಹೆಚ್ಚು ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವವರಿಗೆ ಟಿವಿ ಉಡುಗೊರೆ: ಡಿ.ಕೆ.ಶಿವಕುಮಾರ್ ಘೋಷಣೆ

|

Updated on: Feb 21, 2023 | 6:44 PM

ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾಗ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಆರಂಭಿಸಲಾಗಿತ್ತು. ಈ ವೇಳೆ ಯಾರು ಹೆಚ್ಚು ನೋಂದಣಿ ಮಾಡುತ್ತಾರೋ ಅವರಿಗೆ ಗಿಫ್ಟ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಗ್ಯಾರಂಟಿ ಕಾರ್ಡ್ ವಿತರಣೆಗೂ ಬಹುಮಾನ ಘೋಷಣೆ ಮಾಡಿದ್ದಾರೆ.

ಹೆಚ್ಚು ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವವರಿಗೆ ಟಿವಿ ಉಡುಗೊರೆ: ಡಿ.ಕೆ.ಶಿವಕುಮಾರ್ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us on

ಚಾಮರಾಜನಗರ: ಕಾಂಗ್ರೆಸ್​ನಿಂದ ಬಿಡುಗಡೆಯಾಗುವ ಗ್ಯಾರೆಂಟಿ ಕಾರ್ಡ್ ( Congress guaranteed card) ಮನೆ ಮನೆಗೆ ತಲುಪಿಸಬೇಕು. ಅತಿ ಹೆಚ್ಚು ಕಾರ್ಡ್ ವಿತರಣೆ ಮಾಡಿದ 10 ಜನರಿಗೆ ಟಿವಿ ಉಡುಗೊರೆಯಾಗಿ ಕೊಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಘೋಷಣೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಆರಂಭದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಆರಂಭಿಸಲಾಗಿತ್ತು. ಈ ವೇಳೆ ಯಾರು ಹೆಚ್ಚು ನೋಂದಣಿ ಮಾಡುತ್ತಾರೋ ಅವರಿಗೆ ಟಿವಿ ಸೇರಿದಂತೆ ಇತ್ಯಾದಿ ಗಿಫ್ಟ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಚಾಮರಾಜನಗರದ ಹನೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಕಾರ್ಯಕ್ರಮದಲ್ಲಿ ಮತ್ತೆ ಅಂತಹದ್ದೇ ಘೋಷಣೆ ಮಾಡಿದ್ದಾರೆ.

ಸಮಾವೇಶದಲ್ಲಿ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್​ನವರು ಚುನಾವಣೆ ಸಂದರ್ಭದಲ್ಲಿ ದುಡ್ಡು ಕೊಟ್ಟರೆ ಬೇಡ ಎಂದು ಹೇಳಬೇಡಿ. ಅವರಿಂದ ದುಡ್ಡು ಪಡೆದು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ. ಆ ಮೂಲಕ ಈ ಕೈ ಬಲ ಪಡಿಸಿ, ಕೈ ಜೋಡಿಸಿ ಎಂದರು. ಶಾಸಕನಾಗುವುದು ಮುಖ್ಯವಲ್ಲ, ಶಾಸನಕಾದ ನಂತರ ಏನು ಮಾಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕ್ಷೇತ್ರದ ಜನರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಮಹದೇಶ್ವರ ವರ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಕೊಟ್ಟಿದ್ದಾನೆ ಅಷ್ಟೆ. ನಿಮ್ಮ ಶಾಸಕರು, ಮಾಜಿ ಸಂಸದರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿಯ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: DK Shivakumar: ವರುಣಾದಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಟಿಕೆಟ್; ಡಿಕೆ ಶಿವಕುಮಾರ್ ಸುಳಿವು

ಸಚಿವ ಅಶ್ವತ್ಥ್​ ನಾರಾಯಣ ವಿರುದ್ಧ ಏಕವಚನದಲ್ಲೇ ಡಿಕೆಶಿ ವಾಗ್ದಾಳಿ

ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕೋಣ ಎಂದು ಹೇಳಿಕೆ ನೀಡಿದ್ದ ಸಚಿವ ಅಶ್ವತ್ಥನಾರಾಯಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿಕೆಶಿ, ಅವನು ಯಾರೋ ಮಂತ್ರಿ ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯ ಕೊಲೆ ಮಾಡಿ ಅಂತಿದ್ದಾನೆ. ಮುಖ್ಯಮಂತ್ರಿ ಆಗಿದ್ದವರನ್ನ ಕೊಲೆ ಮಾಡಿ ಎನ್ನುತ್ತಾರೆ, ಇದನ್ನ ಸಹಿಸಲ್ಲ. ಅಧಿಕಾರದ ಮದದಲ್ಲಿ ಈ ರೀತಿ ಮಾತನಾಡುತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದರು.

ಸರ್ಕಾರ, ಗೃಹಸಚಿವರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಡಿಜಿಪಿ ಏನು ಮಾಡುತ್ತಿದ್ದಾರೆ? ಸಚಿವರು ಕ್ಷಮಾಪಣೆ ಕೇಳಿದರೆ ಸಾಕಾ? ಆತನನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಅಂತ ನಾನು ಹೇಳಲ್ಲ. ಈ ನೆಲದ ಕಾನೂನು ಪಾಲಿಸಿ ಅಂತ ಒತ್ತಾಯಿಸ್ತೇನೆ. ಇಲ್ಲಿಯವರೆಗೂ ಆ ಸಚಿವರ ಮೇಲೆ ಯಾವುದೇ ಕೇಸ್ ಹಾಕಿಲ್ಲ. ಕೂಡಲೇ ಮಂತ್ರಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Tue, 21 February 23