AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara: ಹಾರೋಹಳ್ಳಿ ತಾಲೂಕು ಉದ್ಘಾಟನೆ; ವೇದಿಕೆಯಲ್ಲೇ ಅಶ್ವಥ್ಥನಾರಾಯಣ – ಅನಿತಾ ಕುಮಾರಸ್ವಾಮಿ ವಾಕ್ಸಮರ

ಹಾರೋಹಳ್ಳಿ‌ ನೂತನ ತಾಲೂಕು ಉದ್ಘಾಟನೆ ಸಮಾರಂಭವು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ಥನಾರಾಯಣ ಹಾಗೂ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ಮಾತಿನ ಜಟಾಪಟಿಗೆ ಸಾಕ್ಷಿಯಾಯಿತು.

Ganapathi Sharma
|

Updated on: Feb 21, 2023 | 11:30 AM

Share

ರಾಮನಗರ: ಹಾರೋಹಳ್ಳಿ‌ (Harohalli) ನೂತನ ತಾಲೂಕು ಉದ್ಘಾಟನೆ ಸಮಾರಂಭವು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ಥನಾರಾಯಣ (CN Ashwath Narayan) ಹಾಗೂ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ನಡುವೆ ಮಾತಿನ ಜಟಾಪಟಿಗೆ ಸಾಕ್ಷಿಯಾಯಿತು. ರಾಮನಗರ ‌ಜಿಲ್ಲೆಯ ಹಾರೋಹಳ್ಳಿಯ ‘ಕರ್ನಾಟಕ ಪಬ್ಲಿಕ್ ಶಾಲೆ’ ಆವರಣದಲ್ಲಿ ನಡೆದ ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಬೆಳಿಗ್ಗೆ ಭಾಷಣ ಮಾಡಿದ ಅಶ್ವಥ್ಥನಾರಾಯಣ, ತಾಲೂಕು ರಚನೆಗೆ ಬಿಜೆಪಿ ಸರ್ಕಾರ ಸಾಕಷ್ಟು ಶ್ರಮಿಮಿಸಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಅನಿತಾ ಕುಮಾರಸ್ವಾಮಿ ತಾಲೂಕು ರಚನೆಗೆ ನಾನು ಶ್ರಮಿಸಿದ್ದು ಎಂದು ಹೇಳಿದರು. ಜತೆಗೆ, ಕೆಲವು ದಾಖಲೆಗಳನ್ನೂ ಪ್ರದರ್ಶಿಸಿದರು. ವೇದಿಕೆಯಲ್ಲಿ ‘ಭಾರತ್ ಮಾತಾಕಿ ಘೋಷಣೆ’ ‌ಕೂಗಿ ಅಶ್ವಥ್ಥನಾರಾಯಣ ಭಾಷಣ ಆರಂಭಿಸಿದರು. ತಾಲೂಕು ರಚನೆಗೆ ಸಾಕಷ್ಟು ಶ್ರಮ ವಹಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಎಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಾಲೂಕು ರಚನೆಗೆ ತಾತ್ವಿಕ ಅನುಮೋದನೆ ಕೊಟ್ಟಿದ್ದರು. ಆದರೆ, ಅಂತಿಮ ಅಧಿಸೂಚನೆ ಹೊರಡಿಸಿದ್ದು 2022ರಲ್ಲಿ. ನಮ್ಮ ಸರ್ಕಾರದಲ್ಲಿ ಅಂತಿಮ ಅಧಿಸೂಚನೆ ಕೊಡಲಾಗಿದೆ. ಹುದ್ದೆಗಳ ನೇಮಕಾತಿಯನ್ನು ಕೂಡ ನಮ್ಮ ಸರ್ಕಾರದ ಅವಧಿಯಲ್ಲಿ ‌ಮಾಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಮೆಡಿಕಲ್ ಕಾಲೇಜು ಕಾಮಗಾರಿ ಶೀಘ್ರವೇ ಆರಂಭ ಮಾಡುತ್ತೇವೆ. ಮುಖ್ಯಮಂತ್ರಿಗಳಿಂದ ಶಂಕು ಸ್ಥಾಪನೆ ನೆರವೇರಿಸುತ್ತೇವೆ ಎಂದು ಅಶ್ವಥ್ಥನಾರಾಯಣ ಹೇಳಿದರು.

ರಾಮನಗರ ಎಂಜಿನಿಯರಿಂಗ್ ‌ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ‌ಮಾಡುತ್ತೇವೆ. ರಾಮನಗರ ಜಿಲ್ಲೆಯಲ್ಲಿ 1850 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಇವುಗಳನ್ನೆಲ್ಲ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ದಾಖಲೆ ಪ್ರದರ್ಶಿಸಿದ ಅನಿತಾ ಕುಮಾರಸ್ವಾಮಿ

ಅಶ್ವಥ್ಥನಾರಾಯಣ ಭಾಷಣದ ವೇಳೆ ಮಧ್ಯಪ್ರವೇಶಿಸಿದ ಅನಿತಾ ಕುಮಾರಸ್ವಾಮಿ, ತಾಲೂಕು ರಚನೆಗೆ ಶ್ರಮ ವಹಿಸಿದ್ದು ನಾನು. ಕುಮಾರಸ್ವಾಮಿ ಶಾಸಕರಾದ ಮೇಲೆ ಅಭಿವೃದ್ಧಿ ಆಗಿರುವುದು ಎಲ್ಲರಿಗೂ ತಿಳಿದಿದೆ ಎಂದು ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು. ರಾಮನಗರಕ್ಕೆ 450ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಕೊಟ್ಟಿದ್ದೇವೆ ಎಂದು ಉಸ್ತುವಾರಿ ಸಚಿವರು ಹೇಳಿದರು. ಆದರೆ ಇದು ಬಿಜೆಪಿ ಸರ್ಕಾರ ಬರುವ ಮೊದಲೇ ಆಗಿತ್ತು. ಕುಮಾರಸ್ವಾಮಿ ಅವರನ್ನು ಬರುವಂತೆ ಮನವಿ ಮಾಡಿದ್ದೆ. ನನಗೆ ಸುಳ್ಳು ಹೇಳಲು ಬರುವುದಿಲ್ಲ ಎಂದು ಹೇಳಿದರು.

ದಲಿತ ಸಂಘಟನೆ ಮುಖಂಡರ ಪ್ರಶ್ನೆಗೆ ಉತ್ತರಿಸದೆ ಹೊರನಡೆದ ಸಚಿವರು

ಹಾರೋಹಳ್ಳಿ ತಾಲೂಕು ರಚನೆ ಆಗಿದೆ. ಅಭಿವೃದ್ದಿಗೆ ಎಷ್ಟು ಕೋಟಿ ಮೀಸಲಿಟ್ಟಿದ್ದೀರಿ ಎಂಬುದನ್ನು ಮೊದಲು ಹೇಳಿ ಎಂದು ದಲಿತ ಮುಖಂಡರು ಸಚಿವರಿಗೆ ಪ್ರಶ್ನೆ ಮಾಡಿದರು. ಈ ವಿಚಾರವಾಗಿ ಪ್ರಶ್ನೆ ಕೇಳುತ್ತಿದ್ದಂತೆ ಅಶ್ವತ್ಥನಾರಾಯಣ ನಿರ್ಗಮಿಸಿದರು.

ಸಂಸದ ಡಿಕೆ ಸುರೇಶ್, ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ, ಕನಕಪುರ ಶಾಸಕ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ