ಸಿಎಂ ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು: ಸಚಿವ ಶಿವರಾಜ ತಂಗಡಗಿ

|

Updated on: Jun 19, 2023 | 10:29 PM

ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು. ಈ ವಿಚಾರವಾಗಿ ಯಾರೂ ಸಹ ಅಸಮಾಧಾನ ಹೊರಹಾಕಿದ್ದು ನನಗೇನು ಕಾಣಿಸಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಸಿಎಂ ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು: ಸಚಿವ ಶಿವರಾಜ ತಂಗಡಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ
Follow us on

ಗದಗ: ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು. ಈ ವಿಚಾರವಾಗಿ ಯಾರೂ ಸಹ ಅಸಮಾಧಾನ ಹೊರಹಾಕಿದ್ದು ನನಗೇನು ಕಾಣಿಸಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಹೇಳಿದರು. ನಗರದ ಪರಿಸರ ಲೇಔಟ್‌ನಲ್ಲಿ ಭಾರತ್ ರತ್ನ ಪಂಡಿತ ಭೀಮಸೇನ ಜೋಶಿ ರಂಗ ಮಂದಿರ ಉದ್ಘಾಟನೆ ಮಾಡಿ ಬಳಿಕ ಅವರು ಮಾತನಾಡಿದರು. ಗ್ಯಾರಂಟಿ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಚಿಂತನೆಯಲ್ಲಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತುಂಬಾ ಉತ್ಸಾಹದಲ್ಲಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಯಿಂದ ಬಿಜೆಪಿಯವರಿಗೆ ನಡುಕ‌ ಶುರುವಾಗಿದೆ

ಮಂತ್ರಿಮಂಡಲ ನೇರವಾಗಿ ಹೈಕಮಾಂಡ್ ಜೊತೆ ಸಂಪರ್ಕ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಸರ್ಕಾರದಲ್ಲಿ ಆ ರೀತಿ ಇಲ್ಲ, ಚೆನ್ನಾಗಿ ಸರ್ಕಾರ ನಡೆಸುತ್ತಿದ್ದಾರೆ. ಬಿಜೆಪಿ‌ ಎಷ್ಟೇ ಹಾದಿ ತಪ್ಪಿಸಿದರೂ ನಾವು 5 ಗ್ಯಾರಂಟಿ ಈಡೇರಿಸುತ್ತೇವೆ. ಗ್ಯಾರಂಟಿಯಿಂದ ಬಿಜೆಪಿಯವರಿಗೆ ನಡುಕ‌ ಶುರುವಾಗಿದೆ ಎಂದು ಕಿಡಿಕಾರಿದರು.

ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸೋಲಿನ ಭಯ ಕಾಡುತ್ತಿದೆ. ಕೇಂದ್ರದ ಯೋಜನೆ ತಿಳಿಸಲು 7-8 ತಂಡದೊಂದಿಗೆ ಹೊರಟಿದ್ದಾರೆ. ಯಾವ ಭರವಸೆ, ಯೋಜನೆ ಈಡೇರಿಸಿದ್ದಾಗಿ ಜನರಿಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋತರೂ ಬುದ್ದಿ ಬರಲಿಲ್ಲ

ಯಾವ ಮುಖ ಇಟ್ಟುಕೊಂಡು ಇವರೆಲ್ಲಾ ಹೇಳಲಿಕ್ಕೆ ಹೊರಟಿದ್ದಾರೆ. ಚುನಾವಣೆಯಲ್ಲಿ ಸೋತ ಮೇಲೆಯೂ ಬಿಜೆಪಿಯವರಿಗೆ ಬುದ್ಧಿ ಬಂದಿಲ್ಲ. ರಾಜ್ಯದಲ್ಲಿ ಕೊವಿಡ್ ಸಂದರ್ಭದಲ್ಲೂ ಲಂಚ ತಿಂದಿದ್ದು ಸಾಧನೆಯಾ? 10 ವರ್ಷಗಳಲ್ಲಿ ವಿದೇಶಕ್ಕೆ ಹೋಗಿದ್ದೇ‌ ಬಿಜೆಪಿಯವರ ಸಾಧನೆಯಾ? ರೈತರ ಬಗ್ಗೆ ಕೇವಲವಾಗಿ ಮಾತಾಡುವ ಬಿಜೆಪಿಯವರಿಗೆ ಶಿಕ್ಷೆ ಆಗಬೇಕು ಎಂದು ವಾಗ್ದಾಳಿ ಮಾಡಿದರು.

ಬಿಜೆಪಿಗೆ ಅನ್ನಭಾಗ್ಯ ಯೋಜನೆ ನಿಲ್ಲಿಸುವ ದುರುದ್ದೇಶವಿದೆ 

ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಯಾವುದೇ ಕಾಳಜಿ,‌ ಕನಿಕರ ಇಲ್ಲ. ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ರಾಜ್ಯದ ಜನರಿಗೆ ಹೇಳಿದ್ದೆವು. ಕಾಂಗ್ರೆಸ್ ಸರ್ಕಾರ ನಿಶ್ಚಿತವಾಗಿ ಬಡವರಿಗೆ ಅಕ್ಕಿ ಕೊಟ್ಟೇ ಕೊಡುತ್ತೇವೆ. ರಾಜ್ಯದ ಪಾಲು ಏನಿದೆ, ಅದನ್ನು ಕೊಡಿ‌ ಅಂತ ನಾವು ಕೇಳುತ್ತಿದ್ದೇವೆ. ಬಿಜೆಪಿಗೆ ಅನ್ನಭಾಗ್ಯ ಯೋಜನೆ ನಿಲ್ಲಿಸಬೇಕು ಅನ್ನೋ ದುರುದ್ದೇಶವಿದೆ ಎಂದರು.

ಕರ್ನಾಟಕದಲ್ಲಿ‌ ಅಡ್ರೆಸ್ ಇಲ್ಲದಂತೆ ಆಗುತ್ತೇವೆ ಅನ್ನೋ ಭಯ ಇದೆ. ನಾವು ಘೋಷಿಸಿರುವ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿಯವರಿಗೆ ಅಡ್ರೆಸ್ ಇಲ್ಲದಾಗೆ ಮಾಡೇ ಮಾಡುತ್ತೇವೆ. ಕೇಂದ್ರದ‌ ವಿರುದ್ಧ ನಾಳೆ‌ ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.