ಧಾರವಾಡ ಪ್ರವೇಶಕ್ಕೆ ಶಾಸಕ ವಿನಯ್ ಕುಲಕರ್ಣಿ ಹರಸಾಹಸ, ಕೋರ್ಟ್​ಗೆ ಮತ್ತೊಂದು ಅರ್ಜಿ

|

Updated on: Jun 16, 2023 | 1:16 PM

ಧಾರವಾಡ ಜಿಲ್ಲೆ ಪ್ರವೇಶಕ್ಕೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದೀಗ ಮತ್ತೊಂದು ಕಾರಣ ನೀಡಿ ಧಾರವಾಡಕ್ಕೆ ತೆರಳಲು ಅನುಮತಿ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಧಾರವಾಡ ಪ್ರವೇಶಕ್ಕೆ ಶಾಸಕ ವಿನಯ್ ಕುಲಕರ್ಣಿ ಹರಸಾಹಸ, ಕೋರ್ಟ್​ಗೆ ಮತ್ತೊಂದು ಅರ್ಜಿ
ವಿನಯ ಕುಲಕರ್ಣಿ
Follow us on

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಶಾಸಕ ವಿನಯ್​ ಕಲಕರ್ಣಿ(Vinay Kulkarni) ಅವರು ಧಾರವಾಡ(Dharwad) ಜಿಲ್ಲಾ ಪ್ರವೇಶಕ್ಕೆ ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಆದ್ರೆ, ಕೋರ್ಟ್ ಅನುಮತಿ ನೀಡಿರಲಿಲ್ಲ. ಇದೀಗ ವಿನಯ್ ಕುಲಕರ್ಣಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ. ಹೀಗಾಗಿ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗಿಲ್ಲ ಅನುಮತಿ, ಅರ್ಜಿ ವಜಾಗೊಳಿಸಿದ ಹೈಕೋರ್ಟ್​​

ಇದೇ ಜೂ.20ರಂದು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಮೇಯರ್ ಚುನಾವಣೆ ಇದೆ. ಮೇಯರ್ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಬೇಕು. ಹೀಗಾಗಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದು, ಶಾಸಕನಾಗಿ ಅಯ್ಕೆಯಾಗಿರುವ ಕಾರಣಕ್ಕೆ ಮತದಾನ ಮಾಡಬೇಕಿದೆ. ಹೀಗಾಗಿ ಧಾರವಾಡ ಪ್ರವೇಶಿಸದಂತೆ ವಿಧಿಸಿರುವ ನಿರ್ಬಂಧವನ್ನು ಸಡಿಲಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲ, ಜೂ.17ರೊಳಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಕೋರ್ಟ್ ಸೂಚನೆ ನೀಡಿದೆ.

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಹಲವರನ್ನು ಆರೋಪಿಗಳನ್ನಾಗಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡಯದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದು ಸೇರಿ ನಾಲ್ಕು ಷರತ್ತುಗಳನ್ನು ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್ ವಿಧಿಸಿತ್ತು. ಬಳಿಕ  ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ, ಧಾರವಾಡ ಪ್ರವೇಶಿಸಲು ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ,  ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿತ್ತು. ಹೀಗಾಗಿ, ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಸಹ ಅರ್ಜಿ ವಜಾ ಆಗಿತ್ತು. ಇದರಿಂದ ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯಿಂದ ಹೊರಗೆ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣ ಹಾಗು ದೂರವಾಣಿ ಕರೆಗಳ ಮೂಲಕ ಪ್ರಚಾರ ಮಾಡಿದ್ದರು. ಅಂತಿಮವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.