ಬೆಂಗಳೂರು, ನವೆಂಬರ್ 29: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಮಂಗಳವಾರವಷ್ಟೇ ಪತ್ರ ಬರೆದಿದ್ದ ಆಳಂದ ಶಾಸಕ ಬಿಆರ್ ಪಾಟೀಲ್ (BR Patil) ಇದೀಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಅವರು ಸಿದ್ದರಾಮಯ್ಯ ಜತೆ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್, ಸಚಿವ ಹೆಚ್ಕೆ ಪಾಟೀಲ್ ಇದ್ದರು.
ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ ಬಿಆರ್ ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಕರೆಮಾಡಿ ಬರುವುದಕ್ಕೆ ಹೇಳಿದ್ದರು. ನನ್ನ ಜತೆ ಚರ್ಚಿಸಿ ಸಿಎಂ ಸಮಸ್ಯೆ ಬಗೆಹರಿಸಿದ್ದಾರೆ. ಕೃಷ್ಣಭೈರೇಗೌಡ ನನಗೊಬ್ಬರಿಗಷ್ಟೇ ಅಲ್ಲ, ಎಲ್ಲರಿಗೂ ಸವಾಲು ಹಾಕಿದ್ದಾರೆ. ಅಧಿವೇಶನದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಹಾಗಾಗಿ ಅಧಿವೇಶನದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಮುಜುಗರಕ್ಕೀಡಾಗಬಾರದು ಎಂದು ಸುಮ್ಮನಿದ್ದೆ. ನಾನು ಯಾವುದೇ ಅಧಿಕಾರಕ್ಕಾಗಿ ಬಂದವನಲ್ಲ. ನನಗೆ ಒತ್ತಾಯ ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ ಎಂದು ಅವರು ಹೇಳಿದ್ದಾರೆ.
ಸಚಿವ ಕೃಷ್ಣ ಭೈರೇಗೌಡ ತಮ್ಮ ವಿರುದ್ಧ ಅನುಮಾನ ಬರುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಸಿಎಂಗೆ ಪತ್ರ ಬರೆದಿದ್ದ ಪಾಟೀಲ್, ಕೆಆರ್‌ಐಡಿಎಲ್ ಕಾಮಗಾರಿಗಳನ್ನು ಲಂಚ ಪಡೆದು ನೀಡಿದ್ದೇನೆಂಬ ಆರೋಪ ಬಂದಿದೆ. ಇಂತಹ ಆರೋಪಗಳನ್ನು ಹೊತ್ತು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ವಿರುದ್ಧದ ಆರೋಪಗಳ ಸಂಬಂಧ ತನಿಖೆಯನ್ನು ನಡೆಸಿ, ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಪತ್ರದ ಮೂಲಕ ಸಿಎಂಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಸರ್ಕಾರಕ್ಕೆ ಮತ್ತೆ ತಲೆನೋವಾದ ಬಿಆರ್ ಪಾಟೀಲ್; ರಾಜೀನಾಮೆ ಬಗ್ಗೆ ಉಲ್ಲೇಖಿಸಿ ಸಿಎಂಗೆ ಪತ್ರ
ನಂತರವೂ ಸುಮ್ಮನಿರದ ಅವರು, ಬುಧವಾರವೂ ಸಚಿವ ಕೃಷ್ಣಭೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹಿಂದೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಬಿಆರ್ ಪಾಟೀಲ್ ಸಿಎಂಗೆ ಪತ್ರ ಬರೆದಿದ್ದು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ವಿಪಕ್ಷಗಳೂ ಸಹ ಅದನ್ನು ಗುರಿಯಾಗಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದೀಗ ಭ್ರಷ್ಟಾಚಾರ ವಿಚಾರವಾಗಿ ಆಡಳಿತ ಪಕ್ಷದ ಸಚಿವ, ಶಾಸಕರ ಮಧ್ಯೆಯೇ ವಾಕ್ಸಮರ ಆರಂಭಗೊಂಡಿದ್ದು, ಅದನ್ನು ತಣ್ಣಗಾಗಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ