ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ನಿಮ್ಮ ಆಶೀರ್ವಾದದಿಂದ 136 ಸೀಟ್ ಗೆದ್ದಿದ್ದೇವೆ ಎಂದ ಡಿಕೆ ಶಿವಕುಮಾರ್

| Updated By: Ganapathi Sharma

Updated on: Oct 18, 2023 | 7:15 PM

ಎಲ್ಲರಿಗೂ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಬಿಜೆಪಿಯವರು ಸರ್ಕಾರ ಮಾಡಲು ಬಹಳ ಪ್ರಯತ್ನ ಮಾಡಿದ್ರು. ಇವತ್ತು ಬಿಜೆಪಿ ನಾಯಕರೆಲ್ಲ ಕೈಹಿಸುಕಿಕೊಂಡು ನರಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಐತಿಹಾಸಿಕ ತೀರ್ಮಾನ ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.

ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ನಿಮ್ಮ ಆಶೀರ್ವಾದದಿಂದ 136 ಸೀಟ್ ಗೆದ್ದಿದ್ದೇವೆ ಎಂದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಚಿಕ್ಕೋಡಿ, ಅಕ್ಟೋಬರ್ 18: ‘ನಿಮ್ಮ ಆಶೀರ್ವಾದದಿಂದ 136 ಸೀಟ್ ಗೆದ್ದು ಸೇವೆ ಮಾಡ್ತಿದ್ದೇವೆ. ನಾನು ನಿಮ್ಮಿಂದ ಸನ್ಮಾನ ಮಾಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ನೀವೆಲ್ಲಾ ಹೋರಾಟ ಮಾಡಿ ಕಾಂಗ್ರೆಸ್ ಸರ್ಕಾರವನ್ನು (Congress Government) ತಂದಿದ್ದೀರಿ’ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಎಬಿ ಪಾಟೀಲ್‌ ಅವರನ್ನು ಗೆದ್ದೇ ಗೆಲ್ಲಿಸ್ತೀರಾ ಎಂಬ ವಿಶ್ವಾಸವಿತ್ತು. ಆದರೆ ಚುನಾವಣೆಯಲ್ಲಿ ಯಾಕೆ ಸೋಲಿಸಿದ್ರಿ ಎಂಬುದು ವಿಸ್ಮಯ ಎಂದು ಹೇಳಿದರು.

ಎಬಿ ಪಾಟೀಲ್‌ ಹೇಳಿದಾಗ ಬಹಳ ಖುಷಿಯಿಂದ ಒಪ್ಪಿ ಬಂದೆ. ನಿಮ್ಮ ಶ್ರಮ, ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಎಬಿ ಪಾಟೀಲ್ ಅವರೇ, ನೀವು ಗೆಲ್ಲದಿದ್ದರೂ ಚಿಂತೆ ಇಲ್ಲ, ಅಧಿಕಾರ ಇದೆ. ನಿಮ್ಮ ಪಕ್ಷ ಇದೆ, ನೀವು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಡಿಕೆ ಶಿವಕುಮಾರ್ ಧೈರ್ಯದ ಮಾತುಗಳನ್ನಾಡಿದರು.

ಬೆಳಗಾವಿಯಿಂದಲೇ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಎಬಿ ಪಾಟೀಲ್ ಬಸವಣ್ಣನವರ ಮೂರ್ತಿ ನನಗೆ ಕೊಟ್ಟಿದ್ದಾರೆ. ಬಸವಣ್ಣನವರು ನುಡಿದಂತೆ ನಡೆ ಎಂದಿದ್ದಾರೆ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಎಲ್ಲರಿಗೂ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಬಿಜೆಪಿಯವರು ಸರ್ಕಾರ ಮಾಡಲು ಬಹಳ ಪ್ರಯತ್ನ ಮಾಡಿದ್ರು. ಇವತ್ತು ಬಿಜೆಪಿ ನಾಯಕರೆಲ್ಲ ಕೈಹಿಸುಕಿಕೊಂಡು ನರಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಐತಿಹಾಸಿಕ ತೀರ್ಮಾನ ಸಾಧ್ಯ. ಎಲ್ಲ ವರ್ಗಗಳ ರಕ್ಷಣೆ ಮಾಡುವ ಕೆಲಸ ಮಾಡಿದ್ದೇವೆ. ಕಳೆದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ದೀರಿ. ನಮ್ಮಲ್ಲಿರುವ ತಪ್ಪಿನಿಂದ ಕೆಲವು ಸೀಟ್ ಕಡಿಮೆ ಬಂದಿರಬಹುದು. ಮುಂದೆ ಒಗ್ಗೂಡಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡ್ತೇವೆ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಬೆಳಗಾವಿ ಪ್ರವಾಸ: ಸತೀಶ್ ಜಾರಕಿಹೊಳಿ ಸೈಲೆಂಟ್ ಸ್ಕೆಚ್‌‌!

ನಾನು ಬಂದ ಸಂದರ್ಭದಲ್ಲಿ ಭವ್ಯ ಸ್ವಾಗತ ನೀಡಿ ಸನ್ಮಾನ ಮಾಡಿದ್ದೀರಿ. ನಾನು ಎಬಿ ಪಾಟೀಲ್ ಜೊತೆಗಿದ್ದೇನೆ, ಪಕ್ಷ ನಿಮ್ಮ ಕೈ ಬಿಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಡಿಕೆ ಶಿವಕುಮಾರ್​​ರನ್ನು ಹಾಡಿಹೊಗಳಿದ ಎಬಿ ಪಾಟೀಲ್

ಮುಂದೆ ನೀವು ಮುಖ್ಯಮಂತ್ರಿ ಆಗ್ರಿ ಅನ್ನೋನು ನಾನು. ನೀವು ಮುಖ್ಯಮಂತ್ರಿ ಆದರೆ ರಾಜ್ಯಕ್ಕೆ ಉತ್ತಮ ಭವಿಷ್ಯವಿರುತ್ತೆ ಎಂದು ಎಬಿ ಪಾಟೀಲ್ ಅವರು ಡಿಕೆ ಶಿವಕುಮಾರ್ ಅವರನ್ನು ಹಾಡಿಹೊಗಳಿದರು. ಪಕ್ಷ ಅಂದರೆ ಅವರಿಗೆ ಬಹಳ ಪ್ರೀತಿ, ಕಮಿಟ್‌ಮೆಂಟ್ ಇದೆ. ಪಕ್ಷ ಅಂದ್ರೆ ನನ್ನ ಜೀವ, ಉಸಿರು ಅಂತಾರೆ. ಹುಕ್ಕೇರಿ ತಾಲೂಕಿನ ನೀರಾವರಿ ಯೋಜನೆಗಳನ್ನು ಈಡೇರಿಸುವ ಭರವಸೆ ಇದೆ. ವೀರಶೈವ ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಟಿಕೆಟ್ ನೀಡಿದ್ರಿ. ಮುಂದೆ ನೀವು ಮುಖ್ಯಮಂತ್ರಿ ಆಗ್ರಿ ಅನ್ನೋನು ನಾನು, ರಾಜ್ಯಕ್ಕೆ ಉತ್ತಮ ಭವಿಷ್ಯವಿರುತ್ತೆ ಎಂದು ಪಾಟೀಲ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ