ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ, ರಂಗೋಲಿ ನಿಷೇಧಿಸಿದ ಸರ್ಕಾರ: ಬಿಜೆಪಿಯೂ ಸಹ ಬ್ಯಾನ್ ಮಾಡಿತ್ತು ಎಂದು ಸಾಕ್ಷಿ ಕೊಟ್ಟ ಸಿಎಂ
ಆಯುಧ ಪೂಜೆ ಸಮಯದಲ್ಲಿ ಒಡೆಯಲಾಗುವ ಕುಂಬಳಕಾಯಿಯ ಒಳಗೆ ಹಾಗೂ ರಂಗೋಲಿಯಲ್ಲಿ ರಾಸಾಯನಿಕಯುಕ್ತ ಬಣ್ಣಗಳು, ಅರಿಶಿಣ, ಕುಂಕುಮ ಹಾಗೂ ಸುಣ್ಣ ಇತ್ಯಾದಿಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶ ಹೊರಡಿಸಿದೆ. ಇದು ಹೊಸತೇನಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಹ ಈ ರೀತಿ ಸುತ್ತೋಲೆ ಹೊರಡಿಸಿತ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ, ಸರ್ಕಾರ ಆದೇಶದಲ್ಲಿ ಏನಿದೆ? ಸಿದ್ದರಾಮಯ್ಯ ಹೇಳಿದ್ದೇನು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು (ಅಕ್ಟೋಬರ್ .19): ನಾಡಹಬ್ಬ ದಸರಾದಲ್ಲಿ (Dasara 2023) ಆಯುಧ ಪೂಜೆ (ayudha pooja) ಸಮಯದಲ್ಲಿ ಒಡೆಯಲಾಗುವ ಕುಂಬಳಕಾಯಿಯ ಒಳಗೆ ಹಾಗೂ ರಂಗೋಲಿಯಲ್ಲಿ ರಾಸಾಯನಿಕಯುಕ್ತ ಬಣ್ಣಗಳು, ಅರಿಶಿಣ, ಕುಂಕುಮ ಹಾಗೂ ಸುಣ್ಣ ಇತ್ಯಾದಿಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಇದಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಇದು ವಿವಾದವಾಗಿ ಬದಲಾಗುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.
ಇದನ್ನೂ ಓದಿ: ಅತ್ತಿಬೆಲೆ ದುರಂತ ನಮಗೊಂದು ಪಾಠ: ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ: ಗೃಹ ಸಚಿವ ಜಿ ಪರಮೇಶ್ವರ್
ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?
ವಿಧಾನಸೌಧ ವಿಕಾಸಸೌಧ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಛೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕವಾಗಿರುತ್ತದೆ. ಜೊತೆಗೆ, ಈ ರಾಸಾಯನಿಕ ಬಣ್ಣವು ನೆಲಹಾಸುವಿನ ಮೇಲೆ ಬಿದ್ದು ಸುಮಾರು ತಿಂಗಳುಗಳ ಕಾಲ ಹಾಗೆಯೇ ನೆಲಹಾಸುವಿನ ಮೇಲೆ ಅಂಟಿಕೊಂಡು ಉಳಿಯುತ್ತದೆ. ಇದರಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಈ ಕುರಿತಂತೆ, ಹಿಂದಿನ ಸಾಲುಗಳಲ್ಲಿಯೂ ಸಹ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದಾಗ್ಯೂ, ಕೆಲವು ಇಲಾಖೆ/ಶಾಖೆಗಳಲ್ಲಿ ಈ ಸೂಚನೆಗಳನ್ನು ಪಾಲನೆ ಮಾಡದಿರುವುದು ವಿಷಾದನೀಯವಾಗಿದೆ. ಆದುದರಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ 2023ರ ಅಕ್ಟೋಬರ್ ಮಾಹೆಯಲ್ಲಿ ಆಯುಧ ಪೂಜೆ ನೆರವೇರಿಸುವಾಗ ಕಛೇರಿಯ ಒಳಗೆ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಠಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಈ ಮೂಲಕ ತಿಳಿಸಲಾಗಿದೆ. ಮುಂದುವರೆದು, ಪೂಜಾ ದಿನದಂದು ಕಚೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್ ಸ್ವಿಚ್‌ಗಳನ್ನು ನಂದಿಸಿ ತೆರಳುವಂತೆ ಸೂಚಿಸಲಾಗಿದೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವ್ಯವಸ್ಥಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಪಾರಂಪರಿಕ ಕಟ್ಟಡಗಳ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ/ನೌಕರರ ಆದ ಕರ್ತವ್ಯವಾಗಿದ್ದು, ಮೇಲೆ ತಿಳಿಸಲಾದ ಸೂಚನೆಗಳನ್ನು ಸ್ವಪ್ರೇರಿತರಾಗಿ ಪಾಲಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಆದಾಗ್ಯೂ ಸ್ಪಂದಿಸದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ/ಶಾಖೆಯವರ ಮೇಲೆ ಅನಿವಾರ್ಯವಾಗಿ ಜವಾಬ್ದಾರಿಯನ್ನು ನಿಗಧಿಪಡಿಸಬೇಕಾಗುತ್ತದೆಂದು ಈ ಮೂಲಕ ತಿಳಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ್ ಕೆ.ಹೆಚ್ ಸುತ್ತೋಲೆ ಹೊರಡಿಸಿದ್ದಾರೆ.
ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ… pic.twitter.com/5QguMBgWg0
— Siddaramaiah (@siddaramaiah) October 19, 2023
ಇನ್ನು ಈ ಸರ್ಕಾರದ ಆದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಈ ಹಿಂದಿನ ಬಿಜೆಪಿ ಸರ್ಕಾರದ ಸುತ್ತೋಲೆಯೊಂದಿಗೆ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ