ರಾಮನಗರ, ಆಗಸ್ಟ್ 27: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (Rajiv Gandhi University of Health Sciences) ಸ್ಥಳಾಂತರಕ್ಕೆ ಮುಂದಾಗಿರುವುದನ್ನು ಖಂಡಿಸಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಈಗಾಗಲೇ ಹೋರಾಟ ಆರಂಭಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar), ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಸ್ಥಳೀಯ ಮುಖಂಡರು ತಮಟೆ ಚಳವಳಿ ನಡೆಸಿ ಆಕ್ರೋಶ ಹೊರಹಾಕಿದರು. ಈ ಬಗ್ಗೆ ಹೇಳಿಕೆ ನೀಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy), ವಿವಿ ಸ್ಥಳಾಂತ ಬೇಡ ಎಂದಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸ್ಥಳಾಂತರ ಖಂಡಿಸಿ ಸಾರ್ವಜನಿಕರು, ಸಂಘಟನೆಗಳು ಹೋರಾಟ ಆರಂಭಿಸಿದ್ದಾರೆ. ರಾಮನಗರದಿಂದ ರಾಜೀವ್ ಗಾಂಧಿ ವಿವಿ ಸ್ಥಳಾಂತರ ಮಾಡುವುದು ಬೇಡ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರ ಮೆಡಿಕಲ್ ಕಾಲೇಜಿಗೆ ನಾನೇ 100 ಕೋಟಿ ಹಣ ಕೊಟ್ಟಿದ್ದೆ. ಆಗ ಡಿ.ಕೆ.ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಬಳಿಕ ಬಿಜೆಪಿ ಸರ್ಕಾರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿತ್ತು. ಈಗ ಕಾಂಗ್ರೆಸ್ ಸರ್ಕಾರವಿದೆ, ಆ ಮೆಡಿಕಲ್ ಕಾಲೇಜಿಗೆ ಜೀವಕೊಡಲಿ. ಆದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸ್ಥಳಾಂತರ ಬೇಡ ಎಂದರು.
ರಾಮನಗರಕ್ಕೆ 2006 ರಲ್ಲಿ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಬಂತು. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಆಸ್ಪತ್ರೆ ಬೇಕು ಅಂತಾ ಕನಸು ಕಂಡಿದ್ದೆ. 600 ಕೋಟಿ ವೆಚ್ಚದಲ್ಲಿ ಹಿಂದಿನ ಸರ್ಕಾರ ಎರಡೂ ಸದನದಲ್ಲಿ ಅನುಮೋದನೆ ಕೊಟ್ಟಿತ್ತು. ಈಗ ಮೆಡಿಕಲ್ ಕಾಲೇಜು ಸ್ಥಳಾಂತರ ಸರಿಯಲ್ಲ. ಇದು ವೈದ್ಯಕೀಯ ವಿದ್ಯಾರ್ಥಿಗಳ ಎಜುಕೇಶನ್ ಮೇಲೂ ಪರಿಣಾಮ ಬೀರುತ್ತದೆ. ಬೇಕಾದರೆ ಕನಕಪುರಕ್ಕೆ ಹೊಸ ಮೆಡಿಕಲ್ ಕಾಲೇಜು ಮಂಜೂರಾಗಲಿ ಎಂದು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಫೇಸ್‌ಬುಕ್ ಅಕೌಂಟ್ ಹ್ಯಾಕ್: ಅಶ್ಲೀಲ ಫೋಟೋ ಪೋಸ್ಟ್
ಜಿಲ್ಲಾ ಕೇಂದ್ರ ಬಿಟ್ಟು ಅಲ್ಲೆಲ್ಲೋ ಮೂಲೆಗೆ ಮೆಡಿಕಲ್ ಕಾಲೇಜು ಸ್ಥಳಾಂತರ ಅವೈಜ್ಞಾನಿಕ. ಹೀಗೆ ಆದರೆ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳು ಬರುವುದಿಲ್ಲ. ರಾಮನಗರ ಜಿಲ್ಲಾ ಕೇಂದ್ರ, ಇಲ್ಲಿ ಮೆಡಿಕಲ್ ಕಾಲೇಜು ಬಂದರೆ ಸುತ್ತಮುತ್ತಲಿನ ತಾಲೂಕಿಗಳಿಗೂ ಅನುಕೂಲವಾಗಲಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಬೇಕೇಬೇಕು ಅಂದರೆ ಅವರದ್ದೇ ಸರ್ಕಾರ ಇದೆ. ಹೊಸ ಕಾಲೇಜು ಮಂಜೂರು ಮಾಡಿಕೊಳ್ಳಲಿ. ಅದನ್ನ ಬಿಟ್ಟು ಇದ್ದ ಸ್ಥಳಾಂತರ ಮಾಡೋದು ರಾಮನಗರಕ್ಕೆ ಮಾಡಿದ ಅವಮಾನ ಎಂದರು.
ಮುಂದಿನ ಬಜೆಟ್ನಲ್ಲಿ ರಾಮನಗರಕ್ಕೆ ಮೆಡಿಕಲ್ ಕಾಲೇಜು ಎಂಬ ಉಸ್ತುವಾರಿ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಬಜೆಟ್ ಮಂಡನೆ ಆಗದಿದ್ದರೆ? ಎಂದು ಪ್ರಶ್ನಿಸಿದರು. ಬಜೆಟ್ನಲ್ಲಿ ತರುವುದು ಬೇರೆ ವಿಚಾರ. ಇಲ್ಲಿ ಮೆಡಿಕಲ್ ಕಾಲೇಜಿನ ಕೆಲಸ ಪ್ರಾರಂಭವಾಗಿದೆ. ಅದನ್ನ ನಿಲ್ಲಿಸಿ ಕನಕಪುರಕ್ಕೆ ಶಿಫ್ಟ್ ಮಾಡಬಾರದು ಎಂದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ಹಿನ್ನೆಲೆ ತವರು ಜಿಲ್ಲೆಯಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಯಿತು. ಡಿಕೆ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಸ್ಥಳೀಯ ಮುಖಂಡರು ಕರಪತ್ರ ಹಂಚಿ ಟಮಟೆ ಚಳುವಳಿ ನಡೆಸಿದರು. ರಾಮನಗರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಇಲ್ಲೇ ಉಳಿಸುವಂತೆ ಆಗ್ರಹಿಸಿದರು.
ಮೆಡಿಕಲ್ ಕಾಲೇಜು ಸ್ಥಳಾಂತರದ ವಿರುದ್ಧ ಬೃಹತ್ ಹೋರಾಟಕ್ಕೆ ಹೋರಾಟಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆಗಸ್ಟ್ 29 ಬೃಹತ್ ಸಾರ್ವಜನಿಕ ಸಭೆ ನಡೆಸಿ ಹೋರಾಟ ನಡೆಸಲು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಚಿಂತನೆ ನಡೆಸಿದ್ದು, ನಮ್ಮ ಮೆಡಿಕಲ್ ಕಾಲೇಜು – ನಮ್ಮ ಹಕ್ಕು ಎಂಬ ಹೆಸರಿನಲ್ಲಿ ಹೋರಾಟ ನಡೆಯಲಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ