ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karkanataka Assembly Elections 2023) ಕಾಂಗ್ರೆಸ್ ಈಗಾಗಲೇ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಬಾಕಿ ಇರುವ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹರಸಾಹಸ ಪಡುತ್ತಿದೆ. 2ನೇ ಪಟ್ಟಿ ಸಂಬಂಧ ಕಾಂಗ್ರೆಸ್(Congress) ಚುನಾವಣಾ ಸಮಿತಿ ಸಭೆಗೂ ಒಂದು ದಿನ ಮೊದಲೇ ಸಿದ್ದರಾಮಯ್ಯ ಸಿಎಂ ಹುದ್ದೆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ(DK Shivakumar) ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ. ಹೀಗಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ. ಸಿದ್ದರಾಮಯ್ಯನವರ ಈ ಹೇಳಿಕೆಯಿಂದ ಕಾಂಗ್ರೆಸ್ನಲ್ಲಿ ತಲ್ಲಣ ಸೃಷ್ಟಿಸಿದ್ದು,ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಮತ್ತೊಂದು ಹಂತ ತಲುಪುವ ಮುನ್ನವೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಇದಕ್ಕೆ ನವದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದು, ಅದು ಈ ಕೆಳಗಿನಂತಿದೆ.
ಇದನ್ನೂ ಓದಿ: Siddaramaiah: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ, ಹೈಕಮಾಂಡ್ ಸಮ್ಮತಿಸಲ್ಲ; ಸಿದ್ದರಾಮಯ್ಯ
ನವದೆಹಲಿಯಲ್ಲಿ ಇಂದು(ಏಪ್ರಿಲ್ 04) ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೆ ನೀಡಿಲ್ಲ. ಪ್ರಜಾಭುಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸಿಎಂ ಆಯ್ಕೆ ಆಗಲಿದೆ. ಸುದ್ದಿವಾಹಿನಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಅಂತ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
News article published by @ndtv (Adani TV), alleging that I had commented about Chief Minister candidate in Karnataka, is far from truth.
I never made such comments and will never do such petty politics.
I urge @ndtv to issue clarification and pull down the baseless post. https://t.co/bgIV3QAxtl
— Siddaramaiah (@siddaramaiah) April 4, 2023
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಾನು ಸಿಎಂ ಅಭ್ಯರ್ಥಿ ಎಂಬ ಹೇಳಿಕೆ ಸತ್ಯಕ್ಕೆ ದೂರವಾದ ಆರೋಪ. ಅಂತಹ ಹೇಳಿಕೆ ನೀಡಿಲ್ಲ, ನಾನು ಅಂತಹ ಸಣ್ಣತನದ ರಾಜಕಾರಣ ಮಾಡಲ್ಲ ಎಂದಿದ್ದಾರೆ.
ರಿಪೋರ್ಟರ್ : ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ನಾವು ನೋಡಿದಂತೆ ಇಬ್ಬರು ವ್ಯಕ್ತಿಗಳು ಸಿಎಂ ಸ್ಥಾನದ ರೇಸ್ನಲ್ಲಿ ಇದ್ದಾರೆ. ನೀವು ಇದನ್ನ ಒಪ್ಪಿಕೊಳ್ಳುತ್ತೀರಾ.?
ಸಿದ್ದರಾಮಯ್ಯ : ನೋಡಿ ನಾನು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಆಗಿದ್ದೇನೆ. ಮಿಸ್ಟರ್ ಡಿ.ಕೆ ಶಿವಕುಮಾರ್ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ ಆಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂತಹ ಸಂಗತಿಗಳು ನಡೆಯುತ್ತವೆ. ನಡೆಯುತ್ತಲೇ ಇರುತ್ತವೆ. ಇದರಲ್ಲಿ ತಪ್ಪೇನು ಇಲ್ಲ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸಿದರೆ ತಪ್ಪೇನು ಇಲ್ಲ. ಒಂದ್ವೇಳೆ ನಾನು ಸಿಎಂ ಆಗಬೇಕು ಅಂತ ಬಯಸಿದ್ರೆ ತಪ್ಪಿಲ್ಲ. ಕೆಲ ಮಾಜಿಗಳು ಕೂಡ ನಾವು ಮುಖ್ಯಮಂತ್ರಿ ಆಗಬೇಕು ಅಂತ ಅಂದುಕೊಂಡ್ರೆ ತಪ್ಪೇನು ಇಲ್ಲ. ಅಂತಿಮವಾಗಿ ಹೊಸದಾಗಿ ಚುನಾಯಿತರಾದ ಶಾಸಕರು, ಶಾಸಕಾಂಗ ಪಕ್ಷದ ನಾಯಕನನ್ನ ಆಯ್ಕೆ ಮಾಡುತ್ತಾರೆ. ಬಳಿಕ ಹೈಕಮಾಂಡ್ ಅಂತಿಮವಾದ ನಿರ್ಧಾರ ತೆಗೆದುಕೊಳ್ಳುತ್ತೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆ.
ರಿಪೋರ್ಟರ್ : ಒಂದು ವೇಳೆ ಹೈಕಮಾಂಡ್ ಬಿಸಿ ರಕ್ತದ ನಾಯಕರಿಗೆ ಅವಕಾಶ ಕೊಡಿ ಅಂತ ನಿರ್ಧಾರ ಮಾಡಿದ್ರೆ, ಬಹುಷಃ ಡಿ.ಕೆ ಶಿವಕುಮಾರ್‌ಗೆ ಅವಕಾಶ ಕೊಡಿ ಎಂದರೆ, ಅವರ ನಿರ್ಧಾರ ನೀವು ಒಪ್ಪಿಕೊಳ್ತೀರಾ.?
ಸಿದ್ದರಾಮಯ್ಯ : ಇಲ್ಲ.. ನೋಡಿ ಅಂತಹದ್ದೆಲ್ಲಾ ಇಲ್ಲಿ ಆಗೋಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ಅಡಿಯಲ್ಲಿ ಹೋಗಬೇಕಾಗುತ್ತೆ. ಈ ಪ್ರಶ್ನೆ ಈಗ ಉದ್ಭವ ಆಗಲ್ಲ. ಯಾಕಂದ್ರೆ ಹೈಕಮಾಂಡ್ ತನ್ನಷ್ಟಕ್ಕೆ ತಾನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನೂತನವಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯ ಆಧರಿಸಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ.
ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಆಕಾಂಕ್ಷಿ. ಆದರೆ ಹೈಕಮಾಂಡ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿತ್ತು.
ಅಲ್ಲದೆ, ತಮ್ಮ ಕೋಲಾರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಒಪ್ಪಿದರೆ ಮಾತ್ರ ಕೋಲಾರದಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ತಮಗೆ ಈಗಾಗಲೇ ವರುಣದಿಂದ ಟಿಕೆಟ್ ದೊರಕಿದ್ದು, ವರುಣದಿಂದಲೇ ಸ್ಪರ್ಧಿಸಲಿದ್ದೇನೆ. ಆದರೆ, ಕೋಲಾರದಲ್ಲಿ ಸ್ಪರ್ಧಿಸಿದರೆ ಸುತ್ತಲಿನ 20 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಸ್ಥಳೀಯ ನಾಯಕರಿಂದ ಒತ್ತಾಯವಿದೆ. ಹೀಗಾಗಿ, ಈ ವಿಚಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹೈಕಮಾಂಡ್ ಒಪ್ಪಿದರೆ ಮಾತ್ರ ಕೋಲಾರದಿಂದ ಸ್ಪರ್ಧಿಸುವೆ ಎಂದು ಸಿದ್ದರಾಮಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು.
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 am, Tue, 4 April 23