ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೇ- ಜೂನ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಭಾರೀ ಹಿಂಸಾಚಾರಗಳು ನಡೆದು, ಹಲವು ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಕೊಲ್ಕತ್ತಾ ಹೈಕೋರ್ಟ್ ಎಸ್ಐಟಿಗೆ ಒಪ್ಪಿಸಿದೆ. ಈ ಎಸ್ಐಟಿ ತಂಡದ ನೇತೃತ್ವವನ್ನು ಕರ್ನಾಟಕ ಮೂಲದವರಾದ ಕೊಲ್ಕತ್ತಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಉಳಾ ಚೆಲ್ಲೂರ್ ವಹಿಸಿಕೊಳ್ಳಲಿದ್ದಾರೆ.
ಮಂಜುಳಾ ಚೆಲ್ಲೂರ್ ನೇತೃತ್ವದಲ್ಲಿ ಎಸ್ಐಟಿ ತಂಡ ಪಶ್ಚಿಮ ಬಂಗಾಳದ ಚುನಾವಣೋತ್ತರ ಗಲಭೆಯ ತನಿಖೆ ನಡೆಸಲಿದೆ. ಈ ಮೊದಲು ಆಗಸ್ಟ್ 19ರಂದು ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆದೇಶ ನೀಡಿತ್ತು. ಇದಾದ ಬಳಿಕ ಕೋರ್ಟ್ ಎಸ್ಐಟಿಯನ್ನು ರಚಿಸಿತ್ತು. ಈ ಎಸ್ಐಟಿ ಮೂಲಕ ಪಶ್ಚಿಮ ಬಂಗಾಳದ ಪೊಲೀಸರು ತನಿಖೆ ನಡೆಸಬೇಕೆಂದು ಸೂಚಿಸಿತ್ತು. ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದ ಎಲ್ಲ ಕ್ರಿಮಿನಲ್ ಪ್ರಕರಣಗಳ ತನಿಖೆಗಳನ್ನೂ ನಡೆಸುವಂತೆ ಕೋರ್ಟ್ ಸೂಚಿಸಿತ್ತು.
ಪಶ್ಚಿಮ ಬಂಗಾಳ ಚುನಾವಣೋತ್ತರ ಗಲಭೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಎಸ್ಐಟಿ ಮತ್ತು ಸಿಬಿಐಗೆ 6 ವಾರಗಳ ಸಮಯಾವಕಾಶ ನೀಡಲಾಗಿದೆ. ಚುನಾವಣೋತ್ತರ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದುವರೆಗೂ ಸಿಬಿಐ ಈ ಪ್ರಕರಣದಲ್ಲಿ 34 ಎಫ್ಐಆರ್ಗಳನ್ನು ದಾಖಲಿಸಿದೆ. ಅಲ್ಲದೆ, ಈ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ತಂಡಕ್ಕೆ ಸಹಕರಿಸಲು ಪಶ್ಚಿಮ ಬಂಗಾಳ ಸರ್ಕಾರ 10 ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ.
ಕಳೆದ ಮೇ- ಜೂನ್ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲದ ಭಾರೀ ಗೆಲುವು ಸಾಧಿಸಿದ ನಂತರ ನಡೆದ ಹಿಂಸಾಚಾರದಲ್ಲಿ ಅತ್ಯಂತ ಘೋರ ಕೊಲೆ, ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ಪ್ರಕರಣಗಳು ನಡೆದಿದ್ದವು. ಇನ್ನು, ಚುನಾವಣೆಯ ನಂತರದ ಹಿಂಸಾಚಾರದ ದೂರುಗಳನ್ನು ಪರಿಶೀಲಿಸಲು ನ್ಯಾಯಾಲಯವು ಆದೇಶಿಸಿದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) 15,000 ಸಂತ್ರಸ್ತರನ್ನು ಒಳಗೊಂಡಂತೆ 1979 ದೂರುಗಳನ್ನು ಸ್ವೀಕರಿಸಿತ್ತು. ಚುನಾವಣೋತ್ತರ ಗಲಭೆಯಲ್ಲಿ ಬಿಜೆಪಿಯ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಟಿಎಂಸಿ ನಾಯಕರು ಕೂಡ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಗಲಭೆಯ ಬಗ್ಗೆ ವರದಿ ನೀಡಬೇಕೆಂದು ಕೊಲ್ಕತ್ತಾ ಹೈಕೋರ್ಟ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಹೈಕೋರ್ಟ್ಗೆ ಜುಲೈ 13ರಂದು ಮಾನವ ಹಕ್ಕುಗಳ ಆಯೋಗ ವರದಿ ಸಲ್ಲಿಸಿತ್ತು. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಗಲಭೆಯ ಕುರಿತು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಟೀಕಿಸಿರುವ ಮಾನವ ಹಕ್ಕುಗಳ ಆಯೋಗ (NHRC), ಕಳೆದ ಕೆಲವು ತಿಂಗಳಿನಿಂದ ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಜನರ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರ, ದೌರ್ಜನ್ಯ, ಬೆದರಿಕೆ ಹಾಕುವ ಕೆಲಸಗಳು ನಡೆದಿವೆ. ಇದಕ್ಕೆ ಸರ್ಕಾರವೇ ಹೊಣೆ ಎಂದಿತ್ತು.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮೇ 2ರಿಂದ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿತ್ತು. ಬೈಕ್, ಕಾರುಗಳನ್ನು ರಸ್ತೆಯಲ್ಲಿ ಸುಟ್ಟುಹಾಕಿ ಗಲಭೆ ಉಂಟು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಜನರು ಪ್ರಾಣವನ್ನೂ ಕಳೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 292 ಸ್ಥಾನಗಳ ಪೈಕಿ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಟಿಎಂಸಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿತ್ತು. ಬಿಜೆಪಿ ಕೇವಲ 77 ಸ್ಥಾನಗಳಲ್ಲಿ ಗೆಲುವು ಕಂಡು ಹೀನಾಯ ಸೋಲು ಅನುಭವಿಸಿತ್ತು.
ಇದನ್ನೂ ಓದಿ: West Bengal ಪಶ್ಚಿಮ ಬಂಗಾಳದಲ್ಲಿ ತನ್ಮಯ್ ಘೋಷ್ ನಂತರ ಟಿಎಂಸಿ ಸೇರಿದ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್
ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
(Former Calcutta High Court Judge Manjula Chellur to head SIT in West Bengal post-Election violence cases)
Published On - 4:46 pm, Fri, 3 September 21