ಬೆಂಗಳೂರು, ನವೆಂಬರ್ 9: ಕಾಂಗ್ರೆಸ್ ಆಪರೇಷನ್ನಿಂದ ಪಕ್ಷದ ಶಾಸಕರನ್ನು ರಕ್ಷಿಸುವ ಸಲುವಾಗಿ ಜೆಡಿಎಸ್ (JDS) ನಾಯಕ ಹೆಚ್ಡಿ ಕುಮಾರಸ್ವಾಮಿ ಬುಧವಾರ ಹಾಸನದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದರು. 19 ಶಾಸಕರ ಪೈಕಿ 18 ಮಂದಿ ಜತೆಯಾಗಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಜೆಡಿಎಸ್ನ ಇಬ್ಬರು ಮಾಜಿ ಶಾಸಕರಿಗೆ ಕಾಂಗ್ರೆಸ್ (Congress) ಗಾಳ ಹಾಕಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಗೌರಿಶಂಕರ್ ಹಾಗೂ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಆರ್.ಮಂಜುನಾಥ್ಗೆ ಕಾಂಗ್ರೆಸ್ ಗಾಳ ಹಾಕಿದೆ.
ಈ ಇಬ್ಬರೂ ಶಾಸಕರು ನವೆಂಬರ್ 15ರಂದು ಕಾಂಗ್ರೆಸ್ ಪಕ್ಷ ಸೇರಲು ನಿರ್ಧಾರ ಕೈಗೊಂಡಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿದ್ದ ಪಕ್ಷ ಸೇರ್ಪಡೆ ಮಾತುಕತೆ ಕೊನೆಗೂ ಅಂತಿಮಗೊಂಡಿದೆ. ಅಂತಿಮವಾಗಿ ನವೆಂಬರ್ 15ರಂದು ಕಾಂಗ್ರೆಸ್ ಸೇರ್ಪಡೆಗೆ ಉಭಯ ನಾಯಕರು ತೀರ್ಮಾನ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಸದ್ದು ಜೋರಾಗಿದೆ. ಒಂದೆಡೆ, ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ‘ಕೈ’ ನಾಯಕರು ಆರೋಪಿಸಿದರೆ, ಮತ್ತೊಂದೆಡೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಒಗ್ಗಟ್ಟು ಪ್ರದರ್ಶನ: ಕುಮಾರಸ್ವಾಮಿ ಸಭೆಗೆ 18 ಶಾಸಕರು ಹಾಜರಿ, ಶರಣಗೌಡ ಗೈರು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಶಾಸಕರನ್ನು ಸೆಳೆಯಲು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಯತ್ನಿಸುತ್ತಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಸಹಜವಾಗಿಯೇ ಹಳೆ ಮೈಸೂರು ಭಾಗದಲ್ಲಿ ಆ ಪಕ್ಷಗಳ ಬಲ ವೃದ್ಧಿಯಾಗಲಿದೆ. ಇದನ್ನು ಕುಂಠಿತವಾಗುವಂತೆ ಮಾಡಲು ಮತ್ತು ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿಸಲು ಡಿಕೆ ಸಹೋದರರು ತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ