ಅಭಿವೃದ್ಧಿ ಕೆಲಸ ಆಗುತ್ತಿಲ್ಲವೆಂದು ಪತ್ರ ಬರೆದಿದ್ದು ನಿಜ, ಆದರೆ ಹಳೆಯದ್ದು: ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್
ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇದೆ. ಈ ವರ್ಷ ಸರ್ಕಾರದ ಗ್ಯಾರಂಟಿಗೆ 56 ಸಾವಿರ ಕೋಟಿ ರೂಪಾಯಿ ಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಸಿಗುತ್ತದೆ ಎಂದು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಧಾರಬವಾಡದಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಧಾರವಾಡ, ನವೆಂಬರ್ 9: ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪತ್ರ ಬರೆದ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ (BR Patil) ಪ್ರತಿಕ್ರಿಯೆ ನೀಡಿದ್ದು, ಆ ರೀತಿ ಪತ್ರ ಬರೆದಿದ್ದು ನಿಜ, ಆದರೆ ಅದು ಹಳೆಯದ್ದು. ಅದನ್ನು ಈಗ ವೈರಲ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಧಾರವಾಡದಲ್ಲಿ (Dharawad) ಮಾತನಾಡಿದ ಅವರು, ನಾವು ಮೂರು ಜನರಲ್ಲ, ಅನೇಕ ಶಾಸಕರು ಸೇರಿ ಪತ್ರ ಬರೆದಿದ್ದೆವು. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಪತ್ರ ಬರೆಯಲಾಗಿತ್ತು ಎಂದು ಹೇಳಿದ್ದಾರೆ.
ಆ ಪತ್ರ ಬರೆದಿದ್ದರಲ್ಲಿ ಅಸಮಾಧಾನ, ಅತೃಪ್ತಿ ಇರಲಿಲ್ಲ. ಸಭೆ ಕರೆಯುವಂತೆ ಕೇಳಿದ್ದೆವು ಅಷ್ಟೆ. ಆದರೆ ಹಳೇ ದಿನಾಂಕದ ಲೆಟರ್ ಹೆಡ್ ದುರುಪಯೋಗ ಆಗಿದೆ. ತಮಗೆ ಬೇಕಾದಂತೆ ಬರೆದುಕೊಂಡು ಪತ್ರ ವೈರಲ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇದೆ. ಈ ವರ್ಷ ಸರ್ಕಾರದ ಗ್ಯಾರಂಟಿಗೆ 56 ಸಾವಿರ ಕೋಟಿ ರೂಪಾಯಿ ಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಸಿಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರ ಕಡೆಗಣನೆ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕ ಗೋವಿಂದ ಕಾರಜೋಳ ಆರೋಪಕ್ಕೆ ಸಂಬಂಧಿಸಿ ತಿರುಗೇಟು ನೀಡಿದ ಪಾಟೀಲ್, ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನಲ್ಲಿ ಲಿಂಗಾಯತರು ಗಟ್ಟಿಯಾಗಿದ್ದೇವೆ. ಎಲ್ಲರನ್ನೂ ಸಿಎಂ ಸಿದ್ದರಾಮಯ್ಯ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ವದಂತಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚಾಯಿತಿಗೊಂದು ಮದ್ಯದಂಗಡಿ: ತಮ್ಮದೇ ಸರ್ಕಾರದ ಈ ನಡೆಗೆ ಸಿಡಿದೆದ್ದ ಕಾಂಗ್ರೆಸ್ ಶಾಸಕ
ಗ್ರಾಮ ಪಂಚಾತಿಗೊಂದು ವೈನ್ ಶಾಪ್ ಆರಂಭಿಸುವ ರಾಜ್ಯ ಸರ್ಕಾರದ ಚಿಂತನೆ ವಿಚಾರವಾಗಿಯೂ ಬಿಆರ್ ಪಾಟೀಲ್ ವಿರೋಧ ವ್ಯಕ್ತಪಡಿಸಿ ಇತ್ತೀಚೆಗೆ ಸುದ್ದಿಯಾಗಿದ್ದರು. ಅಲ್ಲದೇ, ಈ ನಡೆಯಿಂದ ಹಿಂದೆ ಸರಿಯದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ