ಪಂಚಾಯಿತಿಗೊಂದು ಮದ್ಯದಂಗಡಿ: ತಮ್ಮದೇ ಸರ್ಕಾರದ ಈ ನಡೆಗೆ ಸಿಡಿದೆದ್ದ ಕಾಂಗ್ರೆಸ್ ಶಾಸಕ
ಗ್ರಾಮ ಪಂಚಾತಿಗೊಂದು ವೈನ್ ಶಾಪ್ ಆರಂಭಿಸುವ ರಾಜ್ಯ ಸರ್ಕಾರದ ಚಿಂತನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಸ್ವತಃ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್, ತಮ್ಮ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಈ ನಡೆಯಿಂದ ಹಿಂದೆ ಸರಿಯದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ಸಹ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ, (ಅಕ್ಟೋಬರ್ 03): ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರದಿಂದ ನಲುಗುತ್ತಿರುವ ಸಿದ್ದರಾಮಯ್ಯನವರ (Siddaramaiah) ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆ ಮೂಲದಿಂದ ಹೆಚ್ಚಿನ ಆದಾಯ ಗಳಿಸಲು ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ, ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ(liquor shops) ಪರವಾನಗಿ ನೀಡಲು ಚಿಂತನೆ ನಡೆಸಿದೆ. ಆದ್ರೆ, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖುದ್ದು ಮಹಿಳೆಯರೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಖುದ್ದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್, ತಮ್ಮ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್, ಪಾಪದ ಹಣದಲ್ಲಿ ಸರ್ಕಾರ ನಡೆಸುವ ಅಗತ್ಯವಿಲ್ಲ. ಮದ್ಯದ ಅಂಗಡಿಗಳನ್ನು ಯಾವ ಪುರುಷಾರ್ಥಕ್ಕೆ ಹೆಚ್ಚಿಸುತ್ತಿದ್ದಾರೆ? ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆಗಳಿದ್ದರೆ ಬೇರೆ ಮಾರ್ಗ ಹುಡುಕಿ. ಶ್ರೀಮಂತರಿಗೆ ಯಾಕೆ ಉಚಿತ ಯೋಜನೆ ಕೊಡುತ್ತಿದ್ದಾರೋ ಗೊತ್ತಿಲ್ಲ. ನನ್ನಂತಹವರಿಗೆ ಉಚಿತ ವಿದ್ಯುತ್ ನೀಡುವ ಅಗತ್ಯವೇನು? ಸಿದ್ದರಾಮಯ್ಯ ಆರ್ಥಿಕ ತಜ್ಞರು, ಮ್ಯಾನೇಜ್ ಮಾಡುವ ನಂಬಿಕೆ ಇದೆ. ಈ ವಿಚಾರವನ್ನು ಶಾಸಕರ ಸಭೆ, ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಒಂದು ವೇಳೆ ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯದಿದ್ದರೆ ನಾನೇ ಹೋರಾಟ ನಡೆಸುವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಗ್ಯಾರಂಟಿ ನಷ್ಟ ಭರಿಸೋಕ್ಕೆ ಸರ್ಕಾರದಿಂದ ಹೊಸ ಪ್ಲಾನ್; ಮಾಲ್, ಸೂಪರ್ ಮಾರ್ಕೆಟ್‌ನಲ್ಲೂ ಮದ್ಯ ಮಾರಾಟ
ಸರ್ಕಾರದ ಮಟ್ಟದಲ್ಲಿ ನಿರ್ಣಯ ಆಗಿಲ್ಲ. ಅಬಕಾರಿ ಸಚಿವರು ತಮ್ಮ ಯೋಜನೆ ಹೇಳಿದ್ದಾರೆ ಅವರ ಯೋಚನೆಗೆ ನಮ್ಮ ವಿರೋಧವಿದೆ. ಅನೇಕ ಮಹಿಳೆಯರು ನಾವು ಜೋಳಿಗೆ ಹಾಕಿ ಸರ್ಕಾರಕ್ಕೆ ಹಣ ನೀಡುತ್ತೇವೆ. ನಿಮ್ಮ ಅಕ್ಕಿ ಬೇಳೆ ನಮಗೆ ಬೇಡ, ಮದ್ಯ ಬಂದ್ ಮಾಡಿ ಸಾಕು ಎಂದು ಹೇಳುತ್ತಿದ್ದಾರೆ. ಅನೀತಿಯಿಂದ, ಪಾಪದ ಹಣದಿಂದ ಸರ್ಕಾರ ನಡೆಸುವುದು ಒಳ್ಳೆಯದಲ್ಲ ಎಂದು ತಮ್ಮ ಸರ್ಕಾರಕ್ಕೆ ಸಲಹೆ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Tue, 3 October 23