ಬ್ಯಾಂಕ್ ಲೋನ್ ಹೆಸರಲ್ಲಿ ಕಲಬುರಗಿ ಮೂಲದ ವ್ಯಕ್ತಿಗಳಿಗೆ 23.89 ಲಕ್ಷ ವಂಚಿಸಿದ ಮುಂಬೈ ಮೂಲದ ಕಿಲಾಡಿಗಳು
ಬ್ಯಾಂಕ್ ನಿಂದ ಹೆಚ್ಚಿನ ಲೋನ್ ಮಾಡಿಸಿ ಕೊಡುವುದಾಗಿ ನಂಬಿಸಿ ವಂಚಿಸುವ ಕೆಲಸ ನಡೆದಿದೆ. ಲೋನ್ ಮಾಡಿಸಿಕೊಡಲು ಕಮಿಷನ್ ಹೆಸರಲ್ಲಿ ಕಲಬುರಗಿ ಮೂಲದ ಇಬ್ಬರು ವ್ಯಕ್ತಿಗಳಿಗೆ ಮುಂಬೈ ಮೂಲದ ವಂಚಕರು ಬರೋಬ್ಬರಿ 23.89 ಲಕ್ಷ ಹಣ ಪಡೆದು ವಂಚಿಸಿದ್ದಾರೆ.
ಕಲಬುರಗಿ, ಅ.04: ಅನೇಕರು ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಬ್ಯಾಂಕ್ ಸಾಲಕ್ಕಾಗಿ (Bank Loan) ಹತ್ತಾರು ಬಾರಿ ಅಲೆದಾಡುತ್ತಾರೆ. ಆದರೆ ಬಹುತೇಕರಿಗೆ ಸಕಾಲದಲ್ಲಿ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಸಿಗೋದಿಲ್ಲಾ. ಆದರೆ ಇಂತವರನ್ನೇ ಗುರಿಮಾಡಿಕೊಂಡ ಕೆಲ ವಂಚಕರು, ಬ್ಯಾಂಕ್ ನಿಂದ ಹೆಚ್ಚಿನ ಲೋನ್ ಮಾಡಿಸಿ ಕೊಡುವುದಾಗಿ ನಂಬಿಸಿ ವಂಚಿಸುವ (Cheating) ಕೆಲಸ ಮಾಡುತ್ತಿದ್ದಾರೆ. ಲೋನ್ ಮಾಡಿಸಿಕೊಡಲು ಕಮಿಷನ್ ಹೆಸರಲ್ಲಿ ಕಲಬುರಗಿ ಮೂಲದ ಇಬ್ಬರು ವ್ಯಕ್ತಿಗಳಿಗೆ ಮುಂಬೈ ಮೂಲದ ವಂಚಕರು ಬರೋಬ್ಬರಿ 23.89 ಲಕ್ಷ ಹಣ ಪಡೆದು ವಂಚಿಸಿದ್ದಾರೆ.
ಘಟನೆ ವಿವರ
ಕಲಬುರಗಿ ನಗರದ ಖಾನ್ ಕಾಲೋನಿ ನಿವಾಸಿಯಾಗಿರೋ ಅಬ್ದುಲ್ ಜಬ್ಬಾರ್ ಅನ್ನೋರು, ನಗರದಲ್ಲಿ ಎಲೆಕ್ಟ್ರಾನಿಕ್ಸ್ ಗೂಡ್ಸ್ ಮತ್ತು ಫರ್ನಿಚರ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅಬ್ದುಲ್ ಜಬ್ಬಾರ್ ಸ್ನೇಹಿತ ಮಹಮ್ಮದ್ ಜಾಕೀರ್ ಹುಸೇನ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದಾರೆ. ಇಬ್ಬರು ಕೂಡಾ ತಮ್ಮ ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಮುಂದಾಗಿದ್ದರು. ಅಬ್ದುಲ್ ಜಬ್ಬಾರ್, ರಾಜ್ಯಾದ್ಯಂತ ತನ್ನ ಅಂಗಡಿಗಳನ್ನು ವಿಸ್ತರಿಸಬೇಕು ಅಂತ ಕನಸು ಕಂಡಿದ್ದ. ಅದಕ್ಕಾಗಿ ಹೆಚ್ಚಿನ ಸಾಲದ ಅವಶ್ಯಕತೆ ಇದ್ದಿದ್ದರಿಂದ, ಕಲಬುರಗಿ ನಗರದ ಅನೇಕ ಬ್ಯಾಂಕ್ ಗಳಿಗೆ ಅಲೆದಾಡಿದ್ದ. ಆದರೆ ಯಾವ ಬ್ಯಾಂಕ್ ಕೂಡಾ ಸಾಲ ನೀಡಲು ಒಪ್ಪಿಕೊಂಡಿರಲಿಲ್ಲಾ. ಆಗ ಮಹಮ್ಮದ್ ಜಾಕೀರ್ ಹುಸೇನ್, ತನಗೆ ಮುಂಬೈ ಮೂಲದ ಹಮೀದ್ ಹುಸೇನ್ ಅನ್ನೋ ವ್ಯಕ್ತಿ ಪರಿಚಯವಿದ್ದು, ಆತ ಅನೇಕರಿಗೆ ಲೋನ್ ಮಾಡಿಸಿಕೊಡುವದಾಗಿ ಹೇಳಿದ್ದ. ಹೀಗಾಗಿ ಮಹಮ್ಮದ್ ಜಾಕೀರ್ ಮತ್ತು ಅಬ್ದುಲ್ ಜಬ್ಬಾರ್ ಇಬ್ಬರು ಸೇರಿಕೊಂಡು ಹಮೀದ್ ಹುಸೇನ್ ನನ್ನು ಭೇಟಿ ಮಾಡಿದ್ದರು. ಆಗ ಹಮೀದ್ ಹುಸೇನ್, ತನಗೆ ಬಾಂಬೆಯಲ್ಲಿ ಪರಿಚಯವಿರೋ ಅಜಯ್ ಪಾಂಡೆ, ಎಂಬ ವ್ಯಕ್ತಿ, ಅನೇಕ ವ್ಯಾಪರಸ್ಥರಿಗೆ ಇಪ್ಪತ್ತರಿಂದ ಮೂವತ್ತು ಕೋಟಿ ಲೋನ್ ಮಾಡಿಸಿಕೊಡುತ್ತಾನೆ ಅಂತ ಹೇಳಿದ್ದ.
ಅಸಹಾಯಕತೆಯನ್ನೆ ದುರುಪಯೋಗ ಮಾಡಿಕೊಂಡ ದುರುಳರು
ಮುಂಬೈ ಮೂಲದ ಅಜಯ್ ಪಾಂಡೆ, 2022 ರ ಮೇ ತಿಂಗಳಲ್ಲಿ ಕಲಬುರಗಿಗೆ ಬಂದಿದ್ದ. ತಾನು ಬಹಳಷ್ಟು ಜನರಿಗೆ ಲೋನ್ ಮಾಡಿಸಿಕೊಟ್ಟಿದ್ದೇನೆ. ನಿಮಗೂ ಮಾಡಿಸಿಕೊಡ್ತೇನೆ, ಅದಕ್ಕೆ ಕಮಿಷನ್ ನೀಡಬೇಕು ಅಂತ ಅಬ್ದುಲ್ ಜಬ್ಬಾರ್ ಮತ್ತು ಮಹಮ್ಮದ್ ಜಾಕೀರ್ ಗೆ ಹೇಳಿದ್ದ. ನಂತರ ಅನೇಕ ಪೇಪರ್ ಕರೆಸ್ಪಾಂಡೆನ್ಸ್ ಕೆಲಸಕ್ಕಾಗಿ ಮೊದಲು ಐದು ಲಕ್ಷ ಇಪ್ಪತ್ತೊಂಬತ್ತು ಸಾವಿರ ಹಣ ನೀಡಬೇಕು ಅಂತ ಹೇಳಿದ್ದ. ತಮಗೆ ಹೆಚ್ಚಿನ ಮೊತ್ತದ ಲೋನ್ ಸಿಗುತ್ತೆ ಅಂತ ತಿಳಿದ ಮಹಮ್ಮದ್ ಜಾಕೀರ್ ಮತ್ತು ಅಬ್ದುಲ್ ಜಬ್ಬಾರ್, 2022ರ ಮೇ ತಿಂಗಳಿಂದ ಅಕ್ಟೋಬರ್ ತಿಂಗಳವರಗೆ ವಿವಿಧ ಖಾತೆಗಳಿಗೆ ಬರೋಬ್ಬರಿ 5.90 ಲಕ್ಷ ಹಣ ಹಾಕಿಸಿಕೊಂಡಿದ್ದ. ಆದ್ರೆ ಲೋನ್ ಮಾತ್ರ ಮಂಜೂರಾಗಿರಲಿಲ್ಲಾ.
ಇದನ್ನೂ ಓದಿ: ಲೋನ್ ಕೊಡುವ ನೆಪದಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ, ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಥಳಿತ
ಇನ್ನು ಇದಾದ ಕೆಲವೇ ದಿನಗಳಲ್ಲಿ ಮತ್ತೆ ಹಮೀದ್ ಹುಸೇನ್, ಮಹಮ್ಮದ್ ಜಾಕೀರ್ ಮತ್ತು ಅಬ್ದುಲ್ ಜಬ್ಬಾರ್ ರನ್ನು ಭೇಟಿ ಮಾಡಿ, ಅಜಯ್ ಪಾಂಡೆಗೆ ದುಡ್ಡು ನೀಡಬೇಡಿ, ಆತನಿಗಿಂತ ಬೇಗ ಲೋನ್ ಮಾಡಿಸಿಕೊಡುವ ಸುಫಿಯಾನಾ ಅನ್ನೋ ವ್ಯಕ್ತಿಯಿದ್ದು, ಆತನ ಖಾತೆಗೆ ಹಣ ಹಾಕಿ, ಆತ ಬೇಗನೆ ಲೋನ್ ಮಾಡಿಸಿಕೊಡುತ್ತಾನೆ ಅಂತ ಹೇಳಿದ್ದ. ಆಗ ಮತ್ತೆ ಹಮೀದ್ ಹುಸೇನ್ ಮಾತನ್ನು ನಂಬಿದ್ದ ಮಹಮ್ಮದ್ ಜಾಕೀರ್ ಮತ್ತು ಅಬ್ದುಲ್ ಜಬ್ಬಾರ್ ಹಂತ ಹಂತವಾಗಿ ವಂಚಕ ಹೇಳಿದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದಾರೆ. ಒಟ್ಟು ಇಬ್ಬರ ಖಾತೆಗೆ ಬರೋಬ್ಬರಿ 23.89 ಲಕ್ಷ ಹಣ ಪಡೆದಿದ್ದಾರೆ. ನಿಮಗೆ ಹದಿನೈದು ಕೋಟಿ ಲೋನ್ ಮಂಜೂರಾಗಿದೆ, ಅದರ ಚೆಕ್ ಪಡೆಯಲು ಅನೇಕ ಖರ್ಚುಗಳಿವೆ ಅಂತ ಹೇಳಿ, ವಂಚಕರು ಹಣ ಪಡೆದಿದ್ದಾರೆ. ಹಣ ಪಡೆದ ನಂತರ, ಇಲ್ಲಿವರಗೆ ಲೋನ್ ಮಂಜೂರು ಮಾಡಿಸಿಕೊಟ್ಟಿಲ್ಲಾ.
ಕೊಟ್ಟ ಹಣವು ಮರಳಿ ಸಿಕ್ಕಿಲ್ಲ. ಜೊತೆಗೆ ಲೋನ್ ಕೂಡಾ ಸಿಕ್ಕಿಲ್ಲ. ಹೀಗಾಗಿ ಮಹಮ್ಮದ್ ಜಾಕೀರ್ ಮತ್ತು ಅಬ್ದುಲ್ ಜಬ್ಬಾರ್, ತಮಗೆ ವಂಚನೆ ಮಾಡಿರುವ ಅಬ್ದುಲ್ ಜಬ್ಬಾರ್, ಸುಪಿಯಾನಾ, ಅಜಯ್ ಪಾಂಡೆ ವಿರುದ್ಧ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಗೆ ವಂಚನೆ ಮಾಡಿರೋರನ್ನು ಪತ್ತೆ ಮಾಡಿ, ನಮಗೆ ಮರಳಿ ಹಣ ಹಿಂತಿರುಗಿಸುವಂತೆ ಮಾಡಿ ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ