ಬೆಂಗಳೂರು, ಜನವರಿ 05: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನು ಮಾಜಿ ಸಚಿವ ವಿ ಸೋಮಣ್ಣ (V Somanna) ಇಂದು ನಗರದ ಪದ್ಮನಾಭನಗರದ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ. ಈ ವೇಳೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು. ಸೋಮಣ್ಣ ಮತ್ತು ದೇವೇಗೌಡರ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಭೇಟಿ ಬಳಿಕ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ದೇವೇಗೌಡರನ್ನ ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ದೇವೇಗೌಡರ ತಂತ್ರಗಾರಿಕೆ ಕಲಿಯಬೇಕು. ನಾನು ಸೋತಬಳಿಕ ನನಗೆ ಕರೆ ಮಾಡಿ ಮಾತಾಡಿದ್ದರು. ಅವರು ನನ್ನ ಗುರುಗಳು. ನಾನು ಅವರ ಶಿಷ್ಯ. 1983ರಲ್ಲಿ ನಾನು ರಾಜಕೀಯ ಬಂದಾಗ ಅವರ ಅನುಯಾಯಿ ಆಗಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಸಿಂಹ ಸಹೋದರ ವಿರುದ್ಧದ ಪ್ರಕರಣ: ಸಿದ್ದರಾಮಯ್ಯರಿಂದ ಅಧಿಕಾರ ದುರುಪಯೋಗವೆಂದ ಕುಮಾರಸ್ವಾಮಿ
ನಾನು H.D.ದೇವೇಗೌಡರಿಂದ ಸಾಕಷ್ಟು ಕಲಿತಿದ್ದೇನೆ. ಅವರಿಗೆ ವಯಸ್ಸಾಗಿರಬಹುದು, ಅಗಾಧ ಜ್ಞಾನ ಇದೆ. ಸುಮಾರು 1 ಗಂಟೆರ ಕಾಲ ಮಾತುಕತೆ ನಡೆಸಿದ್ದೇನೆ. ಅವರು ಕೆಲ ವಿಚಾರಗಳನ್ನ ಹೇಳಿದ್ದಾರೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರದ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಈಗ ಏನೂ ಹೇಳುವ ವಾತಾವರಣವಿಲ್ಲ. ಜ.15 ಅಥವಾ 16ರ ಬಳಿಕ ಗೊತ್ತಾಗುತ್ತೆ. ಸುಮ್ಮನೆ ಬುರುಡೆ ಹೊಡೆದರೆ ಆಗಲ್ಲ ಎಂದು ಹೇಳಿದ್ದಾರೆ.
ರಾಜ್ಯ BJP ನಾಯಕರ ಮೇಲೆ ಅಸಮಾಧಾನ ವಿಚಾರವಾಗಿ ಮಾತನಾಡಿ, ಈ ಕುರಿತು ಮಾತನಾಡಿ ಬಗೆಹರಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಮೈತ್ರಿಯಿಂದ ಜನತೆ ಬಹಳ ಖುಷಿಯಿಂದ ಇದ್ದಾರೆ ಎಂದರು.
ಹೆಚ್ಡಿ ರೇವಣ್ಣ ಪ್ರತಿಕ್ರಿಯಿಸಿದ್ದು, ಸೋಮಣ್ಣ ಹಿರಿಯರು ನಮ್ಮಲ್ಲೇ ಇದ್ದವರು. ಇಂದು ದೇವೇಗೌಡರ ಬಹಳ ದಿನಗಳ ನಂತರ ಭೇಟಿಯಾದರು. ಹಳೆಯ ವಿಚಾರಗಳನ್ನ ಮೆಲುಕು ಹಾಕಿದರು ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ: ಶ್ರೀಕಾಂತ್ ಪ್ರಕರಣ ಉಲ್ಲೇಖಿಸಿ ದೇವೇಗೌಡ ವಾಗ್ದಾಳಿ
ಸೋಮಣ್ಣಗೆ ತುಮಕೂರು ಲೋಕಸಭಾ ಟಿಕೆಟ್ ಬಿಟ್ಟು ಕೊಡುವ ವಿಚಾರವಾಗಿ ಮಾತನಾಡಿ, ಆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಅವರ ಭೇಟಿಯ ವೇಳೆ ನಮ್ಮ ಕುಟುಂಬವನ್ನ ಬಹಳ ಗೌರವದಿಂದ ನಡೆಸಿಕೊಂಡರು. ನಾವು ಎಂದಿಗೂ ಅದನ್ನ ಮರೆಯುವುದಿಲ್ಲ. ದೇಶಕ್ಕೆ ಮೋದಿಯಂತವರು ಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.