ಬಿಜೆಪಿ-ಕಾಂಗ್ರೆಸ್ ಮುಕ್ತ ಕರ್ನಾಟಕ: ಹೊಸ ಪ್ಲಾನ್​ನೊಂದಿಗೆ ಕುಮಾರಸ್ವಾಮಿ-ಕೆಸಿಆರ್ ದೃಢ ಸಂಕಲ್ಪ

| Updated By: ರಮೇಶ್ ಬಿ. ಜವಳಗೇರಾ

Updated on: Oct 05, 2022 | 10:45 PM

ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಟಕ್ಕರ್ ನೀಡಲು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ದೃಢ ಸಂಕಲ್ಪ ಮಾಡಿದ್ದಾರೆ.

ಬಿಜೆಪಿ-ಕಾಂಗ್ರೆಸ್ ಮುಕ್ತ ಕರ್ನಾಟಕ: ಹೊಸ ಪ್ಲಾನ್​ನೊಂದಿಗೆ ಕುಮಾರಸ್ವಾಮಿ-ಕೆಸಿಆರ್ ದೃಢ ಸಂಕಲ್ಪ
HDK KCR
Follow us on

ಬೆಂಗಳೂರು: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಎನ್ನುವ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಿದ್ದಾರೆ. ಇನ್ನು ಇದಕ್ಕೆ ಕರ್ನಾಟಕ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಸಾಥ್ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

2023ರ ಕರ್ನಾಟಕ ಚುನಾವಣೆ, 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಆರ್​ಎಸ್​ ಒಟ್ಟಾಗಿ ಸೇರಿಸಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್​ಗೆ ಶಾಕ್ ಕೊಡಲು ಎಚ್​ಡಿಕೆ ಹೊಸ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ,
ಜೆಡಿಎಸ್​, ಬಿಆರ್​ಎಸ್ (BRS) ಒಟ್ಟಾಗಿ ಕೆಲಸ ಮಾಡಲಿವೆ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯʼ ಸ್ಥಿತಿ ಇದೆ. ಅದೇ ಸ್ಥಿತಿಯನ್ನು ರಾಜ್ಯದಲ್ಲೂ ತರಲು ನಾನು, ಕೆಸಿಆರ್ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ತಮ್ಮ ಹೊಸ ಪಕ್ಷ ಭಾರತ ರಾಷ್ಟ್ರ ಸಮಿತಿಯನ್ನು ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್​; ಹೆಚ್​ಡಿ ಕುಮಾರಸ್ವಾಮಿ ಸಾಥ್

ಈ ಮೊದಲಿನಿಂದಲೂ JDS ಮತ್ತು TRS ಪಕ್ಷಗಳು ಸಹಜ ಮಿತ್ರಪಕ್ಷಗಳಾಗಿದ್ದವು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿಕೊಂಡು ಬಂದಿವೆ. ಈಗ ಟಿಆರ್ ಎಸ್ ರಾಷ್ಟ್ರೀಯ ಪಕ್ಷವಾಗಿ ಬಿಆರ್ ಎಸ್ ಹೆಸರಿನಲ್ಲಿ ಹೊರಹೊಮ್ಮಿರುವುದನ್ನು ನಮ್ಮ ಪಕ್ಷ ಮುಕ್ತಮನಸ್ಸಿನಿಂದ ಸ್ವಾಗತಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.


2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಆರ್ ಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ *ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ವಾತಾವರಣವಿದೆ. ಅದೇ ಸ್ಥಿತಿಯನ್ನು ಕರ್ನಾಟದಲ್ಲೂ ತರಲು ನಾನು ಮತ್ತು ಚಂದ್ರಶೇಖರ್ ರಾವ್ ಅವರೂ ನಿರ್ಧಾರ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಪೂರ್ಣ ಬಹುಮತದ ಸರಕಾರ ರಚನೆ ಮಾಡುವ ಬಗ್ಗೆ ಎರಡೂ ಪಕ್ಷಗಳು ಸದೃಢವಾಗಿ ಕೆಲಸ ಮಾಡಲಿವೆ. ಸಂಪೂರ್ಣ ಬೆಂಬಲ ನೀಡುವುದಾಗಿ ಕೆಸಿಆರ್ ಭರವಸೆ ನೀಡಿದ್ದಾರೆ.

2023ರ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿ ಬಂದರೆ, ಅದು 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವೂ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ಕರ್ನಾಟಕದಲ್ಲಿ ಕನ್ನಡಿಗರದ್ದೇ ಆದ ಸ್ವಾಭಿಮಾನದ ಸರಕಾರ ತರುವ ನಿಟ್ಟಿನಲ್ಲಿಯೂ ನಾವಿಬ್ಬರೂ ಚರ್ಚೆ ನಡೆಸಿದ್ದೇವೆ. ಅದಕ್ಕೆ ಇವತ್ತಿನ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೃಢ ನಾಯಕತ್ವದ ಕೆಸಿಆರ್ ಅವರು ತಮ್ಮ ಸಂಕಲ್ಪ ಬಲದಿಂದಲೇ ತೆಲಂಗಾಣದ ಜನರನ್ನು ಒಟ್ಟಾಗಿ ಕರೆದೊಯ್ದು ತೆಲಂಗಾಣ ರಾಜ್ಯವನ್ನು ಸಾಧನೆ ಮಾಡಿದರು. ನಂತರ ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ʼರೈತಬಂಧುʼ, ʼದಲಿತ ಬಂಧುʼದಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಸರಕಾರದ ಕಾರ್ಯಕ್ರಮಗಳು ಪ್ರತೀ ನಾಗರಿಕನಿಗೂ ತಲುಪುವಂತೆ ಮಾಡಿದರು. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಮಾಡಿತ್ತು. ಮುಂದಿನ ದಿನಗಳಲ್ಲಿ ಅಂತಹ ಜನಪರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Wed, 5 October 22