40 ಪರ್ಸೆಂಟ್​ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್​ಗೆ ಕುಮಾರಸ್ವಾಮಿ ಸವಾಲು

|

Updated on: Jun 12, 2023 | 6:35 PM

ನಷ್ಟದ ಬಗ್ಗೆ ಗೊತ್ತಿದ್ದರೂ, ಆರ್ಥಿಕ ಹೊರೆಯಾಗುತ್ತದೆ ಎಂದು ತಿಳಿದಿದ್ದರೂ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ ಗ್ಯಾರಂಟಿಗಳನ್ನು ಜಾರಿಗೆ ತನ್ನಿ ಅಂತ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

40 ಪರ್ಸೆಂಟ್​ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್​ಗೆ ಕುಮಾರಸ್ವಾಮಿ ಸವಾಲು
ಹೆಚ್​ ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್
Follow us on

ರಾಮನಗರ: ಬಿಜೆಪಿ (BJP) ಸರಕಾರದ ವಿರುದ್ಧ 40% ಆರೋಪ ಮಾಡಿದ ಬಗ್ಗೆ ಕಾಂಗ್ರೆಸ್ (Congress)​ ನಾಯಕರು ಸಾಬೀತು ಮಾಡಿದ್ದಾರಾ? ಲೋಕಾಯುಕ್ತಕ್ಕೆ ದೂರು ನೀಡಿದ್ದರಾ? ಈಗ ನೋಡಿದರೆ ನನಗೆ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿದ 45 ಪರ್ಸೆಂಟ್ ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡುವಂತೆ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸವಾಲು ಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಮೇಲೆ ನೀವು ಮಾಡಿದ 40 ಪರ್ಸೆಂಟ್ ಆರೋಪವನ್ನು ತನಿಖೆ ಮಾಡುವಂತೆ ಸವಾಲು ಹಾಕಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈಗ ಕಾಂಗ್ರೆಸ್ ನವರದ್ದೇ ಸರ್ಕಾರ ಇದೆ. 40% ವಿಚಾರವನ್ನು ತನಿಖೆ ಮಾಡಿಸಲಿ, ಸತ್ಯ ಜನರ ಮುಂದೆ ಇಡಲಿ. ಆರೋಪ ಮಾಡಿದವರ ಬಳಿ ಸಾಕ್ಷ್ಯ ಇರಲೇಬೇಕಲ್ಲವೇ? ಗುತ್ತಿಗೆದಾರರ ಸಂಘದವರು ದೂರು ಕೊಟ್ಟಿದ್ದರಲ್ಲ, ಅವರು ಸಾಕ್ಷಿ ಇಟ್ಟಿದ್ದರೇ? ಲೋಕಾಯುಕ್ತಕ್ಕೆ ದೂರು ನೀಡಲು ಅಡ್ಡಿ ಮಾಡಿದ್ದವರು ಯಾರು? ಎಂದು ಅವರು ಪ್ರಶ್ನಿಸಿದರು.

ಬಿಬಿಎಂಪಿಯ 675 ಕೋಟಿ ರೂ.ಗಳ ಎಲ್​ಒಸಿ ಬಿಡುಗಡೆ ಮಾಡಿಲ್ಲ ಯಾಕೆ?

ಕಳೆದ ಮೇ 8 ರಂದು ಮಹಾನಗರ ಪಾಲಿಕೆಯಲ್ಲಿ 675 ಕೋಟಿ LOC ಹಣವನ್ನ ಯಾಕೆ ರಿಲೀಸ್ ಮಾಡಿಲ್ಲ? ಅದನ್ನು ಯಾಕೆ ಇಟ್ಟುಕೊಂಡಿದ್ದೀರಿ? ಅದರ ಬಗ್ಗೆ ನೀವು ಮೊದಲು ಜನತೆಗೆ ಹೇಳಿ ಎಂದು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್​ಗೆ ಒತ್ತಾಯ ಮಾಡಿದರು.

ಇದನ್ನೂ ಓದಿ: Good news poor class: ಇಂದಿರಾ ಕ್ಯಾಂಟೀನ್​ಗಳಿಗೆ ಮರುಜೀವ ನೀಡಲು ಸೂಚನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಶಕ್ತಿ ಯೋಜನೆ ಜಾರಿಯಿಂದ ಕೆಎಸ್​ಆರ್​ಟಿಸಿಗೆ ನಷ್ಟ

ಶಕ್ತಿ ಯೋಜನೆ ಜಾರಿಯಿಂದ ಕೆಎಸ್​ಆರ್​ಟಿಸಿಗೆ ನಷ್ಟದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಷ್ಟದ ಬಗ್ಗೆ ಗೊತ್ತಿದ್ದರೂ, ಆರ್ಥಿಕ ಹೊರೆಯಾಗುತ್ತದೆ ಎಂದು ತಿಳಿದಿದ್ದರೂ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್​ನವರ ಶಕ್ತಿ ಯೋಜನೆ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಅವರು ಚುನಾವಣೆಗೂ ಮೊದಲೇ ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನು ಘೋಷಿಸಿಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ನಿಮಗಳನ್ನು ಹಾಕುತ್ತಿದ್ದಾರೆ. ಅಂದು ಜನರಿಗೆ ಯಾವ ಭರವಸೆ ನೀಡಿದ್ದರೋ ಅದನ್ನೇ ಜಾರಿ ಮಾಡುವಂತೆ ಒತ್ತಾಯಿಸುತ್ತೇನೆ ಎಂದರು.

ಸಚಿವ ಮಹದೇವಪ್ಪ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ಮನುವಾದಿಗಳು ಎಂದು ಸಚಿವ ಡಾ.ಹೆಚ್​.ಸಿ.ಮಹದೇವಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಇನ್ನೂ ಎಷ್ಟು ವರ್ಷ ಮನುವಾದ ಪದವನ್ನು ಬಳಕೆ‌ ಮಾಡುತ್ತೀರಿ? ಈಗ ಅಧಿಕಾರದಲ್ಲಿ ಇದ್ದೀರಲ್ಲಾ ಸರಿ‌ ಮಾಡಿ ಎಂದು ಟಾಂಗ್​ ಕೊಟ್ಟರು. ಈ ಹಿಂದೆ ಅಧಿಕಾರದಲ್ಲಿದ್ದಾಗ ಯಾಕೆ ಮನುವಾದ ಸರಿಪಡಿಸಲಿಲ್ಲ. ಹಾಗಾದರೆ ನೀವು ಅಧಿಕಾರದಲ್ಲಿದ್ದಾಗ ಏನು ಸರಿ ಮಾಡಿದ್ದೀರಿ? ನಿಮ್ಮ ರಾಜಕೀಯಕ್ಕೆ ಶಕ್ತಿ ತುಂಬಲು ಮನುವಾದ ಪದ ಬೇಕಿದೆ ಎಂದು ಹೇಳಿದರು.

ಬಿಜೆಪಿಯವರ ಹೇಳಿಕೆ ಬಾಲಿಶವಾದುದು: ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗೆ ಹಣ ಒದಗಿಸಲು ಆಗಲ್ಲವೆಂದು ಹೇಳುವುದಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಹಣ ಹೊಂದಿಸುವುದು ಕಷ್ಟವಾಗಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಸ್ವಲ್ಪ ದಿನ ಸರ್ಕಾರ ನಡೆಸಿದ್ದೇನೆ, ನನಗೂ ಅನುಭವವಿದೆ. ಯಾವುದೇ ಕಾರ್ಯಕ್ರಮ ತಂದರೂ ಹಣ ಒದಗಿಸಲು ಸಾಧ್ಯವಿದೆ. ಆದರೆ ಬಿಜೆಪಿಯವರ ಹೇಳಿಕೆ ಬಾಲಿಶವಾದುದು. ಸರ್ಕಾರ ಸರಿಯಾಗಿ ವ್ಯವಸ್ಥೆ ಮಾಡಿಕೊಂಡರೆ ಹಣ ಹೊಂದಿಸಬಹುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ