DK Shivakumar: ಡಿಕೆ ಶಿವಕುಮಾರ್​ಗೆ ತಾತ್ಕಾಲಿಕ ರಿಲೀಫ್​ ನೀಡಿದ ಕರ್ನಾಟಕ ಹೈಕೋರ್ಟ್, ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.

DK Shivakumar: ಡಿಕೆ ಶಿವಕುಮಾರ್​ಗೆ ತಾತ್ಕಾಲಿಕ ರಿಲೀಫ್​ ನೀಡಿದ ಕರ್ನಾಟಕ ಹೈಕೋರ್ಟ್, ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ
ಡಿಸಿಎಂ ಡಿಕೆ ಶಿವಕುಮಾರ್​ ಅವರಿಗೆ ಹೈಕೋರ್ಟ್​ನಿಂದ ರಿಲೀಫ್
Follow us
|

Updated on: Jun 12, 2023 | 5:58 PM

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸದ್ಯ ಡಿಕೆ ಶಿವಕುಮಾರ್ ಅವರಿಗೆ ಸಿಬಿಐ ತನಿಖೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು, ಇದನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷರು ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ವಿರುದ್ಧದ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಅರ್ಜಿದಾರರ ಪರ ಹಾಗೂ ಸಿಬಿಐ ಪರ ವಕೀಲರ ವಾದ ಪ್ರತಿವಾದ ಆಲಿಸುತ್ತಾ ಹಲವು ಬಾರಿ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.

ಸಿಬಿಐ ತನಿಖೆಗೆ ಅನುಮತಿ ನೀಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಆರಂಭದಲ್ಲಿ ಬಿಗ್ ರಿಲೀಫ್ ಸಿಕ್ಕಿತ್ತು. ಫೆಬ್ರುವರಿ 24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಬಳಿಕ ನಡೆದ ವಿಚಾರಣೆಗಳ ಸಮಯದಲ್ಲಿ ಕೋರ್ಟ್, ಮಾರ್ಚ್‌ 31ಕ್ಕೆ, ಏಪ್ರಿಲ್ 6ಕ್ಕೆ, ಏಪ್ರಿಲ್ 13ಕ್ಕೆ, ಏಪ್ರಿಲ್ 17ರ ವರೆಗೆ ಮಧ್ಯಂತರ ತಡೆ ವಿಸ್ತರಿಸಿತ್ತು. ಮೇ ತಿಂಗಳಿನಲ್ಲಿ ನಡೆದಿದ್ದ ವಿಚಾರಣೆ ವೇಳೆಯೂ ತಡೆ ವಿಸ್ತರಿಸಲಾಗಿತ್ತು. ನಂತರದ ವಿಚಾರಣೆಯಲ್ಲಿ ಅರ್ಜಿ ವಜಾಗೊಳಿಸಲಾಗಿತ್ತು.

ಇದನ್ನೂ ಓದಿ: ಅಪ್ಪ ಜೈಲಿನಲ್ಲಿದ್ದಾಗ ನೋಡಲು ಮಾರುವೇಷದಲ್ಲಿ ಹೋಗಿದ್ದ ಡಿಕೆಶಿ ಪುತ್ರಿ ಐಶ್ವರ್ಯಾ: ಮುಂದೇನಾಯ್ತು?

ಏನಿದು ಪ್ರಕರಣ?

ಡಿಕೆ ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರು 74.93 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂಬ ಆರೋಪ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಅದರಂತೆ 2020ರ ಅಕ್ಟೋಬರ್ 5ರಂದು ದೆಹಲಿ, ಮುಂಬೈ ಸೇರಿದಂತೆ ಡಿಕೆ ಶಿವಕುಮಾರ್ ಅವರಿಗೆ ಸೇರಿದ 14 ಸ್ಥಳಗಳ ಮೇಲೆ ಸಿಬಿಐ ಏಕಕಾಲಕ್ಕೆ ದಾಳಿ ನಡೆಸಿತ್ತು. ಈ ವೇಳೆ ಕಂಪ್ಯೂಟರ್ ಹಾರ್ಡ್​ಡಿಸ್ಕ್​ ಹಾಗೂ 57 ಲಕ್ಷ ರೂ. ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇನ್ನೊಂದೆಡೆ, ಜಾರಿ ನಿರ್ದೇಶನಾಲಯವು (ಇಡಿ) ಡಿಕೆ ಶಿವಕುಮಾರ್ ವಿರುದ್ಧ ಆಸ್ತಿ ಗಳಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿತ್ತು. ಈ ಸಂಬಂಧ ಡಿ.ಕೆ. ಶಿವಕುಮಾರ್ ಹಲವು ಬಾರಿ ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿ ಜೈಲಿಗೆ ಹೋಗಿ ಜಾಮೀನು ಮೇಲೆ ಬಿಡುಗಡೆಯಾಗಿ ಹೊರಬಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ