AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಜೈಲಿನಲ್ಲಿದ್ದಾಗ ನೋಡಲು ಮಾರುವೇಷದಲ್ಲಿ ಹೋಗಿದ್ದ ಡಿಕೆಶಿ ಪುತ್ರಿ ಐಶ್ವರ್ಯಾ: ಮುಂದೇನಾಯ್ತು?

DK Shivakumar-Aishwarya: ಡಿಕೆ ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ಮಗಳು ಐಶ್ವರ್ಯಾ ಮಾರುವೇಷದಲ್ಲಿ ದೆಹಲಿಗೆ ಹೋಗಿ ಅಪ್ಪನನ್ನು ನೋಡುವ ಪ್ರಯತ್ನ ಮಾಡಿದ್ದರಂತೆ. ಮುಂದೇನಾಯ್ತು? ಅವರೇ ವಿವರಿಸಿದ್ದಾರೆ.

ಅಪ್ಪ ಜೈಲಿನಲ್ಲಿದ್ದಾಗ ನೋಡಲು ಮಾರುವೇಷದಲ್ಲಿ ಹೋಗಿದ್ದ ಡಿಕೆಶಿ ಪುತ್ರಿ ಐಶ್ವರ್ಯಾ: ಮುಂದೇನಾಯ್ತು?
ಡಿಕೆ ಶಿವಕುಮಾರ್-ಐಶ್ವರ್ಯಾ
ಮಂಜುನಾಥ ಸಿ.
| Updated By: Digi Tech Desk|

Updated on:Jun 12, 2023 | 9:12 AM

Share

ಡಿಕೆ ಶಿವಕುಮಾರ್ (DK Shivakumar) ಕಳೆದ ನಲವತ್ತು ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದಾರೆ. ಬಹುತೇಕ ಯಶಸ್ವಿ ರಾಜಕೀಯವನ್ನೇ ಮಾಡುತ್ತಾ ಬಂದಿರುವ ಡಿ.ಕೆ.ಶಿವಕುಮಾರ್​ಗೆ ಜೀವನದ ದೊಡ್ಡ ಹಿನ್ನಡೆಯೆಂದರೆ ಇಡಿ (ED) ಪ್ರಕರಣದಲ್ಲಿ ಅನುಭವಿಸಿದ ಜೈಲು ವಾಸ. 2017 ರಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅದಾದ ಬಳಿಕ 2019ರಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಿದ್ದರು. ಅದು ಸ್ವತಃ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬಕ್ಕೆ ಬಹಳ ಸಂಕಷ್ಟದ ಸಮಯ. ಅಪ್ಪನನ್ನು ಬಹಳ ಹಚ್ಚಿಕೊಂಡಿದ್ದ ಅವರ ಪುತ್ರಿ ಐಶ್ವರ್ಯಾ (Aishwarya), ಅಪ್ಪನನ್ನು ನೋಡಲು ಮಾರುವೇಷದಲ್ಲಿ ಹೋಗಿದ್ದರಂತೆ. ಆ ಘಟನೆಯನ್ನು ಸ್ವತಃ ಐಶ್ವರ್ಯಾ ಅವರು ವೀಕೆಂಡ್ ವಿತ್ ರಮೇಶ್​ನಲ್ಲಿ (Weekend With Ramesh) ನೆನಪು ಮಾಡಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಿದ್ದಾಗ ಐಶ್ವರ್ಯಾ ಅವರಿಗೆ ಅಪ್ಪನನ್ನು ನೋಡುವ ಅತೀವ ಹಂಬಲವಾಗಿದೆ. ಆಗ ಚಿಕ್ಕಪ್ಪ ಸುರೇಶ್ ಅವರ ಒಪ್ಪಿಗೆ ಕೇಳಿದ್ದಾರೆ. ಆದರೆ ಅವರು ಆಗದು ಎಂದಿದ್ದಾರೆ. ಐಶ್ವರ್ಯಾ ಅವರೇ ಹೇಳಿಕೊಂಡಿರುವಂತೆ ಅಪ್ಪ ಡಿಕೆಶಿಗಿಂತಲೂ ಡಿಕೆ ಸುರೇಶ್ ಕಂಡರೆ ಬಹಳ ಹೆದರುತ್ತಾರಂತೆ ಐಶ್ವರ್ಯಾ. ಅದಾದ ಬಳಿಕ ಹೇಗೋ ಧೈರ್ಯ ಮಾಡಿ ತಮ್ಮ ಸಂಬಂಧಿಯೊಬ್ಬರನ್ನು ಜೊತೆ ಮಾಡಿಕೊಂಡು ದೆಹಲಿಗೆ ಹೋಗಿದ್ದಾರೆ. ಆದರೆ ಅಲ್ಲಿ ಅವರಿಗೆ ಡಿಕೆಶಿ ಅವರನ್ನು ನೋಡುವ ಅವಕಾಶ ಸಿಕ್ಕಿಲ್ಲ.

ಅದಾದ ಬಳಿಕ ಐಶ್ವರ್ಯಾ, ಪತ್ರಕರ್ತೆಯ ವೇಷದಲ್ಲಿ ವಿಶೇಷ ನ್ಯಾಯಾಲಯ ಪ್ರವೇಶಿಸಿದರಂತೆ. ಅಲ್ಲಿ ಸ್ವತಃ ಡಿ.ಕೆ.ಶಿವಕುಮಾರ್ ಎದುರು ಬಂದರಂತೆ. ಆದರೆ ಆಗ ಅವರನ್ನು ಮಾತನಾಡಿಸಲು ಐಶ್ವರ್ಯಾಗೆ ಸಾಧ್ಯವಾಗಿಲ್ಲ. ಆದರೆ ಅದೇ ದಿನ ಜಡ್ಜ್​ ಸಾಹೇಬರು, ಡಿ.ಕೆ.ಶಿವಕುಮಾರ್ ಅವರ ಕುಟುಂಬದವರು ಯಾರಾದರೂ ಇದ್ದರೆ ಅವರನ್ನು ಭೇಟಿ ಆಗಿ ಹದಿನೈದು ನಿಮಿಷ ಮಾತನಾಡಬಹುದು ಎಂದರಂತೆ. ಆಗ ಪತ್ರಕರ್ತೆಯ ವೇಷದಲ್ಲಿದ್ದ ಐಶ್ವರ್ಯಾ ತಾವು ಡಿಕೆಶಿ ಮಗಳು ಎಂದು ಪೊಲೀಸರ ಬಳಿ ಹೇಳಿಕೊಂಡಾಗ ಅವರು ನಂಬಲಿಲ್ಲವಂತೆ. ಬಲವಂತ ಮಾಡಿದಾಗ, ಡಿಕೆಶಿ ಅವರು ನಿಮ್ಮನ್ನು ಮಗಳು ಎಂದು ಗುರುತು ಹಿಡಿದರಷ್ಟೆ ಭೇಟಿ ಸಾಧ್ಯ ಎಂದರಂತೆ.

ಕೂದಲು ವಿನ್ಯಾಸವನ್ನೆಲ್ಲ ಬದಲು ಮಾಡಿಕೊಂಡು ಹೋಗಿದ್ದ ಐಶ್ವರ್ಯಾಗೆ ಅಪ್ಪ ತಮ್ಮನ್ನು ಗುರುತು ಹಿಡಿಯುತ್ತಾರೋ ಇಲ್ಲವೋ ಎಂಬ ಭಯವಿತ್ತಂತೆ ಆದರೆ ಡಿ.ಕೆ.ಶಿವಕುಮಾರ್, ಐಶ್ವರ್ಯಾ ಅವರನ್ನು ಗುರುತು ಹಿಡಿದು ಮಾತನಾಡಿಸಿದ್ದಾರೆ. ಹೀಗೆ ದೆಹಲಿಯಲ್ಲಿ ಅಪ್ಪ-ಮಗಳ ಭೇಟಿ ಆಗಿದೆ.

ಐಶ್ವರ್ಯಾ, ಡಿ.ಕೆ.ಶಿವಕುಮಾರ್ ಅವರ ಹಿರಿಯ ಪುತ್ರಿ. ಐಶ್ವರ್ಯಾ ಅವರನ್ನು ಎಸ್​ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರ ಮಗನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಶಾಲೆ, ಅಪಾರ್ಟ್​ಮಿಂಟ್​ಗಳನ್ನು ಹೊಂದಿರುವ ಐಶ್ವರ್ಯಾ ಅವುಗಳನ್ನೆಲ್ಲ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಆಭರಣ ಹಾಗೂ ಆಕಾಶ್ ಎಂಬ ಮಕ್ಕಳಿದ್ದಾರೆ. ಆಭರಣ, ಸಿವಿಲ್ ಎಂಜಿನಿಯರ್ ಮಾಡುತ್ತಿದ್ದರೆ ಆಕಾಶ್ ಕಾನೂನು ವಿದ್ಯಾರ್ಥಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 am, Mon, 12 June 23