ದಿಸ್ ಈಸ್ ಇಂಡಿಯಾ: ಕೆಟ್ಟ ಅನುಭವ ಮರೆಯುವಂತೆ ಮಾಡಿದ ಜನರ ಸ್ನೇಹ, ಭಾರತವನ್ನು ಹೊಗಳಿದ ವಿದೇಶಿ ಯುಟ್ಯೂಬರ್
ವಿದೇಶಿ ಯುಟ್ಯೂಬರ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆಯ ವಿಡಿಯೋ ಹಳೆಯದ್ದಾಗಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಬೆಂಗಳೂರು: ವಿಡಿಯೋ ಮಾಡುತ್ತಿದ್ದಾಗ ಚಿಕ್ಕಪೇಟೆ ಸ್ಥಳೀಯ ವ್ಯಾಪಾರಿ ದುರ್ವರ್ತನೆ ತೋರಿದರೂ ಬೆಂಗಳೂರಿನ (Bengaluru) ಇತರ ಜನರ ಸ್ನೇಹಕ್ಕೆ ಮನಸೋತ ವಿದೇಶಿ ಯುಟ್ಯೂಬರ್ ಭಾರತವನ್ನು ಹೊಗಳಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಹೌದು, ಭಾರತದ ಪ್ರವಾಸಕ್ಕೆ ಬಂದಿರುವ ನೆದರ್ ಲ್ಯಾಂಡ್ನ ಯುಟ್ಯೂಬರ್ ಪೆಡ್ರೋ ಮೊಟಾ ಅವರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವಿಡಿಯೋ ಮಾಡುತ್ತಿದ್ದಾಗ ನವಾಬ್ ಎಂಬಾತ ಕಿರುಕುಳ ನೀಡಿ ಭಾರತದ ಜನರು ತಲೆತಗ್ಗಿಸುವಂತೆ ಮಾಡಿದ್ದ. ಆದರೆ, ಅದೇ ಪೇಟೆಯಲ್ಲಿ ವ್ಯಕ್ತಿಯೊಬ್ಬನ ಉತ್ತಮ ನಡೆಗೆ ಮನಸೋತ ಪೆಡ್ರೋ ಮೊಟಾ, ದಿಸ್ ಈಸ್ ಇಂಡಿಯಾ ಅಂತ ಹೊಗಳಿದ್ದಾರೆ. ಅಷ್ಟಕ್ಕೂ ಅವರು ಹೊಗಳಲು ಕಾರಣವೇನು ಗೊತ್ತಾ?
ವ್ಯಾಪಾರಿಯಿಂದ ಕಿರುಕುಳಕ್ಕೊಳಗಾದ ಪೆಡ್ರೋ ಮೊಟಾ ಅವರು ಜನಸಂದಣಿಯಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ನಮಸ್ತೆ ಅಂತ ಹೇಳಿದ್ದಾರೆ. ಅತಿಥಿ ದೇವೋ ಭವ ಎಂಬ ಪರಿಕಲ್ಪನೆಯಂತೆ ಬೈಕ್ ಸವಾರ ಉತ್ತಮವಾಗಿ ನಡೆದುಕೊಂಡು ನಮಸ್ತೆ ಅಂತ ಪ್ರತ್ಯುತ್ತರಿಸಿದ್ದಾರೆ. ಈ ವೇಳೆ ಬೈಕ್ ಮುಂದೆ ಇದ್ದ ಎರಡು ಬಾಳೆ ಹಣ್ಣುಗಳನ್ನು ನೋಡಿದ ಪೆಡ್ರೋಗೆ ಸವಾರ ಬಾಳೆ ಹಣ್ಣು ನೀಡಿದ್ದಾರೆ. ಇಂತಹ ಸ್ನೇಹಪರ ವರ್ತನೆಗೆ ಮನಸೋತ ಪೆಡ್ರೋ, ಬಾಳೆಹಣ್ಣು ಸ್ವೀಕರಿಸಿದ ನಂತರ ‘ಇದು ಭಾರತ’ ಅಂತ ಹೊಗಳಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಟನೆ ವಿಡಿಯೋ ಹಳೆಯದ್ದು: ಬೆಂಗಳೂರು ನಗರ ಪೊಲೀಸ್ ಆಯುಕ್ತ
ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಹಳೆಯ ಘಟನೆ ಈಗ ಹರಿದಾಡುತ್ತಿದೆ. ಕಿರುಕುಳ ಕೊಟ್ಟ ವ್ಯಕ್ತಿ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಯಾರ ಮೇಲೂ ಇಂತಹ ಅತಿರೇಕಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Dutch Vlogger Thrashed: ಬೆಂಗಳೂರಿನಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ, ಚಿಕ್ಕಪೇಟೆ ವ್ಯಾಪಾರಿ ಅರೆಸ್ಟ್
ಭಾರತದ ಪ್ರವಾಸಕ್ಕೆ ಬಂದಿರುವ ವಿದೇಶಿ ಪ್ರವಾಸಿಗರೊಬ್ಬರಿಗೆ ಬೆಂಗಳೂರಿನಲ್ಲಿ ಪುಂಡನೊಬ್ಬ ಕಿರುಕುಳ ನೀಡಿದ ಘಟನೆ ನಡೆದಿತ್ತು. ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಎನ್ನುವ ಯೂಟ್ಯೂಬರ್ನನ್ನು ಚಿಕ್ಕಪೇಟೆಯಲ್ಲಿ ತನ್ನ ಪಾಡಿಗೆ ವಿಡಿಯೋ ಮಾಡುತ್ತಿದ್ದಾಗ ಸಖಾಸುಮ್ಮನೆ ತಂಟೆಗೆ ಬಂದ ಸ್ಥಳೀಯ ವ್ಯಾಪಾರಿಯೊಬ್ಬ ಎಳೆದಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಆರಂಭವಾಗಿದೆ.
ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ದೇಶದಲ್ಲಿ ಕಿರುಕುಳಕ್ಕೆ ಕೊಟ್ಟಿದ್ದು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧ ಸ್ಥಳೀಯರು ಪಶ್ಚಿಮ ಡಿಸಿಪಿ ಗಮನಕ್ಕೆ ತಂದಿದ್ದರು. ಬಳಿಕ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಸುಮೋಟೋ ಕೇಸ್ ದಾಖಲಿಸಿಕೊಂಡು ಆರೋಪಿ ನವಾಬ್ನನ್ನು ಬಂಧಿಸಿದ್ದರು. ಸದ್ಯ ಈ ಘಟನೆ ಹಳೆಯದ್ದು ಅಂತ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಯಾವಾಗ ನಡೆದಿದ್ದು ಎಂದು ತಿಳಿಸಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Mon, 12 June 23