ಬೆಂಗಳೂರು, (ಅಕ್ಟೋಬರ್ 15): ಡಿಕೆ ಶಿವಕುಮಾರ್ (DK Shivakumar) ಹಾಗೂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಈ ಹಿಂದೆ ರಾಜ್ಯ ರಾಜಕಾರಣದ ಜೋಡೆತ್ತುಗಳಾಗಿ ಗುರುತಿಸಿಕೊಂಡಿದ್ದರು. ಆದ್ರೆ, ಇದೀಗ ಅದೇನಾಯ್ತೋ ಏನೋ ಮಾಜಿ ಸಿಎಂ ಕುಮಾರಸ್ವಾಮಿ ಅಕ್ಷರಶಃ ಡಿಕೆ ಬ್ರದರ್ಸ್ ವಿರುದ್ಧ ಸಿಡಿದೆದ್ದಿದ್ದು, ನಿಂತರೂ, ಕುಂತರೂ, ಎಲ್ಲಿ ಹೋದರೂ ಸಹ ಡಿಕೆ ಬ್ರದರ್ಸ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದೀಗ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ…ಕಳ್ಳನ ಮನಸ್ಸು ಹುಳ್ಳುಳ್ಳಗೆ..ಈ ಗಾದೆಮಾತುಗಳು ಯಾರಿಗೆ ಅನ್ವಯ ಆಗುತ್ತವೋ ಇಲ್ಲವೋ ಗೊತ್ತಿಲ್ಲ. ಡಿಕೆ ಸಹೋದರರಿಗಂತೂ ಕರಾರುವಕ್ಕಾಗಿ ಅನ್ವಯಿಸುತ್ತವೆ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರು ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ” ಎಂದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಹತಾಶೆಯ ಹಳಹಳಿಕೆಯಷ್ಟೇ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ? ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ? ಅವರು ತಿಹಾರ್ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ, ಸರಿ. ಆದರೆ, ತಿಹಾರಿಗೆ ಹೋಗುವ ಭಯ ಅಥವಾ ಗ್ಯಾರಂಟಿ ಸ್ವತಃ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ. ಇಲ್ಲದಿದ್ದರೆ ಅವರು ಇಷ್ಟು ತೀವ್ರವಾಗಿ ನನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ ಎಂದರು.
ಅಂದಹಾಗೆ, ನಾನು ಐಟಿ ಪ್ರತಿನಿಧಿಯೂ ಅಲ್ಲ, ಈಡಿ ಉದ್ಯೋಗಿಯೂ ಅಲ್ಲ. ಒಬ್ಬ ಹುಲು ಮಾನವನಷ್ಟೇ.. ಕೆಲವರ ಭ್ರಮೆಗಳಿಗೆ ನಾನೇನು ಮಾಡಲಿ? 40% ಕಮೀಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ? ಆದರೆ, ಇವರ ಪರ್ಸಂಟೇಜ್ ಬಗ್ಗೆಯೇ ಹೇಳಿದರೆ ಕೋಪ ಬರುತ್ತದೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು? ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ? ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ತನಿಖೆ, ಆಯೋಗ ಎಂದು ಜಪಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮೀ ಬಗ್ಗೆ ಸತ್ಯ ಹೇಳಬೇಕಲ್ಲವೇ? ಎಷ್ಟೇ ಆಗಲಿ, ಒಬ್ಬರು ಸಿದ್ದಪುರುಷರು! ಇನ್ನೊಬ್ಬರು ಸತ್ಯಪುರುಷರು. ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ. ಅದು ಯಾವ ತನಿಖೆ ಎಂದು ಅವರೇ ಬಾಯಿ ಬಿಟ್ಟು ಹೇಳಲಿ ಎಂದು ಆಗ್ರಹಿಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ