ಬೆಂಗಳೂರು: ಮಾಜಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಸೋಲಿನಿಂದ ಆಚೆ ಬಂದಂತೆ ಕಾಣುತ್ತಿಲ್ಲ. ಪದೇ ಪದೇ ತಮ್ಮ ಸೋಲಿನ ಬಗ್ಗೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ(BJP) ಕಚೇರಿಯಲ್ಲಿ ನಿನ್ನೆ(ಜೂನ್ 25) ನಡೆದ ಆತ್ಮಾವಲೋಕನ ಸಭೆಯಲ್ಲೂ ತಮ್ಮ ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ಸೋಲಿಗೆ ಮಾಜಿ ಸಚಿವ ಡಾ.ಕೆ. ಸುಧಾಕರ್(DR K Sudhakar) ಕಾರಣ ಎಂದು ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಇದೇ ವೇಳೆ ಸೋಲಿಗೆ ಹಲವು ಕಾರಣಗಳನ್ನೂ ಸಹ ನೀಡಿದ್ದು, ಅದು ಈ ಕೆಳಗಿನಂತಿದೆ ನೋಡಿ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ಕಾಂಗ್ರೆಸ್ನಲ್ಲಿದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ. ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಕೆ.ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದ್ದರು. ಉಸ್ತುವಾರಿ ಸ್ಥಾನವನ್ನು ಡಾ.ಕೆ.ಸುಧಾಕರ್ ಸಮರ್ಥವಾಗಿ ನಿಭಾಯಿಸಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ. ನನ್ನ ಹಾಗೂ ಚಿಂತಾಮಣಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಡಾ.ಕೆ.ಸುಧಾಕರ್ ಕಾರಣ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕಾರ್ಯಕರ್ತರ ಆಗುಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲೇ ಇಲ್ಲ. ಸುಧಾಕರ್ನಿಂದಾಗಿಯೇ ನಾನು ಸೋತಿದ್ದು ಎಂದು ಎಂಟಿಬಿ ನಾಗರಾಜ್ ಕಿಡಿಕಾರಿದರು.
ನಾನು ಹಣ, ಅಧಿಕಾರದ ಆಸೆಗಾಗಿ ಭಾರತೀಯ ಜನತಾ ಪಕ್ಷಕ್ಕೆ ಬಂದವನಲ್ಲ. 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಲಿಲ್ಲ. ಬದಲಾಗಿ ನಾವು ಕೇವಲ ಸಿದ್ದರಾಮಯ್ಯಗೆ ಮಾತ್ರ ಬೈದೆವು. ಹಾಗೇ ಚುನಾವಣೆ ವೇಳೆ ಅಕ್ಕಿ ವಿತರಣೆ ಕಡಿಮೆ ಮಾಡಿದ್ದು ಪ್ರಮುಖ ಕಾರಣ. ಕಾಂಗ್ರೆಸ್ನ 10 ಕೆಜಿ ಅಕ್ಕಿ ಗ್ಯಾರಂಟಿಯೂ ನಮ್ಮ ಸೋಲಿಗೆ ಕಾರಣವಾಯ್ತು ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ