Karnataka News Highlights: ನಾಳೆ ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ವಿವೇಕ ಬಿರಾದಾರ
| Updated By: Rakesh Nayak Manchi

Updated on:Jun 26, 2023 | 10:44 PM

Bengaluru News LIVE Updates: ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ...

Karnataka Latest News Live Updates: ವಿಧಾನಸಭೆ ಸೋಲಿನ ಬಳಿಕ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದ್ದು, ಆತ್ಮವಲೋಕನಾ ಸಭೆಗಳನ್ನು ಮಾಡುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಾಗುತ್ತಿದ್ದಾರೆ. ಇನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಅವಕಾಶ ಕೊಟ್ಟರೇ ನಾನು ರಾಜ್ಯಾಧ್ಯಕ್ಷ ಆಗುವೆ ಎಂದು ಹಿರಿಯ ನಾಯಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್​ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆ ಅನುಷ್ಠಾನದ್ದೇ ಚಿಂತೆಯಾಗಿದೆ. ಈ ಸಂಬಂಧ ಅನ್ನಭಾಗ್ಯದ ಅಕ್ಕಿ ವಿಚಾರವಾಗಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ವಾಗ್ಯುದ್ದ ಶುರುವಾಗಿದೆ. ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದರೇ, ಬಿಜೆಪಿ ಕಾಂಗ್ರೆಸ್​ ಸರ್ಕಾರದ ನೈತಿಕತೆಯನ್ನು ಪ್ರಶ್ನಿಸುತ್ತಿದೆ. ಇನ್ನು ರಾಜ್ಯಕ್ಕೆ ಮುಂಗಾರಿನ ಆಗಮನ ತಡವಾಗಿದ್ದು, ನೀರಿಲ್ಲದೆ ಉತ್ತರ ಕರ್ನಾಟಕದ ಜನ ಪರಿತಪ್ಪಿಸುತ್ತಿದ್ದಾರೆ. ಹಾಗೇ ಅಪರಾಧ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿವೆ. ಇದರೊಂದಿಗೆ ಇಂದಿನ ಲೇಟೆಸ್ಟ್​ ಅಪಡೇಟ್ಸ್​​ ಇಲ್ಲಿದೆ..

LIVE NEWS & UPDATES

The liveblog has ended.
  • 26 Jun 2023 10:29 PM (IST)

    Karnataka News Live Updates: ನಾಳೆ ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಪ್ರಧಾನಿ ಮೋದಿ ಚಾಲನೆ

    ನಾಳೆ ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಭೋಪಾಲ್‌ನ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ,  ಬೆಳಗ್ಗೆ 10.30ಕ್ಕೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿ ಸಂಜೆ 6.40ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಪ್ರಧಾನಿ ಮೋದಿ ಅವರು ನಾಳೆ ಒಟ್ಟು 5 ವಂದೇ ಭಾರತ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.

  • 26 Jun 2023 09:41 PM (IST)

    Karnataka News Live Updates: ಭೂಪರಿವರ್ತನೆ ಮಾಡಿಸಿಕೊಂಡು ಆಹಾರ ಉದ್ಯಮ ಮಾಡಬಹುದು: ಎಂಬಿ ಪಾಟೀಲ್

    ಧಾರವಾಡ: 2 ಎಕರೆ ಜಮೀನು ಇದ್ದರೆ ಪರಿವರ್ತನೆ ಮಾಡಲು ಅವಕಾಶ ನೀಡುತ್ತೇವೆ. ಭೂಪರಿವರ್ತನೆ ಮಾಡಿಸಿಕೊಂಡು ಆಹಾರ ಉದ್ಯಮ ಮಾಡಬಹುದು ಎಂದು ಧಾರವಾಡದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ. ರಾಜ್ಯದಲ್ಲಿ ಆಹಾರ ಉದ್ಯಮ ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ. ಭೂಪರಿವರ್ತನೆ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಮಾವಿನ ಮಾರುಕಟ್ಟೆ ದರ ಕುಸಿದಾಗ ಫುಡ್ ಪ್ರೊಸೆಸ್ ಮಾಡಬಹುದು. ಕೈಗಾರಿಕಾ ಪ್ರದೇಶದಲ್ಲಿ ತಪ್ಪು ಏನಿದೆ ನೋಡಿಕೊಂಡು ಸುಧಾರಣೆ ತರುತ್ತೇವೆ ಎಂದರು.

  • 26 Jun 2023 07:57 PM (IST)

    Karnataka News Live Updates: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸತೀಶ್ ಜಾರಕಿಹೊಳಿ

    ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಕರ್ನಾಟಕದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದರು. ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಹೊಸ ಯೋಜನೆಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕೇಂದ್ರ ಸಚಿವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ.

  • 26 Jun 2023 07:17 PM (IST)

    Karnataka News Live Updates: 10 ಕೆಜಿ ಅಕ್ಕಿ ಕೊಡಲು ಆಗದಿದ್ದರೆ ಕ್ಷಮೆ ಕೇಳಿ: ಕೋಟ ಶ್ರೀನಿವಾಸ್ ಪೂಜಾರಿ

    ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಡಲು ಆಗದಿದ್ದರೆ ಕ್ಷಮೆ ಕೇಳಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಆಹಾರ ಭದ್ರತಾ ಕಾಯ್ದೆ ತಂದಿದ್ದು ಯುಪಿಎ ಸರ್ಕಾರ ಅಂತಿದ್ದಾರೆ. ಇಂತಹ ಮಾತುಗಳನ್ನು ಡಿಸಿಎಂ ಬಾಯಿಂದ ನಿರೀಕ್ಷೆ ಮಾಡಿರಲಿಲ್ಲ. ಯುಪಿಎ ಸರ್ಕಾರ ಈ ಕಾಯ್ದೆ ಮಾಡಿದ್ದರೂ ಜಾರಿ ಮಾಡಿರಲಿಲ್ಲ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ವಿತರಣೆ ಮಾಡುತ್ತಿದೆ. ಕಾಂಗ್ರೆಸ್ಸಿಗರು ತಮ್ಮ ಹೇಳಿಕೆಯನ್ನು ಮರುಪರಿಶೀಲನೆ ಮಾಡಿಕೊಳ್ಳಲಿ ಎಂದರು. ಕೇಂದ್ರ ಸರ್ಕಾರ 549 ಲಕ್ಷ ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುತ್ತಿದೆ. ಆದರೆ ನೀವು ನಮ್ಮ ಅಕ್ಕಿ ಎಂದು ಹೇಳಿ ಅಪಹಾಸ್ಯಕ್ಕೆ ಒಳಗಾಗಬೇಡಿ ಎಂದರು.

  • 26 Jun 2023 05:53 PM (IST)

    Karnataka News Live Updates: ಅಯ್ಯೋ… ಈಶ್ವರಪ್ಪ, ಯಡಿಯೂರಪ್ಪನವರು ವಿಶ್ರಾಂತಿ ತೆಗೆದುಕೊಳ್ಳಲಿ: ಡಿಕೆ ಶಿವಕುಮಾರ್

    ರಾಮನಗರ: ಈ ಸರ್ಕಾರ ಬಹಳ ದಿನ ಇರಲ್ಲ ಚುನಾವಣೆಗೆ ಸಿದ್ಧರಾಗಿ ಎಂದು ಹೆಳಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದ ಡಿಕೆ ಶಿವಕುಮಾರ್, ಅಯ್ಯೋ… ಈಶ್ವರಪ್ಪ, ಯಡಿಯೂರಪ್ಪನವರು ವಿಶ್ರಾಂತಿ ತೆಗೆದುಕೊಳ್ಳಲಿ ಎಂದರು. ಬೆಲೆ ಏರಿಕೆ ಬಗ್ಗೆ ಟ್ವೀಟ್ ಮಾಡಿದ ಕುಮಾರಸ್ವಾಮಿಗೆ ಟಾಂಗ್ ನೀಡಿದ ಅವರು, ಬೆಲೆ ಏರಿಕೆ ಬಗ್ಗೆ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ ಎಂದರು.

  • 26 Jun 2023 05:50 PM (IST)

    Karnataka News Live Updates: ಇಂತಹ ಹೇಳಿಕೆಯನ್ನು ಸಹಿಸಲ್ಲ: ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಭೈರತಿ ಬಸವರಾಜ್​ ಕೆಂಡಾಮಂಡಲ

    ಬಾಗಲಕೋಟೆ: ಕಾಂಗ್ರೆಸ್​ನವರನ್ನು ಸೇರಿಸಿಕೊಂಡು ಬಿಜೆಪಿ ಸ್ಥಿತಿ ಹೀಗಾಯಿತು ಎಂದು ಕೆಎಸ್ ಈಶ್ವರಪ್ಪ ಅವರು ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿದ ಮಾಜಿ ಸಚಿವ ಭೈರತಿ ಬಸವರಾಜ್, ಯಾವುದೇ ಕಾರಣಕ್ಕೂ ಈ ರೀತಿ ಹೇಳಿಕೆಯನ್ನು ಸಹಿಸೋದಿಲ್ಲ. ಈಶ್ವರಪ್ಪ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದರು.

  • 26 Jun 2023 05:07 PM (IST)

    Karnataka News Live Updates: ನಾಳೆ ವಂದೇ ಭಾರತ್​ ರೈಲಿಗೆ ಚಾಲನೆ ನೀಡುತ್ತೇವೆ: ಪ್ರಲ್ಹಾದ್ ಜೋಶಿ

    ನಾಳೆ ವಂದೇ ಭಾರತ್​ ರೈಲಿಗೆ ಚಾಲನೆ ನೀಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಆಮದು ಮಾಡಿಕೊಳ್ಳುವ ಕಾಲ ಇತ್ತು. ಇವತ್ತು ನಮ್ಮ ದೇಶ ಹೆಚ್ಚು ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿ ಅಕ್ಕಿ ಎಂದು ಮಾತನಾಡುತ್ತಾರೆ. ನಾವು ಕಾಂಗ್ರೆಸ್​​ನವರಿಗೆ ಉತ್ತರ ಕೊಡಬೇಕಾಗಿದೆ. ಕಳೆದ 3 ವರ್ಷಗಳಿಂದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಅಕ್ಕಿ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಿ ಎಂದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಕ್ಕಿ ಖರೀದಿಸಿ ಕೊಡುತ್ತಿದ್ದಾರೆ. ಅಕ್ಕಿ ವಿತರಣೆ ಮುಂದೆ ಹಾಕಿದರೆ ಹಣ ಉಳಿಸಬಹುದೆಂಬ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. 2 ತಿಂಗಳ ಮುಂದೆ ಹಾಕಿದರೆ 2 ಸಾವಿರ ಕೋಟಿ ಹಣ ಉಳಿಸಬಹುದು. ಹೀಗಾಗಿ ರಾಜ್ಯ ಕಾಂಗ್ರೆಸ್​ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದರು.

  • 26 Jun 2023 04:28 PM (IST)

    Karnataka News Live Updates: ಕರ್ನಾಟಕ ಬಜೆಟ್: ಸಿದ್ದರಾಮಯ್ಯರಿಂದ ಬಜೆಟ್ ಪೂರ್ವಭಾವಿ ಸಭೆ

    ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಶಕ್ತಿಭವನದಲ್ಲಿ ಈ ಸಭೆ ನಡೆಯುತ್ತಿದೆ.

  • 26 Jun 2023 03:55 PM (IST)

    Karnataka News Live Updates: ಈಶ್ವರಪ್ಪ ಹೇಳಿಕೆಗೆ ಬಿಜೆಪಿ ಸೇರಿದ 17 ಮಂದಿ ಉತ್ತರಿಸಲಿ: ಎಂಬಿ ಪಾಟೀಲ್

    ಬಿಜೆಪಿ ಸೋಲಿಗೆ ಆಪರೇಷನ್ ಕಮಲವೇ ಕಾರಣ ಎಂಬ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂಬಿ ಪಾಟೀಲ್, ಮುನಿರತ್ನ, ಸುಧಾಕರ, ಎಮ್‌‌ಟಿಬಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಸೇರಿದಂತೆ ಬಿಜೆಪಿ ಸೇರಿದ 17 ಜ‌ನರು ಉತ್ತರಿಸಲಿ ಎಂದರು. ಅಲ್ಲದೆ, ಅವರನ್ನ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದರು.

  • 26 Jun 2023 03:50 PM (IST)

    Karnataka News Live Updates: ಈಶ್ವರಪ್ಪ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯೆ

    ವಲಸಿಗರ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ನಾನು ಇದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಹೋಗಲ್ಲ. ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟಲು ಇಷ್ಟ ಪಡುವುದಿಲ್ಲ. ಯಾರು ಸರಿ ಅಂತಲೂ ನಾವು ಹೇಳುವುದಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಏನೇ ಇದ್ದರೂ ಮಾತಾಡುತ್ತೇನೆ. ನಮ್ಮಿಂದ ಏನೂ ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲವು ತಪ್ಪಾಗಿದೆ. ಆ ತಪ್ಪು ಆಗದ ರೀತಿ ಮುಂದೆ ಹೋಗೋಣ ಎಂದರು.

  • 26 Jun 2023 03:27 PM (IST)

    Karnataka News Live Updates: ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ: ರವಿಕುಮಾರ್

    ಆಪರೇಷನ್ ಕಮಲವೇ ಬಿಜೆಪಿಗೆ ಮುಳುವಾಯ್ತು ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರವಿಕುಮಮಾರ್, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್​​ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು, ಹೊರಗಿನವರು, ಒಳಗಿನವರು ಎಂಬ ಭೇದ ಇಲ್ಲ ಎಂದರು. ಬಿಜೆಪಿ ಸರ್ಕಾರ ಅವಧಿಯ ಯಾವುದೇ ವಿಚಾರ ತನಿಖೆ ಮಾಡಲಿ. ಯಾವುದಕ್ಕೂ ನಾವು ಸೊಪ್ಪು ಹಾಕುವುದಿಲ್ಲ, ಎದುರಿಸುತ್ತೇವೆ. ಸರ್ಕಾರದ ತನಿಖೆಗೆ ನಾವು ಹೆದರಲ್ಲ ಎಂದರು.

  • 26 Jun 2023 02:55 PM (IST)

    Karnataka News Live Updates: ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ವಿಕಾಸ್ ಕುಮಾರ್ ವಿಕಾಸ್​ ವರ್ಗಾವಣೆ

    MSIL ಮ್ಯಾನೇಜಿಂಗ್​​ ಡೈರೆಕ್ಟರ್ ಆಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ವಿಕಾಸ್ ಕುಮಾರ್ ವಿಕಾಸ್​ ವರ್ಗಾವಣೆ ಮಾಡಲಾಗಿದೆ.

  • 26 Jun 2023 02:54 PM (IST)

    Karnataka News Live Updates: ಮನೆಗೆ ತೆರಳಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು: ಡಿಕೆ ಶಿವಕುಮಾರ್

    ಬೆಸ್ಕಾಂನವರು ಮನೆಗೆ ತೆರಳಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು. ರಾಮನಗರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಅಧಿಕಾರಿಗಳು ಪ್ರಚಾರ ಮಾಡಿ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ. ಬಿಜೆಪಿಯವರು ತಿಂದು ನಮ್ಮ ಮೂತಿಗೆ ಒರಿಸುವ ಯತ್ನ ಮಾಡಿದ್ದಾರೆ ಎಂದರು.

  • 26 Jun 2023 01:56 PM (IST)

    Karnataka News Live: ಡೀಸೆಲ್ ಬಾಕಿ ಹಣ ನೀಡದ ಹಿನ್ನೆಲೆ ಅರೆಬೆತ್ತಲೆಗೊಳಿಸಿ ಶಿಕ್ಷೆ

    ವಿಜಯಪುರ: ಡೀಸೆಲ್ ಹಾಕಿಸಿದ್ದ ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್​ನಲ್ಲಿ ಕೂಡಿಸಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣ ವಸೂಲಿಗೆ ಮೌನೇಶ್ ಪತ್ತಾರ್ ಎನ್ನುವಾತನನ್ನು ಅರೆಬೆತ್ತಲೆಗೊಳಿಸಿ ಮುದ್ದೇಬಿಹಾಳ ಪಟ್ಟಣದಲ್ಲಿರುವ ಬೋಸಲೆ ಬಂಕ್​ನಲ್ಲಿ ಕೂಡಿಹಾಕಿದ್ದಾರೆ.

  • 26 Jun 2023 01:27 PM (IST)

    Karnataka News Live: ನೂತನ ಶಾಸಕರಿಗೆ ಸ್ಪೀಕರ್​ ಬಸವರಾಜ ಹೊರಟ್ಟಿ ಸಲಹೆ

    ಬೆಂಗಳೂರು: ಸದನ ಹೇಗೆ ನಡೆಯುತ್ತೆ ಅಂತಾ ಹೊಸ ಶಾಸಕರಿಗೆ ಗೊತ್ತಿರಲ್ಲ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಅಭಿನಂದನೆ.  ಶಾಸಕರು ಸದನದಲ್ಲಿ ಸಂಪೂರ್ಣ ಸಮಯದಲ್ಲೇ ಕಳೆಯಬೇಕು. ಯಾರು ಯಾವ ವಿಷಯ ಮಾತಾಡ್ತಾರೆ ಅಂತಾ ಗಮನಿಸಬೇಕು. ಉತ್ತಮ ರಾಜಕೀಯ ವ್ಯವಸ್ಥೆ ಬರಬೇಕೆಂದು ಜನ ಮಾತಾಡಬೇಕು ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

  • 26 Jun 2023 01:26 PM (IST)

    Karnataka News Live: ನೀವು ಮೊದಲ ಬಾರಿ ಶಾಸಕರಲ್ಲ, ಪರ್ಮನೆಂಟ್ ಶಾಸಕರಾಗಿರಬೇಕು; ಯುಟಿ ಖಾದರ್​​​

    ಬೆಂಗಳೂರು: ನೀವು ಮೊದಲ ಬಾರಿ ಶಾಸಕರಲ್ಲ, ಪರ್ಮನೆಂಟ್ ಶಾಸಕರಾಗಿರಬೇಕು.  ವಿಧಾನಸಭೆ ಒಳಗೆ ಆತ್ಮವಿಶ್ವಾಸದಿಂದ ಇರಲು ಈ ಶಿಬಿರ ಅನುಕೂಲ. ಈ ಶಿಬಿರದಲ್ಲಿ ಆರೋಗ್ಯದ ಬಗ್ಗೆಯೂ ಶಾಸಕರಿಗೆ ತರಬೇತಿ ನೀಡಲಾಗುತ್ತೆ. ರಾಜಕೀಯ ಒಂದು ಸರ್ಕಸ್ ಕಂಪನಿ ಇದ್ದ ಹಾಗೆ. ಈ ಸರ್ಕಸ್​ ಕಂಪನಿಯಲ್ಲಿ ಹುಲಿ, ಸಿಂಹ, ಕೋತಿ, ಆನೆ ಎಲ್ಲವೂ ಇರುತ್ತೆ. ರಾಜಕೀಯದಲ್ಲೂ ಹಾಗೆ ಎಲ್ಲರೂ ಸಿಂಹ ಆಗಲು ಸಾಧ್ಯವಿಲ್ಲ. ಸರ್ಕಸ್​​ನಲ್ಲಿ ರಿಂಗ್ ಮಾಸ್ಟರ್ ಹಿಂದೆ ಎಲ್ಲಾ ಪ್ರಾಣಿಗಳು ಹೋಗುತ್ತವೆ. ಹಾಗೆ ನೀವು ರಾಜಕೀಯದಲ್ಲಿ ರಿಂಗ್ ಮಾಸ್ಟರ್ ಆಗಬೇಕು. ಶಾಸಕರು ಕ್ಷೇತ್ರದ ಜನರಲ್ಲಿ ಸಮಾನತೆ, ಸೌಹಾರ್ದತೆ ಮೂಡಿಸಬೇಕು ಎಂದು ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದರು.

  • 26 Jun 2023 12:50 PM (IST)

    Karnataka News Live: ಜೆಸ್ಕಾಂ ಇಂಜಿನಿಯರ್​​ಗೆ ​ತರಾಟೆಗೆ ತೆಗೆದುಕೊಂಡ ಸಚಿವ ಕೆ.ಜೆ.ಜಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಯಾವುದೇ ಅನಧಿಕೃತ ಲೋಡ್ ಶೆಡ್ಡಿಂಗ್ ಇಲ್ಲ. ನನಗೆ ಗೊತ್ತಿರುವ ಹಾಗೆ ಯಾವುದೇ ಲೋಡ್​ ಶೆಡ್ಡಿಂಗ್ ಇಲ್ಲ. ಪರೀಕ್ಷೆ ಹಾಗೂ ಚುನಾವಣೆ ವೇಳೆ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈಗ ಮೈಂಟೇನೆನ್ಸ್​ಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಕರೆಂಟ್ ಶಾರ್ಟೇಜ್ ಆಗಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಈ ವೇಳೆ ಜೆಸ್ಕಾಂ ಇಂಜಿನಿಯರ್​ ಅವರಿಗೆ ಸಚಿವ ಕೆ.ಜೆ.ಜಾರ್ಜ್​ ತರಾಟೆಗೆ ತೆಗೆದುಕೊಂಡಿದ್ದಾರೆ.  ನಾನೇನು ಹೊಸದಾಗಿ ಮಂತ್ರಿಯಾಗಿಲ್ಲ. ನಿಮ್ಮ ಕೈಲಾಗದೆ ಇದ್ದರೇ ಹೆಡ್ ಆಫೀಸ್​​ಗೆ ಹೇಳಿ ಅಂತ ಕೆ.ಜೆ.ಜಾರ್ಜ್ ಗರಂ ಆಗಿದ್ದಾರೆ. ​​​

  • 26 Jun 2023 11:52 AM (IST)

    Karnataka News Live: ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು

    ಹುಬ್ಬಳ್ಳಿ: ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ನಮ್ಮ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡುವ ಬಗ್ಗೆ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸ್ಪಷ್ಟಪಡಿಸಬೇಕು. ಪದೇ ಪದೇ 10 ಕೆಜಿ ಅಕ್ಕಿಗೆ ಅಡ್ಡಗಾಲು ಹಾಕುತ್ತಿದ್ದೇವೆ ಅಂತಾರೆ. ರಾಜ್ಯ ಸರ್ಕಾರ ಮೇ 2ರಂದು ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ 5 ಕೆಜಿ ಕೊಡುತ್ತಿದೆ, ನಾವು 5 ಕೆಜಿ ಕೊಡುತ್ತೇವೆ ಅಂತ ಹೇಳಲಿ. ನಿಮಗೆ ಅಕ್ಕಿ ಬೇಕಾದರೇ ಕೇಂದ್ರ ಸರ್ಕಾರದ ಬಳಿ ಕೇಳಬೇಕು. ನೈಸರ್ಗಿಕ ವಿಕೋಪ ಬಂದಾಗ ನಮಗೆ ಅಕ್ಕಿ ಸ್ಟಾಕ್ ಅವಶ್ಯಕವಿದೆ. ಕಾಂಗ್ರೆಸ್ ಮೊದಲು ಸುಳ್ಳು ಹೇಳೋದು ಬಂದ್ ಮಾಡಬೇಕು ಹುಬ್ಬಳ್ಳಿ ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

  • 26 Jun 2023 11:37 AM (IST)

    Karnataka News Live: ಸರ್ಕಾರಿ ಬಸ್​ನಲ್ಲಿ ತಳ್ಳಾಟ ನೂಕಾಟ: ವಿದ್ಯಾರ್ಥಿನಿ ಅಸ್ವಸ್ಥ

    ಕಲಬುರಗಿ: ಸರ್ಕಾರಿ ಬಸ್​ನಲ್ಲಿ ತಳ್ಳಾಟ ನೂಕಾಟದಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿರುವ ಘಟನೆ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಬಳಿ ನಡೆದಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಬಸ್ ಭರ್ತಿಯಾದ ಹಿನ್ನೆಲೆ ತಳ್ಳಾಟ ನೂಕಾಟವಾಗಿದೆ.

  • 26 Jun 2023 11:34 AM (IST)

    Karnataka News Live: ರಾಜ್ಯದ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ

    ಹುಬ್ಬಳ್ಳಿ: ರಾಜ್ಯದ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣೆಗೂ ಮುನ್ನ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು. ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಗ್ಯಾರಂಟಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲನೇ ಕ್ಯಾಬಿನೆಟ್​​ನಲ್ಲಿ ಯುವಕರಿಗೆ ಮೋಸ ಮಾಡಿದ್ದಾರೆ. ರಾಜ್ಯದ ಒಬ್ಬ ಯವಕನಿಗೂ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ಮನೆ ಯಜಮಾನಿ ಖಾತೆಗೆ ಇನ್ನೂ ಹಣ ಹಾಕಿಲ್ಲ. ಅಕ್ಕಿ ವಿತರಣೆ ಮಾಡಲು ಕೇಂದ್ರ ಪೂರೈಕೆ ಮಾಡುತ್ತಿಲ್ಲ ಅಂತಾರೆ. ಗ್ಯಾರಂಟಿ ಹೇಳಿ ಬಡಜನರಿಗೆ ಟೋಪಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

  • 26 Jun 2023 11:10 AM (IST)

    Karnataka News Live: 5 ಕೆಜಿ ಅಕ್ಕಿ ನರೇಂದ್ರ ಮೋದಿಯದ್ದಲ್ಲ, ಯುಪಿಎ ಸರ್ಕಾರದ್ದು

    ಹುಬ್ಬಳ್ಳಿ: 5 ಕೆಜಿ ಅಕ್ಕಿ ಕೊಡಲು ಆರಂಭ ಮಾಡಿದ್ದು ಯುಪಿಎ ಸರ್ಕಾರ. ಇದು ನರೇಂದ್ರ ಮೋದಿ ಅಕ್ಕಿ ಅಲ್ಲ, ಯುಪಿಎ ಅಕ್ಕಿ.  ಯುಪಿಎ ಸರ್ಕಾರವಿದ್ದಾಗ ಆಹಾರ ಭದ್ರತೆ ಕಾಯ್ದೆ ತಂದಿದ್ದೇವೆ. ಈ‌ ಕಾಯ್ದೆ ಮೂಲಕ ಎಲ್ಲರಿಗೂ ತಲಾ 5 ಕೆಜಿ ಅಕ್ಕಿ ನೀಡಿದ್ದೇವೆ. ರಾಜ್ಯದ ಜನರಿಗೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೇವೆ. ಕೇಂದ್ರದ 5 ಕೆಜಿ ಸೇರಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೇವು. ಮಾತುಕೊಟ್ಟಂತೆ ರಾಜ್ಯದ ಜನರಿಗೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

  • 26 Jun 2023 10:57 AM (IST)

    Karnataka News Live: ವಿದ್ಯಾರ್ಥಿಗಳು ಡ್ರಗ್ಸ್​ನಂತಹ ಮಾದಕ ವಸ್ತುಗಳಿಂದ ದೂರವಿರಿ

    ಬೆಂಗಳೂರು: ಇತ್ತೀಚೆಗೆ ಡ್ರಗ್ಸ್​ನಿಂದ ಕೆಲ ನಟ, ನಟಿಯರು ಬಲಿಯಾಗಿದ್ದಾರೆ. ವಿದ್ಯಾರ್ಥಿಗಳು ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವವರು. ಹೀಗಾಗಿ ಡ್ರಗ್ಸ್​ನಂತಹ ಮಾದಕ ವಸ್ತುಗಳಿಂದ ದೂರವಿರಿ. ಕಾಲ್ನಡಿಗೆ ಜಾಗೃತ ಜಾಥಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ  ಡಿಕೆ ಶಿವಕುಮಾರ್​ ಹೇಳಿದ್ದಾರೆ.

  • 26 Jun 2023 10:39 AM (IST)

    Karnataka News Live: ಮಾದಕ ಮುಕ್ತ ರಾಜ್ಯ ಮಾಡುವುದಕ್ಕೆ ನಾವು ಪಣ ತೊಟ್ಟಿದ್ದೇವೆ

    ಬೆಂಗಳೂರು: ಮಾದಕ ಮುಕ್ತ ರಾಜ್ಯ ಮಾಡುವುದಕ್ಕೆ ನಾವು ಪಣ ತೊಟ್ಟಿದ್ದೇವೆ. ಪ್ರತಿ ದಿನ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಬಹಳಷ್ಟು ದೊಡ್ಡ ದೊಡ್ಡ ವ್ಯಕ್ತಿಗಳು ಮಾದಕ ವ್ಯಸನಿಗಳಾಗಿದ್ದಾರೆ. ಇಲಾಖೆ ಮಾದಕ ವಸ್ತು ಮುಕ್ತ ರಾಜ್ಯ ಮಾಡಲು ಹೊಣೆ ಹೊತ್ತಿದೆ. ಡ್ರಗ್ಸ್ ಮಾರಾಟ ಮಾಡುವವರ ಮೇಲೆ ಕಠಿಣ ಕೇಸ್ ಹಾಕುತ್ತೇವೆ. ಡ್ರಗ್ಸ್​​ ಮಾರಾಟಕ್ಕೆ ಕಡಿವಾಣ ಹಾಕಲು ಸಹಾಯವಾಣಿ ಓಪನ್ ಮಾಡುತ್ತೇವೆ. ಸಹಾಯವಾಣಿಗೆ ಕರೆ ಮಾಡುವವರ ಹೆಸರನ್ನು ಬಹಿರಂಗಪಡಿಸಲ್ಲ ಎಂದು ವಿಧಾನಸೌಧದ ಭವ್ಯ ಮೆಟ್ಟಿಲು ಬಳಿ  ಆಯೋಜಿಸಲಾಗಿದ್ದ ಮಾದಕವಸ್ತು ವಿರೋಧಿ ದಿನ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

  • 26 Jun 2023 09:44 AM (IST)

    Karnataka News Live: ನೂತನ ಶಾಸಕರಿಗೆ ಇಂದಿನಿಂದ ಮೂರು ದಿನ ತರಬೇತಿ ಶಿಬಿರ

    ಬೆಂಗಳೂರು: ಹೊಸದಾಗಿ ವಿಧಾನಸಭೆ ಪ್ರವೇಶಿಸುವ ಶಾಸಕರಿಗೆ ಅಗತ್ಯ ತರಬೇತಿ ನೀಡುವುದು ಎಂದಿನ ವಾಡಿಕೆ. ಅದೇ ರೀತಿ ರಾಜ್ಯದ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಬೆಂಗಳೂರಿನ ನೆಲಮಂಗಲದ ಸಮೀಪ ಇರುವ ಧರ್ಮಸ್ಥಳ ಕ್ಷೇಮವನದಲ್ಲಿ ಇಂದಿನಿಂದ ಜೂ. 26 ರಿಂದ 28ರ ವರೆಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ.

  • 26 Jun 2023 08:44 AM (IST)

    Karnataka News Live: ಕಾಂಗ್ರೆಸ್​ನಲ್ಲಿದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ: ಎಂಟಿಬಿ ನಾಗರಾಜ್​

    ಬೆಂಗಳೂರು: ಕಾಂಗ್ರೆಸ್​ನಲ್ಲಿದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ. ಡಾ.ಕೆ.ಸುಧಾಕರ್​ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದ್ದರು ವಿಧಾನಸಭಾ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ ಎಂದು  ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಎಂಟಿಬಿ ನಾಗರಾಜ್​ ಹೇಳಿದ್ದಾರೆ.

  • 26 Jun 2023 08:35 AM (IST)

    Karnataka News Live: ಬಸ್ ನಿಲ್ಲಿಸಿಲ್ಲವೆಂದು ಬಸ್​ಗೆ ಕಲ್ಲೆಸೆದ ಮಹಿಳೆ

    ಕೊಪ್ಪಳ: ಬಸ್ ನಿಲ್ಲಿಸಿಲ್ಲವೆಂದು ಬಸ್​ಗೆ ಮಹಿಳೆ ಕಲ್ಲೆಸೆದಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ನಾನ್​ ಸ್ಟಾಪ್​ ಬಸ್​ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವರು ಕಲ್ಲು ಎಸೆದಿದ್ದಾರೆ.

  • 26 Jun 2023 07:58 AM (IST)

    Karnataka News Live: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆ

    ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 30ರವರೆಗೆ ಭಾರಿ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ,ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

  • Published On - Jun 26,2023 7:57 AM

    Follow us