ಬೆಂಗಳೂರು: ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕೋವಿಡ್ ಕುರಿತು ಸರ್ಕಾರದ ಉತ್ತರ ಕೇಳದೆ ಪಲಾಯನ ಮಾಡಿರುವ ಕಾಂಗ್ರೆಸ್ನ ನಡೆ, ಜನರ ಆರೋಗ್ಯದ ಬಗ್ಗೆ ಪಕ್ಷಕ್ಕೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಬಟಾಬಯಲು ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಗುರುವಾರ ಕೊವಿಡ್ ಕುರಿತು ದೀರ್ಘ ಚರ್ಚೆ ನಡೆದಿತ್ತು. ಶುಕ್ರವಾರ ಸಚಿವ ಡಾ.ಕೆ.ಸುಧಾಕರ್ ಅವರು ಉತ್ತರ ನೀಡಲು ಮುಂದಾದಾಗ ಕಾಂಗ್ರೆಸ್ ಸದಸ್ಯರು ಉತ್ತರ ಕೇಳದೆ ಸಭಾತ್ಯಾಗ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್, ಕೊವಿಡ್ ನಿರ್ವಹಣೆ ಕುರಿತು ಸದನದಲ್ಲಿ 5 ಗಂಟೆ ರಾಜಕೀಯ ಭಾಷಣ ಮಾಡಿದ ವಿಪಕ್ಷಗಳಿಗೆ ಇಂದು ಸರ್ಕಾರದ ಉತ್ತರ ಕೇಳುವ ಆಸಕ್ತಿಯೂ ಇಲ್ಲ, ಧೈರ್ಯವೂ ಇಲ್ಲ ಎಂದು ಟೀಕಿಸಿದರು.
ಸತ್ಯವನ್ನು ಕೇಳದೆ ಅವರು ಪಲಾಯನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸದಸ್ಯರು, ತಾವು ಮಾಡಿರುವ ಎಲ್ಲ ಆರೋಪ ಸತ್ಯಕ್ಕೆ ದೂರವಾದುದು, ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕೊವಿಡ್ ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿರುವ ಕಾಂಗ್ರೆಸ್ನ ಕೀಳು ಸಂಸ್ಕೃತಿಯನ್ನು ರಾಜ್ಯದ ಜನರು ಗಮನಿಸಿದ್ದಾರೆ. ಸಾವಿನ ಮನೆಯಲ್ಲೂ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ನ ನೀಚ ರಾಜಕೀಯವನ್ನು ಜನರು ಕ್ಷಮಿಸುವುದಿಲ್ಲ ಎಂದು ಸಚಿವರು ಆಕ್ರೋಶ ಹೊರಹಾಕಿದರು.
ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಂಡ ಅವರು, ಪ್ರತಿಪಕ್ಷಗಳು ನಿಂದನೆ ಮಾಡುವುದು ಹೊಸ ವಿಚಾರವಲ್ಲ. ಆದರೆ ಕಾಂಗ್ರೆಸ್ನವರಂತೆ ರಾಜಕೀಯ ಭಾಷಣ ಮಾಡಬಾರದು. ಕೊವಿಡ್ ಈ ಶತಮಾನದ ಅತಿ ದೊಡ್ಡ ಸಾಂಕ್ರಾಮಿಕವಾಗಿದ್ದು, ಸ್ವತಂತ್ರ ಭಾರತ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ನಾವು ಎಷ್ಟು ಜನರನ್ನು ಕಳೆದುಕೊಂಡಿದ್ದೆವೇಯೋ ಪ್ರಾಯಶಃ ಅದಕ್ಕಿಂತ ಹೆಚ್ಚು ಜನರನ್ನು ಈ ಸಾಂಕ್ರಾಮಿಕದಲ್ಲಿ ಕಳೆದುಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಿಪಕ್ಷಗಳಿಂದ ಜನತೆ ನಿರೀಕ್ಷಿಸುವುದು ಆಪಾದನೆ ಅಲ್ಲ, ಸಂವೇದನೆ ಎಂಬುದನ್ನು ಅರಿಯಬೇಕು. ಸಂಘರ್ಷ ಅಲ್ಲ ಸಹಕಾರ, ಪ್ರತಿಷ್ಠೆ ಅಲ್ಲ ಪ್ರಾಮಾಣಿಕತೆ, ರಾಜಕಾರಣ ಅಲ್ಲ, ಅಂತಃಕರಣ ಎಂಬುದನ್ನು ತಿಳಿಯಬೇಕು ಎಂದು ಸಚಿವರು ಹೇಳಿದರು.
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಬೇರೆಬೇರೆ ಇರಬಹುದು. ಆದರೆ ಆಡಳಿತ ಹಾಗೂ ವಿರೋಧ ಪಕ್ಷಗಳ ಗುರಿ ಒಂದೇ ಆಗಿರಬೇಕು. ನಮ್ಮ ದೃಷ್ಟಿ ಸದಾ ಜನಹಿತದ ಕಡೆ ಇದ್ದು, ಸದಾ ಜನ ಕಲ್ಯಾಣದ ಗುರಿ ಇರಬೇಕು. ಆದರೆ ಇಂದು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರದ ದೃಷ್ಟಿ ಜನಹಿತದ ಮೇಲಿದ್ದರೆ, ವಿಪಕ್ಷಗಳ ದೃಷ್ಟಿ ಅಧಿಕಾರದ ಕುರ್ಚಿಯ ಮೇಲಿದೆ. ಸರ್ಕಾರದ ಕಾರ್ಯಗಳು ಜನರ ಜೀವ ಉಳಿಸುವ, ಜನಕಲ್ಯಾಣದ ಕಡೆಗೆ ಇದ್ದರೆ, ವಿಪಕ್ಷಗಳ ಚಟುವಟಿಕೆಗಳು ಸಾವಿನ ಮನೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಡೆ ಇದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಕಿ-ಅಂಶ ಮುಚ್ಚಿಟ್ಟಿಲ್ಲ
ಕೊರೊನಾದಿಂದ ಉಂಟಾದ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದೇವೆ ಎಂದು ವಿಪಕ್ಷಗಳು ಆರೋಪ ಮಾಡುವುದು ಸತ್ಯಕ್ಕೆ ದೂರವಾದ ಮಾತು. ಕೋವಿಡ್ ಅಂಕಿಅಂಶಗಳನ್ನು ಮುಚ್ಚಿಡುವ ಯಾವುದೇ ಅವಶ್ಯಕತೆ ಆಗಲಿ ಅಥವಾ ಉದ್ದೇಶ ಆಗಲಿ ನಮ್ಮ ಸರ್ಕಾರಕ್ಕೆ ಇಲ್ಲ. ಐಸಿಎಂಆರ್ ಮಾರ್ಗಸೂಚಿ ಪ್ರಕಾರವೇ ಎಲ್ಲ ಅಂಕಿಅಂಶಗಳು ದಾಖಲಾಗುತ್ತವೆ. ನಾವೆಲ್ಲರೂ ಒಂದು ವ್ಯವಸ್ಥೆಯಲ್ಲಿ, ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಭಾರತ ಒಂದು ಕ್ರಿಯಾಶೀಲ, ಮುಕ್ತ ಪ್ರಜಾಪ್ರಭುತ್ವವಾಗಿದ್ದು, ಮೂರು ಹಂತಗಳ ಪ್ರಜಾಪ್ರಭುತ್ವ ಇದೆ. ಗ್ರಾಮ ಪಂಚಾಯಿತಿಗಳವರೆಗೂ ಅಧಿಕಾರ ವಿಕೇಂದ್ರೀಕರಣ ಆಗಿದೆ. ಮುಕ್ತವಾದ ಮಾಧ್ಯಮಗಳು ಇವೆ. ಎಲ್ಲಕ್ಕಿಂತ ಮಿಗಿಲಾಗಿ ಇವತ್ತಿನ ದಿನ ಜನರು ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾದ ಸೋಷಿಯಲ್ ಮೀಡಿಯಾಗಳಿವೆ. ಇಂತಹ ಮುಕ್ತ ವ್ಯವಸ್ಥೆಯಲ್ಲಿ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಸಾಧ್ಯವೇ? ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.
ಸದನಕ್ಕೆ ತಪ್ಪು ಮಾಹಿತಿ
ಐಸಿಎಂಆರ್ ರೂಪಿಸಿದ ಮಾರ್ಗಸೂಚಿ ಪ್ರಕಾರವೇ ಮರಣಗಳನ್ನು ದಾಖಲಾಗಿಸುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ನಲ್ಲಿ ಆಗಿರುವ ಕ್ಲೇಮ್ಗಳೆಲ್ಲ ಮರಣಗಳು ಎಂದು ತಪ್ಪಾಗಿ ಸದನಕ್ಕೆ ಮಾಹಿತಿ ನೀಡಿದ್ದಾರೆ. ಎಸ್‍ಎಎಸ್‍ಟಿ ಸಂಸ್ಥೆ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಕ್ಲೇಮ್ ಬಂದಿರುವುದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸೋಂಕಿತರದ್ದಾಗಿದೆ. ಮೊದಲನೇ ಅಲೆಯಲ್ಲಿ ವೈರಾಣುವಿನ ಗುಣಲಕ್ಷಣಗಳಿಗೂ ಎರಡನೇ ಅಲೆಯಲ್ಲಿ ವೈರಾಣುವಿನ ಗುಣಲಕ್ಷಣಗಳಿಗೂ ಬಹಳ ವ್ಯತ್ಯಾಸವಿದೆ. ಎರಡನೇ ಅಲೆಯಲ್ಲಿ ವೈರಾಣು ಬಹಳ ತೀವ್ರವಾಗಿ ಹರಡುವ ಮತ್ತು ಹೆಚ್ಚು ಗಂಭೀರ ಸೋಂಕು ಉಂಟುಮಾಡುವ ಲಕ್ಷಣ ಹೊಂದಿತ್ತು. ಇದು ಯಾವ ತಜ್ಞರ ಊಹೆಗೂ ಮತ್ತು ಅಂದಾಜಿಗೂ ಮೀರಿದ್ದ ಪರಿಸ್ಥಿತಿಯಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಮೊದಲ ಅಲೆಯಲ್ಲಿ ಗರಿಷ್ಠ ಒಂದು ದಿನಕ್ಕೆ ದಾಖಲಾದ ಪ್ರಕರಣಗಳನ್ನು ಗಮನಿಸಬೇಕು. ಆಗ 2020ರ ಅ.7ರಂದು ದಾಖಲಾದ ಪ್ರಕರಣ 10,947. ಎರಡನೇ ಅಲೆಯಲ್ಲಿ 2021ರ ಮೇ 5ರಂದು ದಾಖಲಾದ ಪ್ರಕರಣ 50,112. ಅಂದರೆ ಮೊದಲನೇ ಅಲೆಗಿಂತ ಎರಡನೇ ಅಲೆ 5 ಪಟ್ಟು ಹೆಚ್ಚು ವೇಗವಾಗಿತ್ತು. ರೂಪಾಂತರಗೊಂಡ ವೈರಾಣುವಿನಿಂದಲೂ ಸಮಸ್ಯೆ ಹೆಚ್ಚಾಗಿತ್ತು ಎಂಬ ವಾಸ್ತವವನ್ನು ಸಚಿವರು ವಿವರಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ
ಕೋವಿಡ್ 2ನೇ ಅಲೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಪ್ರತಿಪಕ್ಷದವರು ಟೀಕಿಸಿದ್ದರು. ಈ ಆರೋಪಕ್ಕೆ ಉತ್ತರಿಸಿದ ಸಚಿವ ಡಾ.ಕೆ.ಸುಧಾಕರ್, ಸರ್ಕಾರ ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಅಂಕಿ-ಅಂಶ ಸಹಿತ ವಿವರವಾದ ಮಾಹಿತಿಯನ್ನು ಸದನಕ್ಕೆ ಸಲ್ಲಿಸಿದರು. ಮೊದಲ ಅಲೆಗೆ ಮುನ್ನಾ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 413, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 312 ಸೇರಿ ಒಟ್ಟು 725 ಐಸಿಯು ಹಾಸಿಗೆ ಇತ್ತು. ಮೊದಲ ಅಲೆಯ ವೇಳೆಗೆ ಇದನ್ನು 858ಕ್ಕೆ ಹಾಗೂ ಎರಡನೇ ಅಲೆಯ ವೇಳೆಗೆ 1,961ಕ್ಕೆ ಏರಿಸಲಾಯಿತು. ಆಗಸ್ಟ್ ವೇಳೆಗೆ 3,877 ಹಾಸಿಗೆ ಲಭ್ಯವಿತ್ತು. ಮೊದಲ ಅಲೆಗೆ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 4,260, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 587 ಸೇರಿ ಒಟ್ಟು 4,847 ಆಕ್ಸಿಜನ್ ಹಾಸಿಗೆ ಇತ್ತು. ಮೊದಲ ಅಲೆಯ ವೇಳೆಗೆ ಇದನ್ನು 5,387ಕ್ಕೆ ಹಾಗೂ ಎರಡನೇ ಅಲೆಯ ವೇಳೆಗೆ 25,184ಕ್ಕೆ ಏರಿಸಲಾಯಿತು. ಆಗಸ್ಟ್ ವೇಳೆಗೆ 28,447 ಆಕ್ಸಿಜನ್ ಹಾಸಿಗೆ ಲಭ್ಯವಿತ್ತು. ಮೊದಲ ಅಲೆಗೆ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 9778, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 31,600 ಸೇರಿ ಒಟ್ಟು 41,378 ಹಾಸಿಗೆ ಇತ್ತು. ಎರಡನೇ ಅಲೆಯ ವೇಳೆಗೆ 45,966ಕ್ಕೆ ಏರಿಸಲಾಯಿತು. ಆಗಸ್ಟ್ ವೇಳೆಗೆ 50,629 ಹಾಸಿಗೆ ಲಭ್ಯವಿತ್ತು ಎಂದರು.
ಆಕ್ಸಿಜನ್
ಮೊದಲ ಅಲೆಗೆ ಮುನ್ನ ಆರೋಗ್ಯ ಇಲಾಖೆಯಡಿ 2,180 ಆಕ್ಸಿಜನ್ ಸಿಲಿಂಡರ್ ಇತ್ತು. ಮೊದಲ ಅಲೆಯಲ್ಲಿ 6,530 ಎರಡನೇ ಅಲೆಯ ವೇಳೆಗೆ 9,928 ಹಾಗೂ ಪ್ರಸ್ತುತ 13,588 ಸಿಲಿಂಡರ್ ದೊರಕಿಸಿಕೊಡಲಾಗಿದೆ. ಮೊದಲ ಅಲೆಯ ವೇಳೆಗೆ 585 ಸಾಂದ್ರಕ ಇದ್ದು, ಎರಡನೇ ಅಲೆಯ ವೇಳೆಗೆ 5,435, ಪ್ರಸ್ತುತ 6,511 ಲಭ್ಯವಾಗಿಸಲಾಗಿದೆ. ಮೊದಲ ಅಲೆಗೆ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 292 ಟನ್, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 28 ಟನ್ ಸೇರಿ ಒಟ್ಟು 320 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯವಿತ್ತು. ಮೊದಲ ಅಲೆಯ ವೇಳೆಗೆ ಇದನ್ನು 500 ಟನ್ ಹಾಗೂ ಎರಡನೇ ಅಲೆಯ ವೇಳೆಗೆ 799 ಟನ್ಗೆ ಏರಿಸಲಾಯಿತು. ಆಗಸ್ಟ್ ವೇಳೆಗೆ 1,207 ಟನ್ ಸಂಗ್ರಹಣಾ ಸಾಮರ್ಥ್ಯವಿತ್ತು.
ಲಸಿಕೆ
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ವೇಗವಾಗಿ ಜನರಿಗೆ ಲಸಿಕೆ ನೀಡಲಾಗಿದೆ. ಸೆ.24ಕ್ಕೆ, 5,39,49,021 ಲಸಿಕೆ ನೀಡಲಾಗಿದೆ. ರಾಜ್ಯ ಸರ್ಕಾರ ಒಟ್ಟು 4,89,11,050 ಲಸಿಕೆ ಪಡೆದಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ 4,63,07,690 ಡೋಸ್ ಪೂರೈಕೆಯಾಗಿದೆ. ಆರೋಗ್ಯ ಸಿಬ್ಬಂದಿಗೆ ಮೊದಲ ಡೋಸ್ನಲ್ಲಿ ಶೇ 84.9, ಎರಡನೇ ಡೋಸ್ನಲ್ಲಿ ಶೇ 71.5, ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ನಲ್ಲಿ ಶೇ 108, ಎರಡನೇ ಡೋಸ್ನಲ್ಲಿ ಶೇ 78.3, 18-44 ವಯಸ್ಸಿನವರಿಗೆ ಮೊದಲ ಡೋಸ್ನಲ್ಲಿ ಶೇ 63.9, ಎರಡನೇ ಡೋಸ್ನಲ್ಲಿ ಶೇ 16.3, 45 ವರ್ಷ ಮೇಲ್ಪಟ್ಟವರಲ್ಲಿ ಮೊದಲ ಡೋಸ್ನಲ್ಲಿ ಶೇ 91.6, ಎರಡನೇ ಡೋಸ್ನಲ್ಲಿ ಶೇ 52.8 ಪ್ರಗತಿಯಾಗಿದೆ. ಒಟ್ಟು ಮೊದಲ ಡೋಸ್ ಶೇ 76.9, ಎರಡನೇ ಡೋಸ್ನಲ್ಲಿ ಶೇ 31.5 ಪ್ರಗತಿಯಾಗಿದೆ.
2.75 ಲಕ್ಷ ರೋಗಿಗಳಿಗೆ ಉಚಿತ ಚಿಕಿತ್ಸೆ
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 2.75 ಲಕ್ಷ ಕೊರೊನಾ ಸೋಂಕಿತರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ದೇಶದ ಶೇ 90ರಷ್ಟು ಜನರಿಗೆ ಆರೋಗ್ಯ ವಿಮೆ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ್ ಯೋಜನೆ ಮೂಲಕ 10 ಕೋಟಿ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಾರ್ಷಿಕ ₹ 5 ಲಕ್ಷ ಆರೋಗ್ಯ ವಿಮೆ ಯೋಜನೆ ತಂದಿದ್ದರು. ಇದು ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆಯಾಗಿದ್ದು 50 ಕೋಟಿಗೂ ಹೆಚ್ಚು ಜನರಿಗೆ ಆರೋಗ್ಯ ಸೇವೆ ಖಾತ್ರಿ ಪಡಿಸಿದೆ. ಈ ಯೋಜನೆ 3 ಯಶಸ್ವಿ ವರ್ಷ ಪೂರೈಸಿದ್ದು, 2 ಕೋಟಿಗೂ ಹೆಚ್ಚು ಒಳರೋಗಿ ಚಿಕಿತ್ಸೆ ನೀಡಲಾಗಿದ್ದು, 25,000 ಕೋಟಿ ಮೌಲ್ಯದ ಚಿಕಿತ್ಸಾ ವೆಚ್ಚವನ್ನು ದೇಶಾದ್ಯಂತ ಉಚಿತವಾಗಿ ಭರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮೋದಿ ಅವರು ಪ್ರಧಾನಿ ಆದ ನಂತರ 2014ರಿಂದ 156 ಮೆಡಿಕಲ್ ಕಾಲೇಜು ಆರಂಭವಾಗಿದೆ. 70 ವರ್ಷಗಳಲ್ಲಿ 50,000 ಮೆಡಿಕಲ್ ಸೀಟು ಸೃಜಿಸಲಾಗಿದೆ. ಕಳೆದ 7 ವರ್ಷಗಳಲ್ಲಿ 30,000 ಸೀಟು ಹೆಚ್ಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಸಲ್ಲಿಕೆ ಕ್ರಮ ಅನುಷ್ಠಾನಗೊಂಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ವಿವಿಧ ಹುದ್ದೆಗಳಿಗೆ 2,053 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಇತ್ತೀಚೆಗೆ ಪೂರ್ಣಗೊಂಡ 1,750 ವೈದ್ಯರ ಐತಿಹಾಸಿಕ ನೇರ ನೇಮಕಾತಿ ಸೇರಿದಂತೆ ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಟ್ಟು 4,000 ವೈದ್ಯರನ್ನು ನೇಮಿಸಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ದ್ವಂದ್ವ
2020ರ ಮಾರ್ಚ್ ಪ್ರಧಾನಿ ನರೇಂದ್ರ ಮೋದಿ, ಲಾಕ್ಡೌನ್ ಘೋಷಿಸಿದಾಗ ಕಾಂಗ್ರೆಸ್ ಮುಖಂಡರು ಟೀಕೆ ಮಾಡಿದರು. ಇದೇ ಜನರು ಎರಡಲೇ ಅಲೆ ಬಂದಾಗ ಪೂರ್ಣ ಲಾಕ್ಡೌನ್ಗೆ ಒತ್ತಾಯಿಸಿದ್ದರು. ಒಂದು ಹಾಗೂ ಎರಡನೇ ಅಲೆಯ ನಡುವೆ ಯಾವ ರೀತಿಯ ಬದಲಾವಣೆ ಆಗಿದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಸುಧಾಕರ್, ಇಂಥ ಗಂಭೀರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗೆ ಅನುಮತಿ ನೀಡಿದ್ದನ್ನು ‘ಪ್ರಿಮೆಚ್ಯೂರ್’ ಎಂದು ಟೀಕಿಸಿದ್ದ ಕಾಂಗ್ರೆಸ್ ಮುಖಂಡರು, ಲಸಿಕೆ ಬಗ್ಗೆ ಜನರಿದ್ದ ಗೊಂದಲವನ್ನು ಇನ್ನಷ್ಟು ಹೆಚ್ಚು ಮಾಡಿದ್ದರು. ಕೇಂದ್ರ ಸರ್ಕಾರ ಲಸಿಕೆಯನ್ನು ಕೊಡುತ್ತಿದ್ದಾಗ, ವಿಳಂಬವಾಗಿದೆ ಎಂದು ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2024 ರ ವೇಳೆಗೆ ಲಸಿಕಾ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ವ್ಯಂಗ್ಯವಾಡಿದ್ದರು. ನಂತರ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು, ಲಸಿಕೆಯ ದರ ಹೆಚ್ಚಿಸಲಾಗಿದೆ ಎಂದು ಟೀಕಿಸಿದ್ದರು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆಯನ್ನು ಉಚಿತವಾಗಿ ನೀಡಿದೆ.
ಕೋವಿಡ್ ನಿರ್ವಹಣೆಯನ್ನು ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ಈ ಎಲ್ಲ ಟೀಕೆ, ರಾಜಕೀಯದಿಂದಾಗಿಯೇ ಪ್ರತಿ ಬಾರಿ ಕಾಂಗ್ರೆಸ್ ಅಡ್ಡಗಾಲು ಹಾಕಿದೆ. ಕೋವಿಡ್ನಂಥ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೆ, ಇಲ್ಲಿಯೂ ರಾಜಕೀಯ ಲಾಭ ಪಡೆಯುವ ಆಲೋಚನೆಯನ್ನು ವಿಪಕ್ಷ ನಾಯಕರು ಮಾಡುತ್ತಿದ್ದಾರೆ. ನಮ್ಮೆಲ್ಲರ ಶತ್ರು ಕೊರೊನಾ ವೈರಾಣುವೇ ಹೊರತು ಪ್ರಧಾನಿ ನರೇಂದ್ರ ಮೋದಿ ಅಥವಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲ್ಲ ಎಂಬ ಸತ್ಯವನ್ನು ಟೀಕಾಕಾರರು ತಿಳಿದರೆ ಕೋವಿಡ್ ಅನ್ನು ವೇಗವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ
ಚಾಮರಾಜನಗರದಲ್ಲಿ ನಡೆದ ದುರಂತ ಅತ್ಯಂತ ದುರದೃಷ್ಟಕರ. ನ್ಯಾಯಮೂರ್ತಿ ಎ.ಬಿ.ಪಾಟೀಲ್ ಸಮಿತಿ ವರದಿಯನ್ನು ಸರ್ಕಾರ ನಿರೀಕ್ಷಿಸುತ್ತಿದೆ. ವರದಿ ಸರ್ಕಾರ ಕೈಸೇರಿದ ಕೂಡಲೇ ಸೂಕ್ತ ಕ್ರಮ ಜರುಗಿಸಲಾಗುವುದು. ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದಂತೆ ಸರ್ಕಾರ ಈಗಾಗಲೇ ₹200 ಕೋಟಿ ಮೀಸಲಿಟ್ಟಿದ್ದು ಶೀಘ್ರದಲ್ಲೇ ಮೃತರ ಕುಟುಂಬಕ್ಕೆ ತಲಾ ₹ 1 ಪರಿಹಾರ ತಲುಪಿಸಲಾಗುವುದು ಎಂದರು.
ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಪಾಠ: ಸಿದ್ದರಾಮಯ್ಯ ಆಕ್ರೋಶ
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಅಂಗೀಕಾರ; ವಿಧೇಯಕ ಸಂವಿಧಾನ ವಿರೋಧಿ ಎಂದ ಮರಿತಿಬ್ಬೇಗೌಡ
(Health Minister Dr K Sudhakar Reacts to Allegations from Congress on Handling Covid in Karnataka)