ತುಮಕೂರು: ನಿನ್ನೆ (ಜೂನ್ 22) ನಡೆದ ಕೋರ್ ಕಮಿಟಿ ಸಭೆಯಲ್ಲಿ ಗುಬ್ಬಿ ಶ್ರೀನಿವಾಸ್ ಮತ್ತು ಕೋಲಾರ ಶ್ರೀನಿವಾಸ ಗೌಡ ಅವರನ್ನು ಉಚ್ಚಾಟನೆ ಮಾಡಿ ಜೆಡಿಎಸ್ (JDS) ಆದೇಶ ನೀಡಿದೆ. ಈ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಬ್ಬಿ ಜೆಡಿಎಸ್ ಶಾಸಕ ಎಸ್ಆರ್ ಶ್ರೀನಿವಾಸ್ (SR Srinivas), ಜೆಡಿಎಸ್ನಿಂದ ಉಚ್ಚಾಟನೆ ಮಾಡಿದ್ದರಲ್ಲಿ ಹೊಸದೇನಿಲ್ಲ. ಪಕ್ಷದಿಂದ ಉಚ್ಚಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ. ಈ ಬೆಳವಣಿಗೆ ಮುಜುಗರ, ಅವಮಾನ ಎಂದು ಅನಿಸಲ್ಲ. ನನ್ನ ವಿರುದ್ಧ ಅಭ್ಯರ್ಥಿ ಘೋಷಿಸಿದಾಗಲೇ ನಾನು ಉಚ್ಚಾಟಿತನಾಗಿದ್ದೆ. ಡಿಸೆಂಬರ್ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಟ್ಟು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಇಬ್ಬರು ಶಾಸಕರು ಉಚ್ಚಾಟನೆ:
ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ಕೋಲಾರ ಶಾಸಕ ಕೆ ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಇಬ್ಬರನ್ನೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ನಿನ್ನೆ ಉಚ್ಛಾಟನೆ ಮಾಡಿದೆ. ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಇಬ್ಬರೂ ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಶೀಘ್ರ ದೂರು ನೀಡಲಾಗುವುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ನಾಳೆ ಅಥವಾ ನಾಡಿದ್ದು ಸ್ಪೀಕರ್ಗೆ ದೂರು ನೀಡಲು ಜೆಡಿಎಸ್ ತೀರ್ಮಾನ ನೀಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Column: ಹಾದಿಯೇ ತೋರಿದ ಹಾದಿ; ‘ಋತುಮತಿಯಾಗಿದ್ದರೂ ಗಂಡುಬೀರಿಯರಂತಿದ್ದಾರೆ’ ಎಂದಿದ್ದರು ಹಳ್ಳಿಗರು
ಕಾಂಗ್ರೆಸ್ಗೆ ಸೇರುತ್ತೇನೆ- ಶ್ರೀನಾಥ್:
ಕಳೆದ ಕೆಲ ದಿನಗಳ ಹಿಂದೆ ಜೆ.ಡಿ.ಎಸ್ಗೆ ರಾಜೀನಾಮೆ ನೀಡಿದ್ದ ಮಾಜಿ ಎಂಎಲ್ಸಿ ಹೆಚ್.ಆರ್ ಶ್ರೀನಾಥ್, ನಾನು ಜುಲೈ ಮೂರರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದು ಜಿಲ್ಲೆಯ ಗಂಗಾವತಿಯಲ್ಲಿ ಹೇಳಿಕೆ ನೀಡಿದರು. ನಾನು ಕೂಡಾ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಂಬರೋ ಚುನಾಚಣೆಗೆ ನಾನು ಆಕಾಂಕ್ಷಿ. ಕಾಂಗ್ರೆಸ್ ಸೇರೋ ವಿಚಾರವಾಗಿ ಇದುವರೆಗೂ ನಾನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಜೊತೆ ಮಾತನಾಡಿಲ್ಲ. ನಮ್ಮ ಹಿರಿಯರು ಇಬ್ಬರನ್ನು ಸರಿ ಮಾಡುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿ ವಿರುದ್ದ ಬಂಡಾಯವೆದ್ದು ಶ್ರೀನಾಥ್ ಕಾಂಗ್ರೆಸ್ನಿಂದ ಜೆಡಿಎಸ್ ಸೇರಿದ್ದರು. ಇದೀಗ ಮತ್ತೆ ಕೈ ಪಾಳಯಕ್ಕೆ ಶ್ರೀನಾಥ್ ಸೇರಲಿದ್ದಾರೆ. ಆದರು ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಶ್ರೀನಾಥ್ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ನಾನು ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಶ್ರೀನಾಥ್ ಬಹಿರಂಗವಾಗಿ ಹೇಳಿದ್ದಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡಬಾರದು ಅಂತೇನಿಲ್ಲ. ಕೆಲವು ಸಲ ವ್ಯಕ್ತಿ ಮೇಲೆ ಚುನಾವಣೆ ಎಂದು ಶ್ರೀನಾಥ್ ಹೇಳಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Thu, 23 June 22