ಬೆಂಗಳೂರು, ಜುಲೈ 18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತು ಮಣಿಸಲು ಕಾರ್ಯತಂತ್ರ ರೂಪಿಸುವುದಕ್ಕಾಗಿ ಪ್ರತಿಪಕ್ಷಗಳ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದೇ ವೇಳೆ, ಯುಪಿಎ (United Progressive Alliance) ಮೈತ್ರಿಕೂಟದ ಹೆಸರು ಬದಲಾಯಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಯುಪಿಎ ಬದಲಿಗೆ ನಾಲ್ಕು ಹೆಸರುಗಳನ್ನು ಸಭೆಯಲ್ಲಿ ಸೂಚಿಸಲಾಗಿದೆ. ಆದರೆ, ಈ ಪೈಕಿ ಯಾವುದೇ ಹೆಸರನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ.
ಪಿಡಿಎ (ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಅಲೈನ್ಸ್), ಎನ್ಪಿಎ (ನ್ಯಾಷನಲ್ ಪ್ರೊಗ್ರೆಸ್ಸಿವ್ ಅಲೈನ್ಸ್), ಐಡಿಎ (ಇಂಡಿಯಾ ಡೆಮಾಕ್ರಟಿಕ್ ಅಲೈನ್ಸ್), ಯುಪಿಎ3 ಎಂಬ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ, ಮೈತ್ರಿಕೂಟದ ನಾಯಕತ್ವದ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ಬಿಹಾರ ಸಿಎಂ ನಿತೀಶ್ ಕುಮಾರ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ. ಅಂತಿಮವಾಗಿ ಮೂರ್ನಾಲ್ಕು ಸುತ್ತಿನ ಸಭೆಯ ಬಳಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಂಡಿರುವ 26 ರಾಷ್ಟ್ರೀಯ ವಿಪಕ್ಷಗಳು ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿ ಸಾಮೂಹಿಕ ಸಂಕಲ್ಪ ಮಾಡಿಕೊಂಡಿವೆ. ದ್ವೇಷ ರಾಜಕಾರಣದ ವಿರುದ್ದ ಸಾಮೂಹಿಕ ಹೋರಾಟಕ್ಕೆ ನಿರ್ಧಾರ ಕೈಗೊಂಡಿವೆ. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಕೈಗೊಳ್ಳಲಾಗಿದೆ. ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪದ ವೇಳೆ ಪ್ರಸ್ತಾಪವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ ಮಾಡುವ ನಿರ್ಣಯ ಕೈಗೊಳ್ಳಲಾಗಿದ್ದು, ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿಗಳ ರಚನೆ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಯಾವ ಯಾವ ರಾಜ್ಯ ಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ ಎಂಬ ನಿರ್ಧಾರ ಮಾಡಲು ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನಿಸಲಾಗಿದೆ. ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ಪ್ರತಿಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ