ರಾಮನಗರ: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಭಾರತೀಯ ಜನತಾ ಪಾರ್ಟಿ (BJP) ಹೀನಾಯ ಸೋಲು ಕಂಡಿದೆ. ಬಿಜೆಪಿ ರಾಜ್ಯದಲ್ಲಿ 66 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತೃಪ್ತಿಪಟ್ಟಿದೆ. ಸೋಲಿನ ಗುಂಗಿನಿಂದ ಹೊರ ಬಂದು ಮೈಕೊಡವಿಕೊಂಡು ಮತ್ತೆ ಪಕ್ಷ ಸಂಘಟನೆ ಮಾಡಲು ರಾಜ್ಯ ನಾಯಕರು ಮುಂದಾಗುತ್ತಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಂಡು ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಸರಿಯಾದ ತಂತ್ರ ಹೆಣೆಯಲು ಯೋಚಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಇದೀಗ ಬಿಜೆಪಿ ಪ್ರಾದೇಶಿಕ ಪಕ್ಷ ಜೆಡಿಎಸ್ (JDS) ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋಗಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಮಾತನಾಡಿ ಜೆಡಿಎಸ್ ಜೊತೆ ಹೊಂದಾಣಿಕೆ ಆಗಬಹುದು ಎಂದಿದ್ದಾರೆ.
ಹೌದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಡಿದ ಅವರು ಮುಂದೆ ರಾಜ್ಯ ರಾಜಕಾರಣದಲ್ಲಿ ಬಹಳ ಬದಲಾವಣೆ ಆಗುತ್ತದೆ. ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಆಗಲೇಬೇಕು. ಅತಿ ಹೆಚ್ಚು ಸಂಸದರನ್ನ ಲೋಕಸಭೆಗೆ ಕಳುಹಿಸಬೇಕು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೇಳಿದರೇ ಸ್ಪರ್ಧಿಸುತ್ತೇನೆ. ಮುಂದೆ ರಾಜ್ಯ ರಾಜಕಾರಣದಲ್ಲಿ ಬಹಳ ಬದಲಾವಣೆ ಆಗುತ್ತದೆ. ಜೆಡಿಎಸ್ ಜೊತೆ ಹೊಂದಾಣಿಕೆ ಆಗಬಹುದು. ಲೋಕಸಭೆ ಟಿಕೆಟ್ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ: ಹೊಸ ಬಾಂಬ್ ಸಿಡಿಸಿದ ಮತ್ತೋರ್ವ ಬಿಜೆಪಿ ನಾಯಕ
ಬಿಜೆಪಿ ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ನನ್ನ ಮುಂದೆ ಯಾವುದೇ ಚರ್ಚೆ ಆಗಿಲ್ಲ ರಾಜಕಾರಣದಲ್ಲಿ ಚರ್ಚೆ, ಊಹಾಪೋಹಗಳು ಸಹಜ. ಕೆಲವೊಮ್ಮೆ ಗಾಳಿ ಸುದ್ದಿಗಾಗಿ ಚರ್ಚೆ ಮಾಡುತ್ತಾರೆ. ಇದಕ್ಕೆಲ್ಲ ಚುನಾವಣೆಯ ಪ್ರಕ್ರಿಯೆ ಆರಂಭವಾದಾಗ ಉತ್ತರ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಹೇಳಿದ್ದರು.
ಲೋಕಸಭೆ ಚುನಾವಣೆಗೆ ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ. ಸ್ವಂತ ಬಲದಿಂದ ಹೋರಾಟ ಮಾಡುವ ಶಕ್ತಿ ನಮಗೆ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಖಡಕ್ ಸಂದೇಶ ರವಾನಿಸಿದ್ದರು. ಸದ್ಯ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ. ಆ ಚುನಾವಣೆಗಳ ಬಗ್ಗೆ ನಾವು ತಯಾರಿ ಮಾಡಬೇಕು ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ