ದಾವಣಗೆರೆ: ರಾಜಕೀಯ ಅಂದ್ರೆನೇ ಹಾಗೆ ಇಲ್ಲಿ ಅಕ್ಕ ತಂಗಿ, ಅಣ್ಣ ತಮ್ಮ, ಅಪ್ಪ ಮಗ ಎದುರಾಗುವುದು, ಹೋರಾಡುವುದು. ಸೋಲುವುದು ಗೆಲುವುದು ಮಾಮೂಲು. ಅದರಂತೆ ಇಲ್ಲೊಂದು ಕ್ಷೇತ್ರದಲ್ಲಿ ಅಕ್ಕಾ ತಂಗಿಯರ ಹೋರಾಟ ಶುರು ಮಾಡಿದ್ದಾರೆ. ವಿಶೇಷ ಅಂದರೆ ಇವರಿಬ್ಬರು ಒಂದೇ ಪಕ್ಷದ ಟಿಕೆಟ್ಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ಸುತ್ತಾಟ, ಪಾದಯಾತ್ರೆ, ಸಂಕಷ್ಟದಲ್ಲಿದ್ದವರಿಗೆ ಸಹಾಯ ಹೀಗೆ ಕ್ಷೇತ್ರದಲ್ಲಿ ಭರ್ಜರಿ ಮತಬೇಟೆ ಶುರುವಾಗಿದೆ. ಇವರು ಬೇರೆ ಯಾರು ಅಲ್ಲ ಮಾಜಿ ಡಿಸಿಎಂ ದಿವಂಗತ ಎಂಪಿ ಪ್ರಕಾಶ್ ಅವರ ಪುತ್ರಿಯರಾದ ಎಂಪಿ ವೀಣಾ ಮಹಾಂತೇಶ ಹಾಗೂ ಎಂಪಿ ಲತಾ ಮಲ್ಲಿಕಾರ್ಜುನ.
ಹೌದು ದಿವಂಗತ ಎಂಪಿ ಪ್ರಕಾಶ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಅವರೊಬ್ಬ ಸಾಂಸ್ಕೃತಿಕ ರಾಯಭಾರಿ ಎಂಬ ಮಾತೊಂದಿತ್ತು. ಇಂತಹ ರಾಜಕಾರಣದಲ್ಲಿ ವಿವಿಧ ಇಲಾಖೆ ಸಚಿವರಾಗಿ ನಂತರ ಉಪ ಮುಖ್ಯಮಂತ್ರಿಗಳಾಗಿದ್ದರು. ಕೊನೆಯ ಚುನಾವಣೆ 2008ರಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಅನಾರೋಗ್ಯದಿಂದ ನಿಧನರಾದರು. ನಂತರ 2013ರಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹಳ್ಳಿ ಕ್ಷೇತ್ರದಿಂದ ಎಂಪಿ ಪ್ರಕಾಶ್ ಪುತ್ರ ಎಂಪಿ ರವೀಂದ್ರ ಗೆದ್ದರು. ನಂತರ ಅವರು ಕೂಡ 2018ರಲ್ಲಿ ಸೋತು ಅನಾರೋಗ್ಯದಿಂದ ಸಾವನ್ನಪ್ಪಿದರು. ಹೀಗಾಗಿ ಇಬ್ಬರು ಸಹೋದರಿಯರು ಹರಪನಹಳ್ಳಿ ಟಿಕೆಟ್ ಮೇಲೆ ಕಣ್ಣಿಟ್ಟು ಹೋರಾಟ ಶುರುಮಾಡಿದ್ದಾರೆ.
ಅಕ್ಕ ಲತಾ ಮಲ್ಲಿಕಾರ್ಜುನ್ ನನಗೆ ಟಿಕೆಟ್ ಸಿಗುತ್ತದೆ, ಸಿಕ್ಕ ಬಳಿಕವೇ ಮಾತಾಡುವೆ ಎನ್ನುತ್ತಿದ್ದಾರೆ. ಇತ್ತ ವೀಣಾ ಮಹಾಂತೇಶ್ ಮಾತ್ರ ನನ್ನ ಪತಿ ಹಾಗೂ ಪುತ್ರನಿಗೆ ಕೊರೊನಾ ಬಂದರೂ ಅದನ್ನ ಬಿಟ್ಟು ಕ್ಷೇತ್ರದಲ್ಲಿ ದುಡಿದಿದ್ದೇನೆ. ನಾಲ್ಕು ಕಡೆ ಪಾದಯಾತ್ರೆ ಮಾಡಿರುವೆ. ನಮ್ಮ ಕ್ಷೇತ್ರದಲ್ಲಿ 90 ಸಾವಿರ ಮಹಿಳೆಯರಿದ್ದಾರೆ. ಪಕ್ಷದ ವರಿಷ್ಠರು ನಮ್ಮ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡುತ್ತಾರೆ. ಗೆಲುವು ಶತ ಸಿದ್ದ ಎನ್ನುತ್ತಿದ್ದಾರೆ.
ತಂದೆಯ ಬಳಿಕ ತಮ್ಮ, ನಂತರ ಅಕ್ಕ ತಂಗಿ ರಾಜಕೀಯ ಅಸ್ಥಿತ್ವಕ್ಕಾಗಿ ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಎಲ್ಲಿ ನೋಡಿದರು ಹರಪನಹಳ್ಳಿಯಲ್ಲಿ ವೀಣಕ್ಕ, ಲತಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೇಲಾಗಿ ಇಬ್ಬರನ್ನ ಪ್ರೀತಿಸುವ ಜನ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನ ಕಾದು ನೋಡುತ್ತಿದ್ದಾರೆ. ನಮ್ಮಕ್ಕ ಟಿಕೆಟ್ ತರುತ್ತಾಳೆ ಎಂಬ ಜಿದ್ದಾಜಿದ್ದಿ ಸುರುವಾಗಿದೆ.
ಇದನ್ನೂ ಓದಿ:ರಾಜಕೀಯ ಅಬ್ಬರಗಳ ಮಧ್ಯೆ ಟೆಕ್ಕಿ ಅಭ್ಯರ್ಥಿ ನಾಗರಾಜ ಕಲಕುಟ್ಕರ್ ಸರಳ ಪ್ರಚಾರ! ಬಾಗಲಕೋಟೆ ಮತದಾರ ಒಲಿಯುತ್ತಾನಾ?
ಅಕ್ಕ ತಂಗಿಯರ ನಡುವೆ ಮತ್ತೊಬ್ಬ ಅಭ್ಯರ್ಥಿಯ ಹೆಸರು
ಹೀಗೆ ಅಕ್ಕ ತಂಗಿಯರ ಆಟದ ನಡುವೆ ಇನ್ನೊಬ್ಬ ಅಭ್ಯರ್ಥಿಯ ಹೆಸರು ಟಿಕೆಟ್ಗಾಗಿ ಜೋರಾಗಿ ಕೇಳಿ ಬರುತ್ತಿದೆ. ಕಳೆದ ಎರಡು ಚುನಾವಣೆಯಲ್ಲಿ ಪಕ್ಷೇತರ ಜೊತೆಗೆ ಜೆಡಿಎಸ್ ನಿಂದ ಸ್ಪರ್ಧಿಸಿ 40 ಸಾವಿರ ಮತ ಪಡೆದ ಅರಸೀಕೆರಿ ಕೋಟ್ರೇಶ್. ಹೌದು ಮೇಲಾಗಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ, ಲಿಂಗಾಯತ ಸಮಾಜದ ಕೋಟ್ರೇಶ್ ಅವರಿಗೆ ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ ಬೆಂಬಲವೂ ಇದೆ.
ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆ ಮಾಡಿಲ್ಲ. 14 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೋರಾಗಿ ಓಡುತ್ತಿರುವುದು ಅಕ್ಕ ತಂಗಿಯರ ಹೆಸರು. ಈಗ ಕೋಟ್ರೇಶ್ ಹೆಸರು. ಹೀಗಾಗಿ ಹರಪನಹಳ್ಳಿ ಅಖಾಡ ಈಗ ಭಾರೀ ಚರ್ಚೆಯಲ್ಲಿದೆ. ಒಂದೇ ಪಕ್ಷದಲ್ಲಿ ಒಂದೇ ಮನೆಯ ಅಕ್ಕ ತಂಗಿಯರು ಹೋರಾಟ ನಡೆಸುತ್ತಿದ್ದು, ಇದೊಂದು ಹೈಕಮಾಂಡ್ಗೆ ತೀವ್ರ ತಲೆ ನೋವಾಗಿದ್ದು, ಟಿಕೆಟ್ ಘೋಷಣೆ ಮೇಲೆ ಎಲ್ಲರ ಚಿತ್ತವಿದೆ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ