ಡಿಕೆ ಶಿವಕುಮಾರ್ ಬೆಳಗಾವಿ ಪ್ರವಾಸ: ಸತೀಶ್ ಜಾರಕಿಹೊಳಿ ಸೈಲೆಂಟ್ ಸ್ಕೆಚ್‌‌!

| Updated By: Ganapathi Sharma

Updated on: Oct 18, 2023 | 4:27 PM

ತಮ್ಮ ಸ್ವಾಗತಕ್ಕೆ ಯಾವ ಶಾಸಕರು ಸಚಿವರು ಬಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಕಾಂಗ್ರೆಸ್ ಕಾರ್ಯಕರ್ತರ ಭೇಟಿಗೆ ಆಗಮಿಸಿದ್ದು ನಿನ್ನೆ ರಾತ್ರಿಯೇ ಬೆಳಗಾವಿ ಪ್ರವಾಸ ನಿರ್ಧಾರ ಮಾಡಿದೆ. ಸತೀಶ್ ಜಾರಕಿಹೊಳಿ ಬೆಂಗಳೂರಲ್ಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಇದು ಪೂರ್ವನಿಯೋಜಿತ ಕಾರ್ಯಕ್ರಮ ಅಲ್ಲ ಎಂದಿದ್ದಾರೆ.

ಡಿಕೆ ಶಿವಕುಮಾರ್ ಬೆಳಗಾವಿ ಪ್ರವಾಸ: ಸತೀಶ್ ಜಾರಕಿಹೊಳಿ ಸೈಲೆಂಟ್ ಸ್ಕೆಚ್‌‌!
ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Follow us on

ಬೆಳಗಾವಿ, ಅಕ್ಟೋಬರ್ 18: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಸಮಾಧಾನ ಮಧ್ಯೆಯೂ ಬೆಳಗಾವಿಗೆ ಇಂದು ಡಿಸಿಎಂ ಡಿಕೆ‌ ಶಿವಕುಮಾರ್ (DK Shivakumar) ಆಗಮಿಸಿದ್ರು‌. ನಿರೀಕ್ಷೆಯಂತೆ ಡಿಸಿಎಂ ಡಿಕೆಶಿ ಜಿಲ್ಲಾ ಪ್ರವಾಸ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗೈರಾಗಿದ್ರು. ಅಷ್ಟಕ್ಕೂ ಸತೀಶ್ ಜಾರಕಿಹೊಳಿ ಮುನಿಸಿಗೆ ಕಾರಣವೇನು? ಮಾಸ್ಟರ್‌ಮೈಂಡ್‌ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿ ಸ್ಕೆಚ್‌ ಹಾಕಿದ್ದರ ಹಿಂದಿನ ಒಳಮರ್ಮವೇನು ಎಂಬ ವಿವರ ಇಲ್ಲಿದೆ.

ಸತೀಶ್ ಮುನಿಸಿಗೆ ಕಾರಣವೇನು? ಸೈಲೆಂಟ್‌ ಸ್ಕೆಚ್ ಹಿಂದಿನ ರಹಸ್ಯವೇನು?

ಹೌದು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ, ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಕಡೆಗಣನೆ, ನಿಗಮ ಮಂಡಳಿ ಸದಸ್ಯ ಸ್ಥಾನದಲ್ಲಿ ತಮ್ಮ ಬೆಂಬಲಿಗರಿಗೆ ಕೊಕ್, ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಜಟಾಪಟಿ ಈ ಎಲ್ಲಾ ಕಾರಣದಿಂದ ಮುನಿಸಿಕೊಂಡಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿ ಸ್ಕೆಚ್ ಹಾಕಿ ಪಕ್ಷದಲ್ಲೇ ಇರುವ ವಿರೋಧಿ ಬಣಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ರು. ಉಪಮುಖ್ಯಮಂತ್ರಿ ಡಿಕೆಶಿ ಬೆಳಗಾವಿ ಪ್ರವಾಸ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗೈರಾಗಿದ್ದರು. ಮೈಸೂರಿನ ಖಾಸಗಿ ರೆಸಾರ್ಟ್‌ನಲ್ಲೇ ಉಳಿದುಕೊಳ್ಳುವ ಮೂಲಕ ಪರೋಕ್ಷ ಸಂದೇಶ ರವಾನಿಸಿದ್ರು. ಇನ್ನು ಜಿಲ್ಲೆಯ ಮತ್ತೋರ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕುಟುಂಬದ ಸಮಾರಂಭವೊಂದರ ನಿಮಿತ್ತ ಬೀಗರ ಊರಾದ ಶಿವಮೊಗ್ಗ ಜಿಲ್ಲೆ ಭದ್ರಾವತಿಗೆ ತೆರಳಿದ್ದರಿಂದ ಗೈರಾಗಿದ್ರು. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆಶಿ ಸಭೆ ನಡೆಸಿದ ವೇಳೆ ಕುಡಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್ ಹಾಗೂ ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಮಾತ್ರ ಉಪಸ್ಥಿತರಿದ್ರು.

ಇನ್ನು ತಮ್ಮ ಸ್ವಾಗತಕ್ಕೆ ಯಾವ ಶಾಸಕರು ಸಚಿವರು ಬಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಕಾಂಗ್ರೆಸ್ ಕಾರ್ಯಕರ್ತರ ಭೇಟಿಗೆ ಆಗಮಿಸಿದ್ದು ನಿನ್ನೆ ರಾತ್ರಿಯೇ ಬೆಳಗಾವಿ ಪ್ರವಾಸ ನಿರ್ಧಾರ ಮಾಡಿದೆ. ಸತೀಶ್ ಜಾರಕಿಹೊಳಿ ಬೆಂಗಳೂರಲ್ಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಇದು ಪೂರ್ವನಿಯೋಜಿತ ಕಾರ್ಯಕ್ರಮ ಅಲ್ಲ. ನಿನ್ನೆ ರಾತ್ರಿಯೇ ಬೆಳಗಾವಿಗೆ ಬರೋ ಬಗ್ಗೆ ನಿರ್ಧರಿಸಿದ್ದರಿಂದ ಯಾರಿಗೂ ಮಾಹಿತಿ ನೀಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇನ್ನು ಸಚಿವ ಸತೀಶ್ ಜಾರಕಿಹೊಳಿ ಮುನಸಿನ ಹಿಂದೆ ಇರುವ ರಹಸ್ಯ ಏನು? ಸೈಲೆಂಟ್ ಸ್ಕೆಚ್ ಹಾಕಿ ಸಾರುವ ಸಂದೇಶ ಏನು ಅಂತಾ ನೋಡೋದಾದ್ರೆ ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಕೋಲ್ಡ್ ವಾರ್ ಇದ್ದಿದ್ದನ್ನ ಸ್ವತಃ ಸತೀಶ್ ಜಾರಕಿಹೊಳಿಯೇ ಒಪ್ಪಿಕೊಂಡಿದ್ರು. ಇನ್ನು ಮತ್ತೊಂದೆಡೆ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕ ವಿಚಾರವಾಗಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನ ಸತೀಶ್ ಜಾರಕಿಹೊಳಿಯವರಲ್ಲಿತ್ತು. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರೇತರ ಸದಸ್ಯರ ನೇಮಕ ವೇಳೆ ಸತೀಶ್ ಜಾರಕಿಹೊಳಿ ತಮ್ಮ ಬೆಂಬಲಿಗ ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ. ಹೆಸರು ಶಿಫಾರಸು ಮಾಡಿ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸಹ ಪಡೆದಿದ್ರು. ಆದ್ರೆ ಅಂತಿಮ ಕ್ಷಣದಲ್ಲಿ ಪ್ರದೀಪ್ ಎಂ.ಜೆ. ಹೆಸರು ಮಿಸ್ ಆಗಿತ್ತು. ಇದರಿಂದ ಗರಂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಿಗಮ ಮಂಡಳಿ ಸದಸ್ಯ ಸ್ಥಾನ ವಿಚಾರ ದೊಡ್ಡದಲ್ಲದೇ ಇದ್ರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರಂಭದಲ್ಲೇ ತಮ್ಮ ಅಭಿಪ್ರಾಯಕ್ಕೆ ಆರಂಭದಲ್ಲೇ ಮನ್ನಣೆ ಸಿಗದಿದ್ರೆ ಮುಂದೆ ಏನಾಗುತ್ತೆ ತಮ್ಮ ಸಾಮರ್ಥ್ಯ ಏನು ಅಂತಾ ಸಾಬೀತು ಪಡಿಸಲು ಬೆಂಬಲಿಗ ಶಾಸಕರ ಪಡೆ ಕಟ್ಟಿಕೊಂಡು ಮೈಸೂರು ಪ್ರವಾಸಕ್ಕೆ ನಿರ್ಧರಿಸಿದ್ದರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಪ್ರವಾಸ ಮುಂದೂಡಿದ್ದಾರೆ.

ಇದನ್ನೂ ಓದಿ: ಅಸಮಾಧಾನ ಸ್ಫೋಟ: ಬೆಳಗಾವಿಗೆ ಬಂದ ಡಿಕೆ ಶಿವಕುಮಾರ್​ಗೆ ಟ್ರೈಲರ್​ ತೋರಿಸಿದ ಸತೀಶ್ ಜಾರಕಿಹೊಳಿ

ಇನ್ನು ಸತೀಶ್ ಜಾರಕಿಹೊಳಿ ಹಾಗೂ ಡಿಸಿಎಂ ಡಿಕೆಶಿ ಮುಸುಕಿನ ಗುದ್ದಾಟ ಮಧ್ಯೆ ಬೆಳಗಾವಿಯ 10 ಕಾಂಗ್ರೆಸ್ ಶಾಸಕರು ಡಿಕೆಶಿ ಬೆಳಗಾವಿ ಪ್ರವಾಸ ವೇಳೆ ಗೈರಾಗಿದ್ದಾರೆ. ಇಬ್ಬರ ಜಟಾಪಟಿ ಮಧ್ಯೆ ತಟಸ್ಥರಾಗಿ ಉಳಿಯಲು ಹಲವರು ನಿರ್ಧರಿಸದಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಇನ್ನು ತಮ್ಮನ್ನು ಕಡೆಗಣಿಸಿದರೆ ಏನಾಗುತ್ತೆ ಎಂಬ ಪರೋಕ್ಷ ಸಂದೇಶ ರವಾನಿಸುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ ಎಂಬ ಚರ್ಚೆ ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ನಡೆಯುತ್ತಿದೆ‌.

ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬೆಳಗಾವಿ ಬೇಗುದಿ ಕಂಟಕವಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಎಲ್ಲವನ್ನೂ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಸರಿದೂಗಿಸಿಕೊಂಡು ಹೋಗುತ್ತೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ