ಕೋಲಾರ: ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕೋಲಾರ (Kolar) ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ (Krishna Reddy) ಅವರಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದೆ. ಹಾಗಂತ ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಜನವರಿ 25ರಂದು ಕೃಷ್ಣಾರೆಡ್ಡಿ ಮನೆಗೆ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ಭೇಟಿ ನೀಡಿದ್ದು, ಈ ವೇಳೆ ವರ್ತೂರ್ ಪ್ರಕಾಶ್ (Varthur Prakash) ಸಮ್ಮುಖದಲ್ಲೇ ಕೃಷ್ಣಾರೆಡ್ಡಿಗೆ ಟಿಕೆಟ್ ಆಫರ್ ನೀಡಲಾಗಿದೆ. ನಾವೇ ದುಡ್ಡು ಕೊಡುತ್ತೇವೆ, ನೀವು ಚುನಾವಣೆಗೆ ಸ್ಪರ್ಧಿಸಿ ಎಂದು ಆಫರ್ ನೀಡಿರುವುದಾಗಿ ಶಾಸಕರು ಹೇಳುವ ಮೂಲಕ ಕ್ಷೇತ್ರದ ರಾಜಕೀಯ ಕುತೂಹಲವನ್ನು ಇನ್ನಷ್ಟು ಕೆರಳಿಸಿದಂತಾಗಿದೆ.
ಸಿದ್ದರಾಮಯ್ಯ ವಿರುದ್ದ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆಯಲ್ಲಿ ಬಿಜೆಪಿ ಇದೆ. ಹೀಗಿದ್ದಾಗಲೂ ಕೃಷ್ಣಾರೆಡ್ಡಿಗೆ ಸಚಿವ ಸುಧಾಕರ್ ಬಿಜೆಪಿ ಟಿಕೆಟ್ ಆಫರ್ ನೀಡಿದ್ದು ಯಾಕೆ? ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮನೆಗೆ ಹೋಗಿದ್ದು ಯಾಕೆ? ಎಂದು ಬಿಜೆಪಿ ನಾಯಕರು ಹಾಗೂ ಸಚಿವ ಸುಧಾಕರ್ಗೆ ಶಾಸಕ ಶ್ರೀನಿವಾಸಗೌಡ ಪ್ರಶ್ನೆ ಮಾಡಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದು, ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಹೇಳಿದರು.
ಇದನ್ನೂ ಓದಿ: ಜೆಡಿಎಸ್ ಪಕ್ಷವನ್ನು ಪದೇ ಪದೇ ಕೆಣಕುತ್ತಿದ್ದಾರೆ, ಹೀಗೆ ಮಾಡಿದ್ರೆ ಸಿದ್ದರಾಮಯ್ಯ ಮನೆಗೆ ಹೋಗಬೇಕಾಗುತ್ತೆ: ಕುಮಾರಸ್ವಾಮಿ
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಮೇಲಾಟ ಜೋರಾಗಿದೆ. ಅದರಲ್ಲೂ ಈ ಬಾರಿ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾಗಿರುವ ಕೋಲಾರ ಕಣ ದಿನದಿಂದ ದಿನಕ್ಕೆ ರಂಗೇರಿದ್ದು, ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇದೊಂದು ಬಾರಿ ಸಿಎಂ ಆಗಲೇಬೇಕೆಂದು ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಸೋಲಿಸುಲು ಬಿಜೆಪಿ ಹಾಗೂ ಜೆಡಿಎಸ್ ರಣತಂತ್ರಗಳನ್ನು ಹೆಣೆಯುತ್ತಿವೆ.
ಸಿದ್ದರಾಮಯ್ಯ ಅಗ್ನಿ ಪರೀಕ್ಷೆ ಎದುರಿಸುವುದಕ್ಕೆ ಚಿನ್ನದ ನಾಡಿನತ್ತ ಮುಖ ಮಾಡಿದ್ದಾರೆ. ಸಿದ್ದರಾಮಯ್ಯ ಗೆಲ್ಲಬೇಕು ಎಂದು ಐದು ಮಂದಿ ಹೆಗಲು ಕೊಟ್ಟು ನಿಂತರೆ, ದಿಕ್ಕು ದಿಕ್ಕುಗಳಿಂದಲೂ ಟಗರು ಹಣಿಯೋಕೆ ಬಿಗ್ ಸ್ಕೆಚ್ ರೆಡಿಯಾದಂತೆ ಕಾಣುತ್ತಿದೆ. ಹೀಗಾಗಿಯೇ ಸಿದ್ದರಾಮಯ್ಯಗೆ ಆತಂಕ ಶುರುವಾಗಿದೆಯಂತೆ. ಕೋಲಾರದಲ್ಲಿ ಕುರುಬ ಸಮುದಾಯ ಸಿದ್ದುಗೆ ವಿರುದ್ಧವಾಗಿರುವುದರಿಂದ ಕುರುಬ, ದಲಿತ ಅಲ್ಪಸಂಖ್ಯಾತ ಮತಗಳು ಡಿವೈಡ್ ಆದ್ರೆ ಗೆಲುವು ಕಷ್ಟ ಎಂದು ಯೋಚಿಸುತ್ತಿದ್ದಾರೆ. ಅಲ್ಲದೇ, ಕಾಂಗ್ರೆಸ್‌ನ ಒಳಬೇಗುದಿ ಇನ್ನೂ ಕುದಿಯುತ್ತಿದೆ. ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಿದ್ದ ಸಿದ್ದರಾಮಯ್ಯ, 50 ಸಾವಿರ ಜನ ಸೇರಿಸಿ ಎದುರಾಳಿಗೆ ಟಕ್ಕರ್ ಕೊಡುವ ಪ್ಲ್ಯಾನ್‌ನಲ್ಲಿದ್ದರು. ಆದ್ರೆ, ನಿರೀಕ್ಷೆಯಂತೆ ಜನ ಸೇರಿರಲಿಲ್ಲ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Mon, 13 February 23