ಮದರಸಾ ಬ್ಯಾನ್ ಮಾಡಲು ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದೇ ಇಲ್ಲವಲ್ಲ: ಕುಮಾರಸ್ವಾಮಿ

|

Updated on: Mar 17, 2023 | 4:41 PM

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮದರಸಾಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ​ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಬಿಜೆಪಿ ಅಧಿಕಾರಕ್ಕೇ ಬರುವುದೇ ಇಲ್ಲವಲ್ಲ ಎಂದು ಹೇಳಿದ್ದಾರೆ.

ಮದರಸಾ ಬ್ಯಾನ್ ಮಾಡಲು ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದೇ ಇಲ್ಲವಲ್ಲ: ಕುಮಾರಸ್ವಾಮಿ
ಬಸನಗೌಡ ಪಾಟೀಲ್ ಯತ್ನಾಳ್, ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿ.ಟಿ.ರವಿ
Follow us on

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪದಲ್ಲಿ ಮದರಸಾ ಬ್ಯಾನ್ (Madrasa Ban) ಹಾಗೂ ಟಿಪ್ಪು ಕೊಂದ ಉರಿಗೌಡ, ದೊಡ್ಡ ನಂಜೇಗೌಡ ವಿಚಾರ (Uri Gowda-Dodda Nanjegowda Controversy) ಭಾರೀ ಚರ್ಚೆ ನಡೆಯುತ್ತಿದ್ದು, ರಾಜಕೀಯವಾಗಿ ಆರೋಪ-ಪ್ರತ್ಯಾರೋಪ, ಟೀಕಾ ಪ್ರಹಾರಗಳು ನಡೆಯುತ್ತಿವೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದರಸಾಗಳನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಅಧಿಕಾರಕ್ಕೆ ಬಂದರೆ ತಾನೇ ನಿಷೇಧಿಸುವುದು ಎಂದು ತಿರುಗೇಟು ನೀಡಿದರು. ಜಿಲ್ಲೆಯ ಸಕಲೇಶಪುರ ತಾಲೂಕಿನ ಶುಕ್ರವಾರಸಂತೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ. ಬಿಜೆಪಿಯವರು ಹೋಗುತ್ತಿರುವ ಮಾರ್ಗ ನೋಡಿದರೆ ಹಾಗನ್ನಿಸುತ್ತದೆ. ಏನಾದರೂ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೆ ಉಳಿಯುತ್ತಾರೆ ಎಂದರು.

ಸಚಿವ ಮುನಿರತ್ನ ಬ್ಯಾನರ್‌ನಲ್ಲಿ ಉರಿಗೌಡ ನಂಜೇಗೌಡ ಟೈಟಲ್ ರಿಜಿಸ್ಟರ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಈ ಸಮಾಜಕ್ಕೆ ಕಳಂಕ ಬರುವ ರೀತಿಯಲ್ಲಿ ಈಗಾಗಲೇ ಸೃಷ್ಟಿ ಮಾಡಿಕೊಂಡಿದ್ದಾರೆ. ನಮ್ಮ ಸಮಾಜದವರು ಹಿಂಬದಿಯಿಂದ ಚೂರಿ ಹಾಕುವವರಲ್ಲ. ನೇರವಾಗಿ ಹೋರಾಟ ಮಾಡುವಂತಹವರು. ಈಗೀನ ರಾಜಕಾರಣದಲ್ಲಿ ಜನತೆಯ ಸಂಪತ್ತನ್ನು ಲೂಟಿ ಮಾಡಿದಾಗ, ಜಾತಿಯ ಹೆಸರನ್ನು ರಕ್ಷಣೆ ತೆಗೆದುಕೊಳ್ಳಲು ಹೋದಾಗ ಜನತೆಯ ರಕ್ಷಣೆಗೋಸ್ಕರವಾಗಿ, ಜನತೆಯ ಹಣ ಲೂಟಿ ಮಾಡುವ ವಿಷಯದಲ್ಲಿ ಜಾತಿಯ ಸ್ವಪ್ರೇಮಕ್ಕೆ ಒಳಗಾಗದೆ ಈ ನಾಡಿನ ಜನತೆಯ ಆಸ್ತಿ ಉಳಿಸಲು ರಾಜಿಗೆ ಒಳಗಾಗದ ಸಮಾಜ ಎಂದರು.

ಇದನ್ನೂ ಓದಿ: HD Kumaraswamy: ಉರಿಗೌಡ ನಂಜೇಗೌಡ ಸಿನಿಮಾ ಮಾಡಿ ಒಕ್ಕಲಿಗರ ಗೌರವ ಮೂರಾಬಟ್ಟೆ ಮಾಡಲು ಹೊರಟಿದೆ ಬಿಜೆಪಿ; ಕುಮಾರಸ್ವಾಮಿ ಕಿಡಿ

ಇದು ನಮ್ಮ ಸಮಾಜ, ಇಂದಿನ ನಾಡಿನ ಸಂಪತ್ತು. ಯಾರೂ ಕಾನೂನುಬಾಹಿರವಾಗಿ ಹಾಳುಮಾಡಲು ಹೋಗುತ್ತಾರೋ ಅಂತಹವರ ವಿರುದ್ಧ ಹೋರಾಟ ಮಾಡುವ ಕೆಚ್ಚೆದೆ ಇರುವ ಸಮಾಜ ಇದು. ಅಯ್ಯೋ ನಮ್ಮವನು, ಲೂಟಿ ಮಾಡಿರಲಿ, ಕೊಲೆ ಮಾಡಿರಲಿ ಉಳಿಸಿಕೊಳ್ಳಬೇಕು ಎನ್ನುವ ಗುಣದಲ್ಲಿ ಬಂದ ಸಮಾಜ ಅಲ್ಲ. ನ್ಯಾಯಕ್ಕೆ, ಧರ್ಮಕ್ಕೆ, ಸತ್ಯಕ್ಕೆ ಹೋರಾಟ ಮಾಡಿರುವ ಸಮಾಜ ಇದು. ಈ ಸಮಾಜದಲ್ಲಿ ಇಲ್ಲದೇ ಇರುವ ಹೆಸರುಗಳನ್ನು ಸೃಷ್ಟಿ ಮಾಡಿ ಈ ಸಮಾಜಕ್ಕೆ ಅಗೌರವ ತರುವ ಇಂತಹ ಕೀಳುಮಟ್ಟದ ರಾಜಕಾರಣಿಗಳ ಬಗ್ಗೆ ಜನ ಅಷ್ಟು ಸುಲಭವಾಗಿ ಬಿಡಲ್ಲ ಸರ್ವನಾಶ ಮಾಡುತ್ತಾರೆ ಎಂದರು.

ಉರಿಗೌಡ ನಂಜೇಗೌಡರ ಬಗ್ಗೆ ಕುಮಾರಸ್ವಾಮಿಗೆ ಬಿಜೆಪಿ ನಾಯಕ ಸಿಡಿ ಕೊರಿಯರ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 1940 ಆಗಿದೆಯೋ ಅಥವಾ 1840 ರಲ್ಲಿ ಆಗಿತ್ತೋ, ಇಲ್ಲಾ ಟಿಪ್ಪು ಸತ್ತ ದಿನ ಬರದಿದ್ದಾರೆಯೇ ಎಂದು ನೋಡೋಣ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಮುಂದೆ ಏನು ಮಾಡಬೇಕು ಅನ್ನುವುದು ಗೊತ್ತಿದೆ. ಇಂತಹ ಕೀಳುಮಟ್ಟದ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಲ್ಲ. ನಾವು ಇದನ್ನು ಧೈರ್ಯವಾಗಿ ಎದುರಿಸುತ್ತೇವೆ. ಹೆದರಿ ಹಿಂದಕ್ಕೆ ಓಡುವ ಪ್ರಶ್ನೇಯೇ ಇಲ್ಲಾ. ಸಿ.ಟಿ.ರವಿ ಅಂತಹವರು ಕಾಂಗ್ರೆಸ್‌ನವರ ಜೊತೆ ಏನಾದರು ಆಟ ಆಡಬಹದು. ಅವರು ಇಲ್ಲಿ‌ ಜನತಾದಳದ ಜೊತೆ ಆಡಲು ಸಾಧ್ಯವಿಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Fri, 17 March 23