ಬೆಂಗಳೂರು: ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ (ಸೆ 23) ಯಾವುದೇ ಮಹತ್ವದ ಚರ್ಚೆ ನಡೆಯಲಿಲ್ಲ. ಬೆಂಗಳೂರು ನೆರೆ, ಪಿಎಸ್ಐ ನೇಮಕಾತಿ ಅಕ್ರಮ, ಲಗ್ಗೆರೆ ಆಸ್ತಿ ಕಬಳಿಕೆ ಬಗ್ಗೆ ಕೆಲವರು ಪ್ರಸ್ತಾಪಿಸಿದರಾದರೂ ಅರ್ಥಪೂರ್ಣ ಚರ್ಚೆಗಳು ಸಾಧ್ಯವಾಗಲಿಲ್ಲ. ಬಿಎಂಎಸ್ ಟ್ರಸ್ಟ್ ಡೀಡ್ ವಿಚಾರದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿದ್ದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೊನೆಯವರೆಗೂ ಹಿಡಿದ ಪಟ್ಟು ಸಡಿಲಿಸಲಿಲ್ಲ, ಸರ್ಕಾರವೂ ಈ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸಲಿಲ್ಲ. ಕೊನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಆನೆ ಹಾವಳಿ ಕುರಿತು ಸದನದಲ್ಲಿ ಚರ್ಚೆಯೇನೋ ನಡೆಯಿತು. ಆದರೆ ಸರ್ಕಾರವು ಸಮರ್ಪಕ ತೀರ್ಮಾನವನ್ನೇ ಪ್ರಕಟಿಸಲಿಲ್ಲ. ಪಂಚಮಸಾಲಿ ಮೀಸಲಾತಿ ಕುರಿತು ಚರ್ಚೆ ನಡೆಯಿತಾದರೂ ಯಾವುದೇ ತೀರ್ಮಾನ ಹೊರಬೀಳಲಿಲ್ಲ. 40 ಪರ್ಸೆಂಟ್ ಆರೋಪದ ಬಗ್ಗೆ ಆಗೀಗ ಚರ್ಚೆಗಳೇನೋ ನಡೆಯಿತು. ಆದರೆ ಅಧಿಕೃತವಾಗಿ ಅವಧಿ ಘೋಷಿಸಿ ಚರ್ಚೆ ನಡೆಸಲು ಸ್ಪೀಕರ್ ಮನಸ್ಸು ಮಾಡಲಿಲ್ಲ.
ಬೆಂಗಳೂರು ಒತ್ತುವರಿ ತೆರವು ಕುರಿತು ಗಂಟೆಗಟ್ಟಲೆ ಚರ್ಚೆ ನಡೆಯಿತಾದರೂ ಯಾವುದೇ ಖಚಿತ ನಿಲುವನ್ನು ಸರ್ಕಾರ ಪ್ರಕಟಿಸಲಿಲ್ಲ. ಒತ್ತುವರಿ ತೆರವು ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಈ ವಿಚಾರದಲ್ಲಿಯೂ ಅಧಿಕೃತ ದಾಖಲೆಗಳನ್ನು ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡಲಿಲ್ಲ. ಸರ್ಕಾರವೂ ಕೊನೆಯವರೆಗೂ ಅಧಿಕೃತವಾಗಿ ತನ್ನ ನಿಲುವು ಇಂಥದ್ದು ಎಂದು ಬಹಿರಂಗಪಡಿಸಲಿಲ್ಲ.
ಸಿಎಂ ಬೊಮ್ಮಾಯಿ ವಿರುದ್ಧ ಪೇಸಿಎಂ ಆರೋಪ ಕುರಿತಂತೆಯೂ ಸದನದಲ್ಲಿ ಗಂಭೀರ ನಡೆಯಲಿಲ್ಲ.. ಆತ್ಮಸಾಕ್ಷಿಯ ಮಾತುಗಳಿಗಷ್ಟೇ ಚರ್ಚೆ ಸೀಮಿತವಾಯಿತು. ವಾಲ್ಮೀಕಿ ಸಮುದಾಯದ ಮೀಸಲಾತಿ ಬಗ್ಗೆ ಕಲಾಪದ ಕೊನೆಯ ದಿನ, ಕೊನೆಯ ಕ್ಷಣದಲ್ಲಿ ಸಚಿವರು ಮತ್ತು ಸ್ಪೀಕರ್ ತುಟಿಬಿಚ್ಚಿದರು. ಈ ಸಂಬಂಧ ಸರ್ವಪಕ್ಷ ಸಭೆ ಕರೆಯುವ ಸರ್ಕಾರದ ನಿಲುವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲ ಸೂಚಿಸಿದವು.
ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಜೆಡಿಎಸ್ ನಡೆಸುತ್ತಿರುವ ಧರಣಿಗೆ ಕಾಂಗ್ರೆಸ್ ನೇರ ಬೆಂಬಲ ಕೊಡಲಿಲ್ಲ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಸರ್ಕಾರದ ವಿರುದ್ಧ ಹರಿಹಾಯ್ದರು. ಇದರಿಂದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ವಿರುದ್ಧದ ಜೆಡಿಎಸ್ ಹೋರಾಟಕ್ಕೆ ಬಲ ಬಂದಂತೆ ಆಗಿತ್ತು. ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಘೋಷಿಸುವವರೆಗೂ ಜೆಡಿಎಸ್ ನಾಯಕರು ಹಿಡಿದ ಪಟ್ಟು ಸಡಿಲಿಸಲಿಲಲ್ಲ.
ಆದರೆ ಬಿಜೆಪಿಯ ಇತರ ಶಾಸಕರು ಮತ್ತು ಸಚಿವರು ಈ ವಿಚಾರದಲ್ಲಿ ಸಚಿವ ಅಶ್ವತ್ಥ ನಾರಾಯಣ ಪರವಾಗಿ ಬಲವಾಗಿ ನಿಲ್ಲಲಿಲ್ಲ. ಅಶ್ವತ್ಥ ನಾರಾಯಣ ಏಕಾಂಗಿಯಾಗಿ ಕುಮಾರಸ್ವಾಮಿಗೆ ತಿರುಗೇಟು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂದು ಬಿಎಂಎಸ್ ಟ್ರಸ್ಟ್ ಡೀಡ್ ತನಿಖೆ ಬಗ್ಗೆ ಇಂದೂ ಸಹ ಸದನದಲ್ಲಿ ಬೊಮ್ಮಾಯಿ ಮೌನವಾಗಿದ್ದರು. ಸದನ ನಡೆಯಲು ಎಚ್.ಡಿ.ಕುಮಾರಸ್ವಾಮಿ ಅವರ ಧರಣಿ ಅಡ್ಡಿಯಾದ ಹಿನ್ನೆಲೆಯಲ್ಲಿ ತಮ್ಮ ಕಚೇರಿಗೆ ಕರೆದು ಸಂಧಾನ ನಡೆಸುವ ಪ್ರಯತ್ನವನ್ನೂ ಮಾಡಿದರು. ಅದರಿಂದಲೂ ನಿರೀಕ್ಷಿತ ಲಾಭವಾಗಲಿಲ್ಲ.
ಆಡಳಿತ ಮತ್ತು ಪ್ರತಿಪಕ್ಷಗಳ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಹಲವು ಗಮನ ಸೆಳೆಯುವ ಸೂಚನೆಗಳಿಗೆ ಉತ್ತರಗಳನ್ನು ಕೊಡಲಲಾಯಿತು. ಭೂ ಸಾರಿಗೆ ಪ್ರಾಧಿಕಾರ ವಿಧೇಯಕವನ್ನೂ ತರಾತುರಿಯಲ್ಲಿ ಮಂಡಿಸಲಾಯಿತು.
Published On - 2:27 pm, Fri, 23 September 22